ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1143.50 ಎಕ್ರೆ ಡಿ.ಸಿ.ಮನ್ನಾ ಜಮೀನಿದ್ದು,ಈ ಪೈಕಿ 198.15 ಎಕ್ರೆ ಜಮೀನು ಒತ್ತುವರಿಯಾಗಿದೆ ಎಂದು ಕಂದಾಯ ಸಚಿವರಾದ ಆರ್.ಆಶೋಕ್ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಪ್ರಶ್ನೆಗೆ ಕಂದಾಯ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ.ಹಾಗೆಯೇ ಡಿ.ಸಿ.ಮನ್ನಾ ಜಮೀನು ಮಂಜೂರಾತಿ ಕೋರಿ 286 ಅರ್ಜಿಗಳು ಸ್ವೀಕೃತವಾಗಿದ್ದು,ಇದರ ಮಂಜೂರಾತಿಗೆ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರ ಮರು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಕೆಎಸ್ ಆರ್ ಟಿಸಿಯಿಂದ ಶೀಘ್ರವೇ ಸಾರ್ವಜನಿಕ ಸಂಪರ್ಕಸಭೆ: ಬಂಟ್ವಾಳ ತಾಲೂಕಿನಲ್ಲಿ ಪುತ್ತೂರು ಮತ್ತು ಮಂಗಳೂರು ಎರಡು ವಿಭಾಗವಿದ್ದು,ಈ ಎರಡು ವಿಭಾಗ ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಬೇಕಾಗಿದ್ದು,ಅನಿವಾರ್ಯ ಕಾರಣದಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ ಶೀಘ್ರವೇ ಈ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಯು ಆದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು,ಸಾರ್ವಜನಿಕ ಸಂಪರ್ಕ ಸಭೆ ನಡೆಸದಿದ್ದರೂ ಕೆಎಸ್ ಆರ್ ಟಿಸಿಗೆ ಸಂಬಂಧಿಸಿ 2018 ಏಪ್ರಿಲ್ ನಿಂದ ತಾಲೂಕುಮಟ್ಟದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಬಂದ ಮನವಿಯನ್ನು ಪರಿಶೀಲಿಸಿ ಅವಶ್ಯಕತೆಗನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ಶಾಸಕ ರಾಜೇಶ್ ನಾಯ್ಕ್ ಅವರ ಮರು ಪ್ರಶ್ನೆಗೆ ಉತ್ತರಿಸಿದ್ದಾರೆ.