ದ.ಕ.ಜಿಲ್ಲಾ ಪಾಣರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ(ರಿ) ಮೂಡುಬಿದಿರೆ ಹಾಗೂ ದ.ಕ.ಜಿಲ್ಲಾ ದೈವಾರಾಧನಾ ಸಮಿತಿ ಆಶ್ರಯದಲ್ಲಿ ಅವಿಭಜಿತ ದ.ಕ, ಕಾಸರಗೋಡು, ಕೊಡಗು, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳ ದೈವಾರಾಧಕರ ಚಿಂತನ-ಮಂಥನ ಕಾರ್ಯಕ್ರಮ, ಸನ್ಮಾನ, ವಿಚಾರಗೋಷ್ಠಿಗಳು ಜ.12ರಂದು ಬಿ.ಸಿ.ರೋಡಿನ ಬಂಟ್ವಾಳ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ದೈವಾರಾಧನೆ ನಡೆಸುವ ವಿಚಾರದ ಕುರಿತು ಅನುಭವ, ಅನಿಸಿಕೆ, ಚಿಂತನ ಮಂಥನ ನಡೆಯುವುದು ಎಂದು ಗುರುವಾರ ಸಂಜೆ ದೈವಾರಾಧನಾ ಸಮಿತಿ ಅಧ್ಯಕ್ಷ ಜನಾರ್ದನ ಬುಡೋಳಿ ಹೇಳಿದರು.
ಧಾರ್ಮಿಕ ಪರಿಷತ್ತು ಮಾಜಿ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಉದ್ಘಾಟಿಸಲಿದ್ದು, ನಾನಾ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿರುವರು. ಬಳಿಕ ವಿಚಾರಗೋಷ್ಠಿ ನಡೆಯಲಿದ್ದು, ಸಮಾರೋಪದಲ್ಲಿ ಬಾಳೆಕೋಡಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಗಣ್ಯರು ಭಾಗವಹಿಸುವರು. ಶತಾಯುಷಿ ಕಲಾವಿದ ನಿಟ್ಟೋಣಿ ಬೊಳ್ಳೂರು, ಸಹಿತ ಹಲವು ಗಣ್ಯರ ಸನ್ಮಾನ ನಡೆಯಲಿದೆ ಎಂದರು. ಪಾಡ್ದನ, ಸಂಪ್ರದಾಯ ಪಾಲನೆ, ಬಣ್ಣಗಾರಿಕೆ, ಉಡುಗೆ, ತೊಡುಗೆ, ದೈವಾರಾಧನೆ, ಹಿನ್ನೆಲೆ ಸಂಗೀತ ಕುರಿತು ವಿಚಾರ ಮಂಡನೆ, ಅನುಭವ, ಅನಿಸಿಕೆ, ಉಚಿತಾನುಚಿತತೆ, ಸವಾಲುಗಳು, ಸಮಯ ಪಾಲನೆ, ದೈವದ ಅಣಕು ಪ್ರದರ್ಶನ ಕುರಿತ ವಿಚಾರಗಳೂ ಚಿಂತನ ಮಂಥನದಲ್ಲಿ ಇರಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಡಿ.ವೆಂಕಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಡಿ.ಮಂಚಿ, ಪದಾಧಿಕಾರಿಗಳಾದ ಪದ್ಮನಾಭ ಮೂಡುಬಿದಿರೆ, ಎಲ್.ಕೆ.ಧರಣಿ ಮಾಣಿ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.