ಬಂಟ್ವಾಳ ತಾಲೂಕಿನ ಬಟ್ಟೆ, ಚಪ್ಪಲಿ, ಫ್ಯಾನ್ಸಿ ಮಳಿಗೆಗಳನ್ನು ರಮಝಾನ್ ತಿಂಗಳು ಮುಕ್ತಾಯವಾಗುವ ತನಕ ತೆರೆಯದೇ ಇರಲು ಬಂಟ್ವಾಳ ಮತ್ತು ವಿಟ್ಲದ ಮುಸ್ಲಿಂ ವರ್ತಕರು ತೀರ್ಮಾನಿಸಿದ್ದಾರೆ. ಕೊರೊನಾ ವಿರುದ್ಧ ಜಾಗೃತಿ ಹಾಗೂ ಎಚ್ಚರದಿಂದಿರಲು ತೀರ್ಮಾನ ಕೈಗೊಂಡಿದ್ದಾರೆ.
ರಮಝಾನ್ ಮುಗಿಯುವವರೆಗೆ ತಮ್ಮ ಬಟ್ಟೆ, ಚಪ್ಪಲಿ, ಫ್ಯಾನ್ಸಿ ಮಳಿಗೆಗಳನ್ನು ತೆರೆಯದೇ ಇರಲು ಬಂಟ್ವಾಳ ತಾಲೂಕಿನ ಸುಮಾರು 70 ವರ್ತಕರು ನಿರ್ಧರಿಸಿದ್ದಾರೆ. ಭಾನುವಾರ ಪಾಣೆಮಂಗಳೂರಿನ ಆಲಡ್ಕ ಎಸ್.ಎಸ್.ಆಡಿಟೋರಿಯಂನಲ್ಲಿ ಸಭೆ ನಡೆಸಿದ ಅವರು, ಕೊರೊನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ಸ್ವಯಂ ಜಾಗೃತಿ ಮೂಡಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ವರ್ತಕ ಮುಂದಾಳು ಪಿ.ಎ.ರಹೀಂ ಅವರ ನೇತೃತ್ವದಲ್ಲಿ ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ, ಪಾಣೆಮಂಗಳೂರು, ಆಲಡ್ಕ, ಮೆಲ್ಕಾರ್, ಕಲ್ಲಡ್ಕ ಪ್ರದೇಶದ ಸುಮಾರು 70 ವರ್ತಕರು ಒಮ್ಮತದ ತೀರ್ಮಾನಕ್ಕೆ ಬಂದು ವ್ಯಾಪಾರ ನಡೆಸದಿರಲು ತೀರ್ಮಾನಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈದ್ ಹಬ್ಬವನ್ನು ಸರಳವಾಗಿ ಆಚರಿಸಲು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವರ್ತಕರ ಮುಂದಿನ ನೋವು-ನಲಿವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸುಮಾರು 12 ಮಂದಿಯ ಸಮಿತಿಯನ್ನೂ ರಚಿಸಲಾಗಿದೆ ಎಂದು ಪಿ.ಎ.ರಹೀಂ ತಿಳಿಸಿದ್ದಾರೆ.
ವಿಟ್ಲದಲ್ಲೂ ತೀರ್ಮಾನ: ವಿಟ್ಲದಲ್ಲಿ ರಮಝಾನ್ ಮುಗಿಯುವವರೆಗೆ ಅಂಗಡಿಗಳನ್ನು ತೆರೆಯದೇ ಇರಲು ಮುಸ್ಲಿಂ ಸಮುದಾಯದ ವರ್ತಕರು ತೀರ್ಮಾನಿಸಿದ್ದಾರೆ. ಟೆಕ್ಸ್ ಟೈಲ್ಸ್, ರೆಡಿಮೇಡ್ ವಸ್ತ್ರದ ಅಂಗಡಿಗಳನ್ನು, ಫ್ಯಾನ್ಸಿ-ಕಾಸ್ಮೆಟಿಕ್ಸ್ ಅಂಗಡಿಗಳು ಫೂಟ್ ವೇರ್ ಶಾಪ್ ಗಳನ್ನು ಹಾಗೂ ಟೈಲರ್ ಅಂಗಡಿಯನ್ನು ರಂಝಾನ್ ತಿಂಗಳು ಮುಗಿಯುವ ತನಕ ಸಂಪೂರ್ಣ ಬಂದ್ ಮಾಡುವುದು. ಮೊಬೈಲ್ ಶಾಪ್, ಜ್ಯುವೆಲ್ಲರಿ, ಬ್ಯಾಗ್, ವಾಚ್, ಫರ್ನಿಚರ್ಸ್, ಎಲೆಕ್ಟ್ರಾನಿಕ್ಸ್ ಮೊದಲಾದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರ ತನಕ ಮಾತ್ರ. ಸಾಮಾಜಿಕ ಅಂತರ ನಿಯಮವನ್ನು ಕಾಯ್ದುಕೊಂಡು ತೆರೆಯುವುದು ದಿನಬಳಕೆ ವಸ್ತುಗಳಾದ ದಿನಸಿ, ತರಕಾರಿ, ಹಣ್ಣುಹಂಪಲು, ಮೀನು, ಮಾಂಸ, ಹಾಲು, ಮೆಡಿಕಲ್, ಹಾರ್ಡ್ವೇರ್, ಮೆಕ್ಯಾನಿಕ್ ವರ್ಕ್ಸ್ ಅಂಗಡಿಗಳನ್ನು ಸರಕಾರ/ಜಿಲ್ಲಾಡಳಿತದ ನಿಯಮ ಪ್ರಕಾರ ತೆರೆದಿಡುವುದು ಎಂದು ಎಂದು ವಿಟ್ಲದಲ್ಲಿ ತೀರ್ಮಾನಿಸಲಾಗಿದೆ.