ಜಿಲ್ಲಾ ಸುದ್ದಿ

ಮಾತೃತ್ವಮ್‍ನಿಂದ ಗೋಸಂರಕ್ಷಣೆಯ ಮೌನ ಚಳವಳಿ

10 ಲಕ್ಷ ರೂಪಾಯಿ ಮೌಲ್ಯದ ಮೇವು ವಿತರಣೆ

ಮಂಗಳೂರು: ಸಮಾಜದ ಸಹಭಾಗಿತ್ವದಲ್ಲಿ ಭಾರತೀಯ ಗೋ ತಳಿಗಳನ್ನು ಸಂರಕ್ಷಿಸುವ ಮೌನ ಕ್ರಾಂತಿಗೆ ಮಾತೃತ್ವಮ್ ಮುನ್ನುಡಿ ಬರೆದಿದೆ ಎಂದು ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ನುಡಿದರು.

ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಗೋಶಾಲೆಗಳಿಗೆ 10 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸುಮಾರು 60 ಲೋಡ್ ಒಣಹುಲ್ಲು ವಿತರಿಸುವ ಯೋಜನೆ ಅಂಗವಾಗಿ ವೇಣೂರು ಸಮೀಪದ ಗುಂಡೂರು ಅಮೃತಧಾರಾ ಗೋಶಾಲೆಗೆ ಸಾಂಕೇತಿಕವಾಗಿ ಒಂದು ಲೋಡ್ ಒಣಹುಲ್ಲು ಹಸ್ತಾಂತರಿಸಿ ಅವರು ಮಾತನಾಡಿದರು.

“ಗೋವಿನ ಹೊಟ್ಟೆ ತಣಿಸುವ ಪುಣ್ಯ ಕೆಲಸದಲ್ಲಿ ಸಾವಿರಾರು ಮಂದಿ ಮಾತೆಯರು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಪುಟ್ಟ ಮಕ್ಕಳು ಕೂಡಾ ಈ ಕಾಯಕದಲ್ಲಿ ಕೈಜೋಡಿಸುತ್ತಿದ್ದಾರೆ. ಸುರಭಿ ಸೇವಿಕೆಯರು, ಮಾಸದ ಮಾತೆಯರು, ಗೋಪ್ರೇಮಿಗಳು, ಕಾರ್ಯಕರ್ತರು ಸಮಾಜದ ದಾನಿಗಳಿಂದ ಈ ಕಾರ್ಯ ಆಗುತ್ತಿದೆ” ಎಂದು ವಿವರಿಸಿದರು.

ಗೋಶಾಲೆಯ ವ್ಯವಸ್ಥಾಪಕರಾದ ಜಯರಾಂ ಭಟ್- ಗೀತಾ ದಂಪತಿಗೆ ಮೇವನ್ನು ಹಸ್ತಾಂತರಿಸಲಾಯಿತು. ಮೊದಲು ಹಂತದಲ್ಲಿ ಒಟ್ಟು 14 ಗೋಶಾಲೆಗಳಿಗೆ 60 ಲೋಡ್ ಮೇವು ವಿತರಿಸಲಾಗುತ್ತಿದೆ ಎಂದರು.

ಮಾತೃತ್ವಮ್ ಕಾರ್ಯಕರ್ತರು ರಾಜ್ಯಾದ್ಯಂತ ಮನೆಮನೆಗಳಿಗೆ ತೆರಳಿ ಭಾರತೀಯ ಗೋತಳಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವತಃ ಒಂದು ಗೋವನ್ನು ಸಂರಕ್ಷಿಸುವ ಹೊಣೆ ಹೊರುವ ತಾಯಿಯನ್ನು ಮಾಸದ ಮಾತೆ ಎಂದು ಗೌರವಿಸಿ, ಶ್ರೀಮಠದ ಸಂರಕ್ಷಣೆಯಲ್ಲಿರುವ ಎರಡು ಸಾವಿರಕ್ಕೂ ಹೆಚ್ಚು ಗೋವುಗಳ ಸಂರಕ್ಷಣೆಗೆ ಅಷ್ಟು ಸಂಖ್ಯೆಯ ಮಾಸದ ಮಾತೆಯರನ್ನು ಸಂಘಟಿಸುವುದು ನಮ್ಮ ಮುಂದಿರುವ ಗುರಿ ಎಂದು ಬಣ್ಣಿಸಿದರು.

