ಪರಿಶಿಷ್ಟ ಜಾತಿ, ಪಂಗಡ ಕಾಲೊನಿಗಳಲ್ಲಿ ಕೊರೊನಾ ಹರಡದಂತೆ ಮುಂಜಾಗರೂಕತೆ ವಹಿಸಿ, ಕೇರಳಕ್ಕೆ ಬಂಟ್ವಾಳ ಸನಿಹವಿರುವ ಕಾರಣ ಆಶಾ ಕಾರ್ಯಕರ್ತೆಯರ ಸಹಿತ ಇಲಾಖೆಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.
ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಡಿಯಲ್ಲಿ ತಾಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿರುವ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಕೊರೊನಾ ವೈರಸ್ ಮುನ್ನೆಚ್ಚರಿಕೆಯಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಗಳು ಸೇರಿದಂತೆ ಎಲ್ಲಾ ರೀತಿಯ ಕಾಲನಿಗಳ ಮೇಲೆ ಹೆಚ್ಚಿನ ನಿಗಾ ಇರಿಸಿ, ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಬಂಟ್ವಾಳ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇಒ ಸೂಚಿಸಿದರು.
ಪ್ರತಿ ಇಲಾಖೆಯಲ್ಲಿ ಕೊರೊನಾ ವೈರಸ್ ಕುರಿತು ಪ್ರತಿ ಇಲಾಖೆಯಲ್ಲಿ ಜಾಗೃತಿ ಪತ್ರಗಳನ್ನು ಅಳವಡಿಸಬೇಕು. ಜತೆಗೆ ತಮ್ಮ ಸಿಬಂದಿಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ತಾಲೂಕಿನ ಗಡಿ ಪ್ರದೇಶವು ಕೇರಳ ರಾಜ್ಯದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿ ಹೊರಭಾಗದಿಂದ ಆಗಮಿಸುವವರ ಕುರಿತು ನಿಗಾ ಇಟ್ಟು, ಯಾವುದೇ ಮಾಹಿತಿ ಲಭ್ಯವಾದರೆ ತಮ್ಮ ಅಥವಾ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ತಹಶೀಲ್ದಾರ್ ರಶ್ಮಿ ಎಸ್.ಆರ್.ಮಾಹಿತಿ ನೀಡಿದರು.ಸಭೆಯಲ್ಲಿ ಎಸ್‌ಟಿ/ಎಸ್‌ಟಿಗಳಿಗೆ ಮೀಸಲಿಟ್ಟ ಪ್ರತಿ ಇಲಾಖೆಗಳ ಅನುದಾನಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.