ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿ ಪದಗ್ರಹಣ ಸಮಾರಂಭ ಶುಕ್ರವಾರ ರಾತ್ರಿ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಜೇಸಿಯಂಥ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಸಂಸ್ಥೆಗಳು ಇಂದು ಅಗತ್ಯವಾಗಿದ್ದು, ಯುವಮನಸ್ಸುಗಳಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಮುಖ್ಯೋಪಾಧ್ಯಾಯ, ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ಮಾತನಾಡಿ, ಜೇಸಿ ತನ್ನ ಮೂಲ ಆಶಯಗಳನ್ನು ಉಳಿಸಿಕೊಂಡು, ಹೊಸತನವನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ವಲಯ ಹದಿನೈದರ ಉಪಾಧ್ಯಕ್ಷ ಮೇಧಾವಿ ಎಂ. ಮಾತನಾಡಿ, 2020ರ ಜೇಸಿ ಆಂದೋಲನದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು, ಹೊಸ ಸದಸ್ಯರು, ಹಳೇ ಸದಸ್ಯರ ಅನುಭವಗಳನ್ನು ಅರಿತುಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ಇದೇ ವೇಳೆ ಸಾಧಕ ಮಹಿಳೆ ಅಂಚೆ ಇಲಾಖೆ ಉದ್ಯೋಗಿ ಮಮತಾ ಅವರನ್ನು ಸನ್ಮಾನಿಸಲಾಯಿತು. ಜೇಸಿ ನಿಕಟಪೂರ್ವ ಅಧ್ಯಕ್ಷ ಹರ್ಷರಾಜ್ ಸಿ. ವರದಿ ವಾಚಿಸಿದರು. ನೂತನ ಅಧ್ಯಕ್ಷ ಶ್ರೀನಿಧಿ ಭಟ್ ಟಿ.ಎನ್. ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜೇಸಿರೇಟ್ ನಿಕಟಪೂರ್ವ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜೆಜೆಪಿ ನಿಕಟಪೂರ್ವ ಅಧ್ಯಕ್ಷ ರೋನಿತ್ ಬಿ.ಜಿ. ಅವರು ನೂತನ ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ಪಿ, ನೂತನ ಜೇಸಿರೇಟ್ ಅಧ್ಯಕ್ಷೆ ಮಲ್ಲಿಕಾ ಆಳ್ವ ಮತ್ತು ನೂತನ ಜೆಜೆಸಿ ಅಧ್ಯಕ್ಷ ಅಭಿಷೇಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಜತೆಕಾರ್ಯದರ್ಶಿ ಲಕ್ಷ್ಮಣ್, ಕೋಶಾಧಿಕಾರಿ ಕಿಶನ್ ಎನ್.ರಾವ್, ಉಪಾಧ್ಯಕ್ಷರಾದ ಅಮಿತಾ ಹರ್ಷರಾಜ್, ಗಾಯತ್ರಿ ಲೋಕೇಶ್, ಕೃಷ್ಣರಾಜ ರಾವ್, ನರಸಿಂಹ ಮಯ್ಯ, ನಿರ್ದೇಶಕರಾದ ಜಯರಾಜ್ ಎಸ್. ಬಂಗೇರ, ಧೀರಜ್ ಎಚ್., ಹರಿಶ್ಚಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ಶೈಲಜಾ ರಾಜೇಶ್ ಮತ್ತು ಹರಿಪ್ರಸಾದ್ ಕುಲಾಲ್ ಅವರ ಪದಗ್ರಹಣ ನೆರವೇರಿತು.