ರಾಜ್ಯದಲ್ಲಿ ಇಂದು ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ ಸಿಂಹಪಾಲು ಉಡುಪಿಯದ್ದಾಗಿದೆ. ಒಟ್ಟು 515 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ 482 ಕೇಸ್ ಗಳು ಅಂತಾರಾಜ್ಯ ಪ್ರಯಾಣಿಕರದ್ದು. ಇವುಗಳ ಪೈಕಿ ಉಡುಪಿಯದ್ದೇ ಜಾಸ್ತಿ.
ಉಡುಪಿ ಜಿಲ್ಲೆ ಮತ್ತೊಮ್ಮೆ ಕೊರೊನಾ ಸೋಂಕಿತರ ಪ್ರಕರಣ ಸಂಖ್ಯೆಯಲ್ಲಿ ಅಗ್ರಪಟ್ಟದಲ್ಲಿದೆ. ಅದರಲ್ಲೂ ಶುಕ್ರವಾರ ಒಂದೇ ದಿನ 204 ಮಂದಿಗೆ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 768ಕ್ಕೇರಿದಂತಾಗಿದೆ. ಅವುಗಳಲ್ಲಿ 82 ಮಂದಿಯಷ್ಟೇ ಬಿಡುಗಡೆ ಹೊಂದಿದ್ದು, ಒಟ್ಟು 685 ಮಂದಿ ಒಂದೇ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಹೊರರಾಜ್ಯಗಳಿಂದ ಬಂದವರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇಂದು 8 ಮಂದಿಗೆ ಕೊರೊನಾ ಪಾಸಿಟಿವ್ ಗೊತ್ತಾಗಿದ್ದು, ಹೆಚ್ಚಿನವರು ಹೊರರಾಜ್ಯಗಳಿಂದ ಬಂದವರು.
ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4835ಕ್ಕೇರಿದೆ. ಸೋಂಕಿನ ಸಂಖ್ಯೆ ಹೀಗೆಯೇ ಮುಂದುವರಿದರೆ ನಾಳೆಯೇ 5 ಸಾವಿರ ಗಡಿ ತಲುಪಿದರೂ ಅಚ್ಚರಿ ಇಲ್ಲ. ಒಟ್ಟು ಸಕ್ರಿಯ ಪ್ರಕರಣಗಳು 3088 ಆಗಿದ್ದು, 1688 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇವಿಷ್ಟು ಈಗಿನ ಮಾಹಿತಿ.