ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 5ರಂದು ಸಂಪೂರ್ಣ ಲಾಕ್ ಡೌನ್ ಇದ್ದು, ಅಗತ್ಯವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧಾಲಯ, ಆಸ್ಪತ್ರೆ ಹೊರತುಪಡಿಸಿ ಉಳಿದ ಯಾವ ಸೇವೆಯೂ ದೊರಕುವುದಿಲ್ಲ. ಸೋಂಕು ಪ್ರಕರಣಗಳು ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಈ ಮುಂಜಾಗರೂಕತೆ ಕ್ರಮ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಕರ್ಫ್ಯೂ ಆರಂಭಗೊಂಡಿದೆ. ಶನಿವಾರ ರಾತ್ರಿಯೇ ಮಂಗಳೂರು ನಗರಕ್ಕೆ ವಾಹನಗಳ ಪ್ರವೇಶವನ್ನು ಪೊಲೀಸರು ನಿರ್ಬಂಧಿಸುತ್ತಿದ್ದಾರೆ. ಮಂಗಳೂರಿನ ನಗರದ ವಿವಿಧ ಕಡೆ ನಾಕಾ ಬಂಧಿ ಮಾಡಲಾಗಿದ್ದು, ತುರ್ತು ವಾಹನಗಳಿಗೆ ಮಾತ್ರ ಪ್ರವೇಶಿಸಲು ಹಾಗೂ ಮಂಗಳೂರಿನಿಂದ ಹೊರ ಹೋಗಲು ಮಾತ್ರ ಸ್ವಲ್ಪ ಹೊತ್ತು ಅವಕಾಶ ನೀಡಲಾಗಿದೆ. ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಶನಿವಾರ ರಾತ್ರಿ ಕಂಡುಬಂದಿತ್ತು.