ನ.20ರಂದು ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬ ಆಚರಣೆ ಸಮಾರೋಪ
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿರುವ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರುವಿನಲ್ಲಿ, ಹೆದ್ದಾರಿಯಿಂದ ೬೦೦ ಮೀಟರ್ ದೂರದ ಪ್ರಾಕೃತಿಕವಾಗಿ ಹಸಿರು ಪ್ರದೇಶದಿಂದ ಕೂಡಿದ ಪರಿಸರದಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರುವಿಗೆ ೧೨೫ ವರ್ಷಗಳ ಇತಿಹಾಸವಿದೆ.
ದೇವಾಲಯ ವ್ಯಾಪ್ತಿಯ ೧೫೨ ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದೆ. ಎಲ್ಲಾ ಕಾರ್ಯಗಳಿಗೆ ಚರ್ಚ್ ವ್ಯಾಪ್ತಿಯ ಕುಟುಂಬಗಳೇ ತನು ಮನ ಧನದ ಸಹಕಾರದಿಂದಲೇ ನಡೆದಿರುವುದು ವಿಶೇಷ.
ಎಲ್ಲಾ ಧರ್ಮಗುರುಗಳ ಅವಿರತ ಶ್ರಮ, ಶ್ರದ್ಧೆ, ಮಾನವೀಯತೆಯ ಆಶಯಗಳು, ಸಮಾಜಮುಖೀ ಚಿಂತನೆಗಳಿಂದಾಗಿ ಇಂದು ಸೂರಿಕುಮೇರು ವಿನ ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬಕ್ಕೆ ತೆರೆದುಕೊಳ್ಳಲು ನೆರವಾಗಿವೆ.
ಸೋಮವಾರ ಬೆಳಿಗ್ಗೆ ಸೂರಿಕುಮೇರು ಚರ್ಚಿನ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚರ್ಚಿನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ, ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಇದರ ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ನ. 20 ರಂದು ನಡೆಯಲಿದೆ ಎಂದು ಹೇಳಿದ್ದಾರೆ.
ಸುಮಾರು ೧೨೫ ವರುಷಗಳ ಹಿಂದೆ ಸ್ಥಾಪನೆಗೊಂಡ ಈ ಚರ್ಚ್‌ನ ಅಭಿವೃದ್ದಿಗಾಗಿ ಹಲವಾರು ಧರ್ಮಗುರುಗಳು ತಮ್ಮ ಉದಾರ ಸೇವಾ ಮನೋಭಾವದಿಂದ ತೊಡಗಿಸಿಕೊಂಡು ಚರ್ಚ್‌ನ ಪ್ರಗತಿಯನ್ನೂ, ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ ಎಂದರು. ೧೮೯೩ ರಲ್ಲಿ ಬರಿಮಾರ್ ನಲ್ಲಿ ಚರ್ಚ ಅನ್ನು ಸ್ಥಾಪಿಸಲಾಗಿತ್ತು. ಕಳೆದ ಸುಮಾರು ೮೫ ವರ್ಷಗಳ ಹಿಂದೆ ಸೈಂಟ್ ಜೋಸೆಫ್ ಚರ್ಚ್ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಿಂದ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿಗೆ ಸ್ಥಳಾಂತರಗೊಂಡಿತ್ತು. ಆಗಿನ ಧರ್ಮ ಗುರುಗಳಾಗಿದ್ದ ವಂ.ಫಾದರ್ ಲಿಯೋ ಕರ್ವಾಲೋ ರವರ ಮುತುವರ್ಜಿಯಲ್ಲಿ ಈ ಚರ್ಚ್ ನಿರ್ಮಾಣವಾಗಿತ್ತು. ಮಂಗಳೂರು ಧರ್ಮಪ್ರಾಂತ್ಯದ ಆಗಿನ ಬಿಷಪ್ ಅತೀ ವಂದನೀಯ ಡಾ.ವಿಕ್ಟರ್ ಫೆರ್ನಾಂಡೀಸ್ ರವರು ೧೯೩೪ ರ ನವೆಂಬರ್ ೨೦ ರಂದು ಈ ಚರ್ಚ್ ನ ಉದ್ಘಾಟನೆಯನ್ನು ನೆರವೇರಿಸಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ಅಧಿಕೃತವಾಗಿ ಘೋಷಿಸಿದ್ದರು. ಕಂದಾಯ ಇಲಾಖೆಯ ದಾಖಲೆಯಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ದಾಖಲಾಗಿದ್ದರೂ, ಸೈಂಟ್ ಜೋಸೆಫ್ ಚರ್ಚ್ ಬೊರಿಮಾರ್ ಎಂದೇ ಕರೆಯಲಾಗುತ್ತಿತ್ತು. ೧೨೫ನೇ ವರ್ಷಾಚರಣೆಯ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಚರ್ಚ್ ಮುಂದಿನ ದಿನಗಳಲ್ಲಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂಬ ಹೆಸರಿನಲ್ಲೇ ಮುನ್ನಡೆಯಲಿದ್ದು, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದ ಸವಿನೆನಪಿಗೆ ಅತ್ಯಾಕರ್ಷಕವಾಗಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾದ ಚರ್ಚ್‌ನ ಪ್ರವೇಶ ದ್ವಾರದಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ಬರೆಯಲಾಗಿದೆ.
