ಜಿಲ್ಲಾ ಸುದ್ದಿ

ತುರ್ತು ಕೆಲಸವಿಲ್ಲದಿದ್ದರೆ ಹೊರಡಬೇಡಿ – ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಹಲವು ನಿರ್ಬಂಧ

ಏನುಂಟು, ಏನಿಲ್ಲ ? ಇಲ್ಲಿದೆ ವಿವರ

ಕೋವಿಡ್ 19(ಕೊರೊನಾ ವೈರಾಣು ಕಾಯಿಲೆ)2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 22ರ ರಾತ್ರಿ 9ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಸಿಂಧು ರೂಪೇಶ್ ವಿಧಿಸಿದ್ದಾರೆ.

ಮಂಗಳೂರು – ಕಡತಚಿತ್ರ : ಅಪುಲ್ ಇರಾ

ನಿಷೇಧಾಜ್ಞೆ ಅವಧಿಯಲ್ಲಿ:

  1. ಸಾರ್ವಜನಿಕರು ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ, ಇನ್ನಾವುದೇ ಕಾರಣಗಳಿಗೆ ವಸತಿ ಸಮುಚ್ಚಯದಿಂದ ಹೊರಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
  2. ಸಾರ್ವಜನಿಕರು ತಮ್ಮ ಮನೆಯಲ್ಲಿಯೂ ಜನ ಸೇರುವಂಥ ಯಾವುದೇ ಕಾರ್ಯಕ್ರಮಗಳನ್ನು ಮಾಡುವುದನ್ನು ನಿರ್ಬಂಧಿಸಿದೆ.
  3. ಸಾಮಾಜಿಕ ಅಂತರವನ್ನು ಪಾಲಿಸುವ ದೃಷ್ಟಿಯಲ್ಲಿ ಜನಜಂಗುಳಿ ಸೇರದಂತೆ ಎಲ್ಲ ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿ ಉತ್ಸವ, ಜಾತ್ರೆಗಳನ್ನು ನಿಷೇಧಿಸಿದೆ.
  4. ಎಲ್ಲ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ವರ್ಕ್ ಶಾಪ್ಗಳು, ಅವಶ್ಯವಲ್ಲದ ಸೇವೆಗಳನ್ನು ನಿರ್ವಹಿಸುವ ಗೋದಾಮುಗಳನ್ನು ಮುಚ್ಚುವುದು.
  5. ಕಾರ್ಮಿಕರ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು ಶೇ.50ರಷ್ಟು ಬಲದಲ್ಲಿ ರೊಟೇಶನ್ ಆಧಾರದಲ್ಲಿ ಕೆಲಸ ನಿರ್ವಹಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲ್ಲ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸುವುದು.
  6. ಎಲ್ಲ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಘಟಕಗಳ ಪೈಕಿ ತುರ್ತು ಮತ್ತು ಅಗತ್ಯ ಸೇವೆ ನಿರ್ವಹಿಸುವ ಸಿಬ್ಬಂದಿ ಹೊರತುಪಡಿಸಿ ಉಳಿದ ಘಟಕಗಳು, ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಖಚಿತಪಡಿಸುವುದು.
  7. ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತ
  8. ದ.ಕ.ಜಿಲ್ಲೆಯಾದ್ಯಂತ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಾರಿಗೆ ಸಂಚಾರ ಸೇವೆಗಳು ಕಾರ್ಯಾಚರಿಸುವುದಿಲ್ಲ.
  9. ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಗುಂಪುಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದು.
  10. ಬೇಸಿಗೆ ಶಿಬಿರ, ಸಮಾರಂಭ ಮತ್ತಿತರ ಎಲ್ಲ ರೀತಿಯ ಕಾರ್ಯಕ್ರಮ ಆಯೋಜಿಸಬಾರದು.
  11. ಬೀಚ್, ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ
  12. ಮೇಲಿನ ಆದೇಶ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ವೈಯಕ್ತಿಕ ಕಾರಣಗಳಿಗೆ ಅನುಮತಿ ಕೋರಿ ಮನವಿ ಸಲ್ಲಿಸಲು ಅವಕಾಶ ಇಲ್ಲ.

ಆದಾಗ್ಯೂ ಈ ಸೇವೆಗಳನ್ನು ನಿರ್ಬಂಧದಿಂದ ವಿರಹಿತಪಡಿಸಲಾಗಿದೆ.

  • ಆಹಾರ, ಪಡಿತರ ಅಂಗಡಿ, ತರಕಾರಿ, ಹಾಲು, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ, ಅಂಗಡಿಗಳು
  • ಎಲ್ಲ ಸರಕು ಸಾಗಾಣಿಕೆ
  • ಪೊಲೀಸ್ ಮತ್ತು ಅಗ್ನಿಶಾಮಕ ಸೇವೆ
  • ಎಲ್ಲ ಸರ್ಕಾರಿ ಕಚೇರಿಗಳು, ನಗರ ಸ್ಥಳೀಯ ಸಂಸ್ಥೆ, ಪಂಚಾಯತ್ ರಾಜ್ ಸಂಸ್ಥೆ ಕಚೇರಿ, ಅಂಚೆ ಸೇವೆ, ವಿದ್ಯುಚ್ಛಕ್ತಿ , ನೀರು, ಪೌರಸೇವೆ
  • ಬ್ಯಾಂಕ್, ಎಟಿಎಂ, ದೂರವಾಣಿ, ಅಂತರ್ಜಾಲ
  • ಆಹಾರ ಪದಾರ್ಥಗಳ ಹೋಂ ಡೆಲಿವರಿ, ಔಷಧ, ವೈದ್ಯ ಸಲಕರಣೆಗಳು
  • ರೆಸ್ಟೋರೆಂಟ್ ಗಳಿಂದ ಆಹಾರ ಕೊಂಡೊಯ್ಯುವುದು
  • ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿದ ಅಂಗಡಿ, ಮಾರುಕಟ್ಟೆ
  • ಸರ್ಕಾರ, ಸ್ಥಳೀಯ ಸಂಸ್ಥೆಗಳಿಂದ ಒದಗಿಸಲಾಗುವ ಕ್ಯಾಂಟೀನ್ ಗಳು

ಈ ಆದೇಶವು ದ.ಕ. ಜಿಲ್ಲೆಯಾದ್ಯಂತ 22 ರ ರಾತ್ರಿ 9ರಿಂದ ಮಾ.31ರ ಮಧ್ಯರಾತ್ರಿವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧು  ಬಿ. ರೂಪೇಶ್ ತಿಳಿಸಿದ್ದಾರೆ.

ತಾಲೂಕು ಕಚೇರಿಗೆ ಅನಗತ್ಯವಾಗಿ ಆಗಮಿಸುವುದು ಬೇಡ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