ಈಗಾಗಲೇ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಮಂದಿ ಮಾಸದ ಮಾತೆಯರಾಗಿ ತಲಾ ಒಂದು ಅಥವಾ ಎರಡು ಗೋವುಗಳ ಪೋಷಣೆಯ ಹೊಣೆ ಹೊತ್ತಿದ್ದಾರೆ. ಇದೊಂದು ಬೃಹತ್ ಸಾಮಾಜಿಕ ಆಂದೋಲನವಾಗಿ ರೂಪುಗೊಳ್ಳುತ್ತಿದ್ದು, ಗೋಮಾತೆಯ ಸೇವೆಗೆ ಮಾತೆಯರು, ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಈಗಾಗಲೇ ಶ್ರೀರಾಮಚಂದ್ರಾಪುರ ಮಠದ ಕೈರಂಗಳ ಗೋಶಾಲೆ, ಗೋಸ್ವರ್ಗ, ರಾಘವೇಂದ್ರ ಗೋ ಆಶ್ರಮ,ದಕ್ಷಿಣ ಕನ್ನಡ ಜಿಲ್ಲೆ ಜೇಡ್ಲ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊಸಾಡ ಗೋಶಾಲೆಗಳಿಗೆ ಮೇವು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾತೃತ್ವಮ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಎಲ್ಲ 2000 ಗೋವುಗಳ ನಿರ್ವಹಣೆಯ ಹೊಣೆಯನ್ನು ಹೊರಲು ಮಾತೃತ್ವಮ್ ಸಜ್ಜಾಗುತ್ತಿದೆ ಎಂದು ಅವರು ಹೇಳಿದರು.

ಗೋವುಗಳಿಗೆ ಮೇವಿನ ಜತೆಗೆ ಹಿಂಡಿಯನ್ನೂ ವಿತರಿಸಲು ಉದ್ದೇಶಿಸಲಾಗಿದೆ. ಭಾರತೀಯ ಸಂಸ್ಕøತಿಯ, ಜನಜೀವನ ಅವಿಭಾಜ್ಯ ಅಂಗವಾಗಿರುವ ಗೋಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕೆ ಸಮಸ್ತ ಸಮಾಜ ಕೈಜೋಡಿಸಬೇಕು. ಭಾರತೀಯ ಗೋಸಂಪತ್ತನ್ನು ಉಳಿಸಿ ಬೆಳೆಸಲು ಎಲ್ಲರೂ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.

ಭಾರತೀಯ ಗೋವುಗಳು ನೀಡುವ ಎ2 ಹಾಲು ಅಮೃತ ಸಮಾನ ಎಂದು ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ. ಗೋಮಯ, ಗೋಮೂತ್ರಗಳಲ್ಲಿ ಲಕ್ಷಾಂತರ ಸೂಕ್ಷ್ಮಾಣುಜೀವಿಗಳಿದ್ದು, ಮಣ್ಣಿನ ಆರೋಗ್ಯಕ್ಕೆ ಇದು ಅಮೂಲ್ಯ ಎನ್ನುವುದು ವಿಜ್ಞಾನಿಗಳ ಅಭಿಮತ. ಇಂದು ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯ ಕೃಷಿ ಕ್ಷೇತ್ರಕ್ಕೆ ಗೋ ಆಧರಿತ ಕೃಷಿಪದ್ಧತಿಯೊಂದೇ ಪರಿಹಾರ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಗುರುವಂದನೆ, ಗೋಪಾಲಕೃಷ್ಣ ದೇವರಿಗೆ ವಶೇಷ ಪೂಜೆ, ಗೋಪೂಜೆ ನಡೆಯಿತು. ಮಾತೃತ್ವಮ್‍ನ ದೇವಿಕಾ ಶಾಸ್ತ್ರಿ, ಗಣ್ಯರಾದ ಪರಮೇಶ್ವರ ಭಟ್, ಶ್ಯಾಂ ಭಟ್ ಬೇರ್ಕಡವು, ಗೋವಿಂದ ಶಾಸ್ತ್ರಿ ಕೋರಿಯಾರ್, ಉರುವಾಲು ವಲಯ ಕಾರ್ಯದರ್ಶಿ ಶಂಭು ಶರ್ಮ, ಚಂದ್ರಶೇಖರ, ಶಶಿಪ್ರಭಾ ಮುರ್ಗಜೆ, ಜಯಲಕ್ಷ್ಮಿ ಕುಳಾಯಿ ಮತ್ತಿತರರು ಭಾಗವಹಿಸಿದ್ದರು. ಕೊನೆಯಲ್ಲಿ ಎಲ್ಲರಿಗೂ ಶುದ್ಧ ದೇಸಿ ಹಾಲು ವಿತರಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