ಆದರ್ಶ ಪುರುಷರ ಆಚರಣೆಗಳು ಕೇವಲ ಆಚರಣೆಗೆ ಸೀಮಿತಗೊಳ್ಳದೆ ಪ್ರತಿಯೊಬ್ಬರು ಕೂಡ ಮಹಾತ್ಮರು ನೀಡಿದ ಸಂದೇಶಗಳನ್ನು ಅಳವಡಿಸಿಕೊಂಡು ಬದುಕಿದಾಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಶನಿವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಶ್ರೀ ಸವಿತಾ ಮಹರ್ಷಿ ಹಾಗೂ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್ ನಂದೊಟ್ಟು ಮಾತನಾಡಿ, ಹಿಂದುಳಿದ ಸಮಾಜವಾಗಿರುವ ಸವಿತಾ ಸಮಾಜವನ್ನು ಪ್ರವರ್ಗ 1ಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ ಎಂದರು.
ಬಿ.ಸಿ.ರೋಡು ಸವಿತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಮಡಿವಾಳ ಸಮಾಜದ ಸಂಜೀವ, ತಾಲೂಕು ಕಚೇರಿ ಶಿರಸ್ತೇದಾರ್ ರಾಧಾಕೃಷ್ಣ, ಪಾಣೆಮಂಗಳೂರು ಹೋಬಳಿಯ ಉಪತಹಶೀಲ್ದಾರ್ ರಾಜೇಶ್, ಶಿರಸ್ತೇದಾರ್ ರಾಜೇಶ್ ನಾಯ್ಕ್, ಆಹಾರ ಶಿರಸ್ತೇದಾರ್ ಶ್ರೀನಿವಾಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಶುಕುಮಾರ್ ಉಪಸ್ಥಿತರಿದ್ದರು. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಕುಮಾರ್ ಸ್ವಾಗತಿಸಿದರು. ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ ವಂದಿಸಿದರು. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.