ಜಿಲ್ಲಾ ಸುದ್ದಿ

ಶಾಸಕದ್ವಯರ ಮಾತುಕತೆ: ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಫುಲ್ ಸ್ಟಾಪ್

ಬಂಟ್ವಾಳ ಪುರಸಭೆಯು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿಗೆ ಒಣಕಸವನ್ನು ಸಾಗಿಸುವ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಶಾಸಕ ಯು.ಟಿ.ಖಾದರ್ ಅವರು, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಶನಿವಾರ ನಡೆಸಿದ ಸಭೆ ಫಲ ಕೊಟ್ಟಿದೆ.

ಜಾಹೀರಾತು

ಬಂಟ್ವಾಳ ಪುರಸಭೆಯ ಒಣ ಕಸವನ್ನು ಸಜಿಪನಡು ಗ್ರಾಮದ ಕಂಚಿನಡ್ಕಪದವಿಗೆ ಮಾ.12ರಂದು ಕಳುಹಿಸಿದಾಗ ಸ್ಥಳೀಯ ಸಜೀಪನಡು ಗ್ರಾಮ ಪಂಚಾಯತ್ ಆಡಳಿತ ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭ, ಪೋಲೀಸ್ ರಕ್ಷಣೆಯೊಂದಿಗೆ ಕಸ ವಿಲೇವಾರಿ ನಡೆಸಲಾಗಿತ್ತು.

www.bantwalnews.com Editor: Harish Mambady

ಈ ಬಗ್ಗೆ ವಿಧಾನಸಭೆಯ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ ಕಸ ವಿಲೇವಾರಿ ತಡೆಹಿಡಿಯುವಂತೆ ಆಗ್ರಹಿಸಿದ್ದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನ್ಯಾಯಾಲಯದ ಆದೇಶ,  ಸದನ ಭರವಸೆ ಸಮಿತಿಯ ಆದೇಶ, ಪರಿಸರ ಇಲಾಖೆ, ಜಿಲ್ಲಾಧಿಕಾರಿಯವರ ಆದೇಶದಂತೆ ಕಸ ವಿಲೇವಾರಿ ನಡೆಯುತ್ತಿದೆ. ಜನರ ಸಮಸ್ಯೆಯ ಬಗ್ಗೆ ನಾವು ಅಧಿಕಾರಿಗಳ ಜತೆ ಕುಳಿತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ್ದರು.

ಅದರಂತೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯ ತಿರ್ಮಾನದಂತೆ ಬಂಟ್ವಾಳ ಪುರಸಭೆಯು ಮೂಲದಲ್ಲೆ ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸಿಯೇ ಮನೆ ಮನೆಯಿಂದ ಸಂಗ್ರಹಿಸುವದು, ಒಣಕಸವನ್ನು ಮಾತ್ರ ಕಂಚಿನಡ್ಕಪದವಿಗೆ ಕೊಂಡೊಯ್ಯುವುದು, ಕಂಚಿನಡ್ಕ ಪದವಿನ ತ್ಯಾಜ್ಯ ಘಟಕ್ಕೆ ಸಿಸಿ ಟಿವಿ ಅಳವಡಿಸುವುದು, ಘಟಕದಲ್ಲಿ ವಾಚ್ ಮೆನ್ ನಿಯೋಜಿಸುವುದು, ಒಣ ಕಸವನ್ನು ಪ್ರತ್ಯೇಕ ಗೊಳಿಸಿ ವಿಲೇ ಮಾಡಲು ಸೂಕ್ತ ಸಿಬ್ಬಂದಿಗಳನ್ನು ನೇಮಿಸುವುದು, ಒಣ ಕಸ ಹಾಕುವ ಪ್ರದೇಶದಲ್ಲಿ ತಕ್ಷಣ ತಾತ್ಕಾಲಿಕ ಶೆಡ್ ಮತ್ತು ಅತೀ ಶೀಘ್ರವಾಗಿ ಶೆಡ್ ನಿರ್ಮಿಸುವ ಜತೆಗೆ ಸ್ಥಳೀಯರಿಗೆ ಇದರಿಂದ ಯಾವುದೇ ಸಮಸ್ಯೆಗಳು ಬಾರದಂತೆ ತ್ಯಾಜ್ಯ ವಿಲೇವಾರಿ ನಡೆಸುವಂತೆ ನಿರ್ಧರಿಸಲಾಯಿತು.

ಮುಂದಿನ ವಾರದೊಳಗೆ ಸ್ಥಳಕ್ಕೆ ಎರಡೂ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಜತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಅವಶ್ಯಕತೆ ಗಳ ಬಗ್ಗೆ ಮುಂದುವರಿಯಲು ನಿರ್ಧರಿಸಲಾಯಿತು. ಸ್ಥಳೀಯ ನಿವಾಸಿಗಳು ಪ್ರಸ್ತುತ ವಾಸ ಇರುವ ಸ್ಥಳಕ್ಕೆ ಹಕ್ಕುಪತ್ರ ನೀಡುವಂತೆ ಶಾಸಕ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಹಾಯಕ ಆಯಕ್ತ ಮದನ್ ಮೋಹನ್, ನಗರ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಬಂಟ್ವಾಳ ತಾಲೂಕು ಪಂಚಾಯತ್  ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ್ ಶೆಟ್ಟಿ, ಸಜಿಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್, ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ, ಪರಿಸರ ಅಧಿಕಾರಿ ಯಾಸ್ಮಿನ್ ಸುಲ್ತಾನ್ ಮತ್ತಿತರರು ಉಪಸ್ಥಿತರಿದ್ದರು.

ಸಭೆಯ ಬಳಿಕ ಮಾತನಾಡಿದ ಸಜೀಪನಡು ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸೀರ್, ಇದು ಗ್ರಾಮ ಪಂಚಾಯತ್ ಹೋರಾಟಕ್ಕೆ ಸಿಕ್ಕ ಫಲ. ಒಣಕಸಕ್ಕೆ ಪೂರಕ ವ್ಯವಸ್ಥೆ ಆಗಿದೆ. ಅದರಿಂದ ಪರಿಸರ ಮಾಲಿನ್ಯ ಇಲ್ಲ ಎಂದು ಇಂಜಿನಿಯರ್ ಅಭಿಪ್ರಾಯಪಟ್ಟಿದ್ದು, ಅದಕ್ಕೆ ನಾವು ಅಡ್ಡಿ ಮಾಡುವುದಿಲ್ಲ ಎಂದು ತಿಳಿಸಿದ್ದೇವೆ. ಗ್ರಾಪಂಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ನಾವು ಹೇಳಿದ್ದೇವೆ. ನಮ್ಮ ಬೇಡಿಕೆ ಇದೇ ಆಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ತ್ಯಾಜ್ಯ ವಿಲೇವಾರಿ ಮಾಡಿ ಎಂದಿದ್ದೆವು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ನಮ್ಮ ಶಾಸಕ ಯು.ಟಿ.ಖಾದರ್ ಅವರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದವರು ತಿಳಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.