ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5875 ಮಂದಿ ಹೋಂ ಕ್ವಾರಂಟೈನ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೊಂದಿದವರ ಸಂಖ್ಯೆ 9ಕ್ಕೆ ಏರಿದೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 49 ವರ್ಷದ ನಿವಾಸಿಯೊಬ್ಬರು ಮಾ.20ರಂದು ದುಬೈನಿಂದ ಅರಬ್ ಎಂಬಾರಿಸ್ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ಖಾಸಗಿ ವಾಹನದಲ್ಲಿ ಪುತ್ತೂರಿಗೆ ಬಂದಿದ್ದರು. ಮಾ.28ರಂದು ಗಂಟಲು ನೋವಿನ ಹಿನ್ನೆಲೆಯಲ್ಲಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆಂದು ಕಳುಹಿಸಲಾಗಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿದೇಶದಿಂದ ಬಂದ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಮನೆಯಲ್ಲೇ ಇರುವಂತೆ ಮಾಹಿತಿ ನೀಡಲಾಗಿದೆ. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಹಂತದಲ್ಲಿ ಹಾಗೂ 2ನೇ ಹಂತದಲ್ಲಿ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ವೈದ್ಯಕೀಯ ನಿಗಾದಲ್ಲಿ ಅವರನ್ನು ಇರಿಸಲಾಗಿದೆ.
ಡಿಸಿ ಕಚೇರಿಗೆ ಬರಬೇಡಿ:
ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರು, ಸಂಘ, ಸಂಸ್ಥೆಯವರು ಯಾವುದೇ ದೇಣಿಗೆಯನ್ನು ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಮುಖ್ಯಮಂತ್ರಿ ಪರಿಹಾರನಿಧಿ ಅಥವಾ ಪ್ರಧಾನಮಂತ್ರಿ ಪರಿಹಾರನಿಧಿಗೆ ದೇಣಿಗೆ ನೀಡಲು ಇಚ್ಛಿಸುವವರು ಆನ್ ಲೈನ್ ಮೂಲಕ ಪಾವತಿಸಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕೋವಿಡ್ 19 ಲೆಕ್ಕ: ಕೋವಿಡ್ 19 ಹಿನ್ನೆಲೆಯಲ್ಲಿ ಬುಧವಾರ 17 ವೈದ್ಯಕೀಯ ವರದಿಗಳು ಲಭಿಸಿದ್ದು, ಅವುಗಳಲ್ಲಿ 16 ನೆಗೆಟಿವ್ ಒಂದು ಪಾಸಿಟಿವ್ ಆಗಿದೆ. ಸುಮಾರು 16 ಮಾದರಿಗಳನ್ನು ಬುಧವಾರ ಪರೀಕ್ಷೆಗೆ ಕಳಿಸಲಾಗಿದ್ದು, 27 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 28 ದಿನಗಳ ಹೋಂ ಕ್ವಾರಂಟೈನ್ ಅನ್ನು 300 ಮಂದಿ ಪೂರ್ಣಗೊಳಿಸಿದ್ದು, ಅವರಲ್ಲಿ ಯಾರಿಗೂ ಕೋವಿಡ್ 19 ಸೋಂಕು ಪ್ರಕರಣ ಕಂಡುಬಂದಿಲ್ಲ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5875 ಮಂದಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ.