ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ, ಮಕ್ಕಳ ಕಾರ್ಯಚಟುವಟಿಕೆ ವೀಕ್ಷಣೆ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಯೋಗಗುರು ಬಾಬಾ ರಾಮ್ ದೇವ್ ಬುಧವಾರ ಮಧ್ಯಾಹ್ನ ಆಗಮಿಸಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಮುಖ, ವಿವೇಕಾನಂದ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಅವರನ್ನು ಶ್ಲಾಘಿಸಿ, ಮಾತೃ ಭಾಷೆಯಲ್ಲಿ ಕಲಿಯುವುದರಿಂದ ಸಮರ್ಥರಾಗುತ್ತಾರೆ, ಜಗತ್ತನ್ನೇ ಗೆಲ್ಲುವ ಶಕ್ತಿ ದೊರಕುತ್ತದೆ ಧೈರ್ಯ ಸಾಹಸವನ್ನು ಜೀವನದಲ್ಲಿ ಬೆಳೆಸಿಕೊಂಡು ಶ್ರೇಷ್ಟ ಕಾರ್ಯಗಳನ್ನು ಮಾಡಿರಿ ಎಂದರು.
ಗೋಪೂಜೆ, ವಿದ್ಯಾರ್ಥಿಗಳ ಮಲ್ಲಕಂಭ ಪ್ರದರ್ಶನ, ಶಿಶುಮಂದಿರ, ಪ್ರಾಥಮಿಕ ವಿಭಾಗ ವೀಕ್ಷಿಸಿದ ಅವರೊಂದಿಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಯನ್. ಪತಂಜಲಿ ಯೋಗ ಟ್ರಸ್ಟ್‌ನ ರಾಜ್ಯ ಉಸ್ತುವಾರಿ ಭವರ್‌ಲಾಲ್ ಆರ್ಯ, ಮಂಗಳೂರು ಜಿಲ್ಲಾ ಉಸ್ತುವಾರಿ ರಾಘವೇಂದ್ರ ಆಚಾರ್ಯ ಉಡುಪಿ, ಸುಜಾತ ಮಂಗಳೂರು, ಡಾ| ಕಮಲಾ ಪ್ರ. ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕ್ಷಮಾ, ಜೆನಿತ್, ಅಮೃತ ವಿವಿಧ ಪ್ರಶ್ನೆಗಳನ್ನು ಮಾಡಿದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ ಫಲಪುಷ್ಪ ಸಮರ್ಪಿಸಿ ಸ್ವಾಗತಿಸಿದರು., ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.