ಈ ನೂತನ ಪ್ರವೇಶ ದ್ವಾರವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನಾ ರವರು ನವೆಂಬರ್ ೨೦ರಂದು ಉದ್ಘಾಟಿಸಿ, ವಿಶೇಷ ಬಲಿಪೂಜೆಯನ್ನು ನಡೆಸಿ, ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯದ ಅತಿವಂದನೀಯ ಬಿಷಪ್ ಡಾ. ಗೀವರ್ಗೀಸ್ ಮಾರ್ ಮಕಾರಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಅತಿ ವಂದನೀಯ ಬಿಷಪ್ ಡಾ.ಲಾರೆನ್ಸ್ ಮುಖಾಝಿ, ಮೊಗರ್ನಾಡು ಚರ್ಚ್‌ನ ಧರ್ಮಗುರು ಡಾ. ಮಾರ್ಕ್ ಕೆಸ್ಟಲಿನೋ ಸಹಿತ ಅನೇಕ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಲ್ವಾರಿ ಪರ್ವತದ ೧೪ ಶಿಲುಬೆ ಯಾತ್ರೆ, ಕಾಂಕ್ರೀಟು ರಸ್ತೆ, ನೀರಿನ ಸೌಲಭ್ಯ, ಸೋಲಾರ್ ಲೈಟ್, ಸಿಸಿ ಕ್ಯಾಮೆರಾ ಹಾಗೂ ದ್ವನಿವರ್ಧಕದ ಉದ್ಘಾಟನೆಯೂ ನಡೆಯಲಿದೆ. ೧೧.೩೦ಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಕಾಂಕ್ರೀಟು ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸಭಾಕಾರ್ಯಕ್ರಮವು ನಡೆಯಲಿದೆ ಎಂದವರು ವಿವರಿಸಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಮಾತನಾಡಿ, ೨೦೧೮ ರಿಂದ ಚರ್ಚ್ ನ ಧರ್ಮಗುರುಗಳಾಗಿ ನಿಯುಕ್ತಿ ಹೊಂದಿದ ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರು ಚರ್ಚ್‌ನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಕಳೆದ ೨೦೧೮ರ ಸೆಪ್ಟೆಂಬರ್ ೪ ರಿಂದ ಆರಂಭಗೊಂದು ತಿಂಗಳಿಗೊಂದರಂತೆ ೧೪ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ದೇವಾಲಯ ವ್ಯಾಪ್ತಿಯ ೧೫೨ ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದ್ದು ಎಲ್ಲಾ ಕಾರ್ಯಗಳಿಗೆ ಚರ್ಚ್ ವ್ಯಾಪ್ತಿಯ ಕುಟುಂಬಗಳ ತನು ಮನ ಧನದ ಸಹಕಾರದಿಂದಲೇ ನಡೆದಿದೆ ಎಂದರು. ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಸಿಸ್ಟರ್ ನ್ಯಾನ್ಸಿ ಈ ಸಂದರ್ಭ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127