ಮತ್ತಷ್ಟು ವಿವರಗಳಿಗೆ ಕ್ಲಿಕ್ ಮಾಡಿರಿ
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಮಾಸ್ಕ್ ಹಾಕಿ ಬಂದವರ ಜೊತೆಗಷ್ಟೇ ವ್ಯವಹಾರ ನಡೆಸುವುದು ಹಾಗೂ ಮೇ.18ರಿಂದ 25ವರೆಗೆ ಫ್ಯಾನ್ಸಿ, ಬಟ್ಟೆ, ಚಪ್ಪಲಿ ಅಂಗಡಿ ಬಂದ್ ಮಾಡುವುದರ ಕುರಿತು ತೀರ್ಮಾನಿಸಿದೆ.
ಈ ಕುರಿತು ಸಂಘ ವಿಶೇಷ ಸಭೆಯೊಂದನ್ನು ನಡೆಸಿತು. ಪ್ರತಿದಿನವೂ ಮಧ್ಯಾಹ್ನ 2 ಗಂಟೆ ಬಳಿಕ ಅಂಗಡಿ ಮುಚ್ಚುವುದು ಅಥವಾ ತೆರೆಯುವುದು ವ್ಯಾಪಾರಿಯ ಇಚ್ಛೆಗೆ ಬಿಟ್ಟದ್ದು. ಹಾಗೂ ಪಟ್ಟಣ ಪಂಚಾಯತ್ ನಿರ್ಧಾರಗಳನ್ನು ಬೆಂಬಲಿಸಲಾಗುವುದು ಎಂದು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ. ಸಭೆಯಲ್ಲಿ ತಿಳಿಸಿದರು.ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿ, ಮೇ 17ರೊಳಗೆ ಇನ್ನೂ ಕೆಲವು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅದಕ್ಕೆ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು. ಗೌರವಾಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ಕೋಶಾಧಿಕಾರಿ ಆಂಟನಿ ಲೋಬೋ ಉಪಸ್ಥಿತರಿದ್ದರು. ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಅನಂತಪ್ರಸಾದ್, ರಶೀದ್ ವಿಟ್ಲ, ವಿ.ಎಸ್.ಇಬ್ರಾಹಿಂ, ಅಚ್ಯುತ, ಆರ್.ಎಸ್.ಲಕ್ಷ್ಮಣ ಪೂಜಾರಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್ ನಿರ್ಣಯಗಳನ್ನು ಮಂಡಿಸಿ, ವಂದಿಸಿದರು. ಇದಕ್ಕೂ ಮೊದಲು ವಿಟ್ಲ ಮತ್ತು ಬಂಟ್ವಾಳದ ಮುಸ್ಲಿಂ ವ್ಯಾಪಾರಿಗಳು ಇದೇ ರೀತಿಯ ನಿರ್ಣಯ ಕೈಗೊಂಡಿದ್ದು, ಇದೀಗ ವಿಟ್ಲದ ಎಲ್ಲ ಸಮುದಾಯದವರೂ ಜತೆಯಾಗಿ ನಿರ್ಧಾರ ಕೈಗೊಂಡಂತಾಗಿದೆ.