ಎಲ್ಲ ಓದುಗರಿಗೂ, ಜಾಹೀರಾತುದಾರರಿಗೂ, ಪ್ರೋತ್ಸಾಹಕರಿಗೂ ಮನದಾಳದ ಕೃತಜ್ಞತೆ – ಹರೀಶ ಮಾಂಬಾಡಿ
ಇವತ್ತು 2019, ನವೆಂಬರ್ 10
2016ರಂದು ಇದೇ ದಿನ ಬಂಟ್ವಾಳನ್ಯೂಸ್ ಸುದ್ದಿಗಳನ್ನು ನೀಡಲು ಆರಂಭಿಸಿತ್ತು. ಇಂದಿಗೆ ಮೂರು ವರ್ಷ ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು 4ನೇ ವರ್ಷಕ್ಕೆ ಕಾಲಿಡುವ ಹೊತ್ತು. ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಇಲ್ಲ ಕ್ಲಿಕ್ ಮಾಡಿ ಓದಿದ್ದಾರೆ ಎಂಬುದು ಸಂತೋಷದ ವಿಚಾರ.
ಪ್ರತಿದಿನ ಏನಿದೆ ಇದರಲ್ಲಿ ಎಂದು ನೀವು ಇಣುಕಿ ನೋಡದೇ ಇದ್ದರೆ ನಾನು ಇದನ್ನು ಬರೆಯುತ್ತಲೇ ಇರಲಿಲ್ಲ. ಪ್ರತಿದಿನ ವೃತ್ತಪತ್ರಿಕೆಗಳ ಹಾಳೆ ತಿರುವಿ ಹಾಕುತ್ತಿದ್ದ, ಟಿ.ವಿ. ನೋಡುತ್ತಿದ್ದ ಬಂಟ್ವಾಳದವರು ಮೊಬೈಲ್ ಕ್ಲಿಕ್ ಮಾಡಿ ಏನಿದೆ ಸುದ್ದಿ ಎಂದು ನೋಡುವಂತೆ ಮಾಡಿದ ಮೊದಲ ವೆಬ್ ಪತ್ರಿಕೆ ನಿಮ್ಮ ಬಂಟ್ವಾಳನ್ಯೂಸ್ ಎಂಬುದು ಈಗ ಇತಿಹಾಸ. ನಿಮ್ಮ ಮುಂದಿರುವುದು ಒಂದು ಪ್ರಯತ್ನ. ಇದೀಗ ನಾಲ್ಕನೇ ಸಂವತ್ಸರಕ್ಕೆ ಕಾಲಿಡುತ್ತಿದೆ. ವೆಬ್ ಪತ್ರಿಕೆ ನಡೆಸುವುದೆಂದರೆ ಆರ್ಥಿಕ ಸಂಪನ್ಮೂಲಗಳು ಬೇಕು. ಕಾಲಕಾಲಕ್ಕೆ ಜಾಹೀರಾತು ಒದಗಿಸುವ ಮೂಲಕ ಪ್ರೋತ್ಸಾಹ ನೀಡಿದ ಸ್ನೇಹಿತರಿಗೆ, ವೆಬ್ ಆರಂಭಕ್ಕೆ ಹೆಗಲಿಗೆ ಹೆಗಲು ಕೊಟ್ಟ ಬಂಟ್ವಾಳ, ವಿಟ್ಲದ ಮಾಧ್ಯಮ ಬಂಧುಗಳಿಗೆ ಆಭಾರಿ. ಗುರುಹಿರಿಯರ ಆಶೀರ್ವಾದ ಹಿರಿಯರ ಮಾರ್ಗದರ್ಶನ, ಕಾಲಕಾಲಕ್ಕೆ ಹಿರಿಯ ಪತ್ರಕರ್ತರ ಸಲಹೆ ಸೂಚನೆಗಳು ನನಗೆ ಶ್ರೀರಕ್ಷೆ.
ಅಂದೂ ಹೇಳಿದ್ದೆ, ಇಂದೂ ಹೇಳುತ್ತೇನೆ. ಬಂಟ್ವಾಳನ್ಯೂಸ್ ಸುತ್ತಮುತ್ತಲಿನ ಆಯ್ದ ಪ್ರಮುಖವೆನಿಸಿದ ವಿಚಾರಗಳು, ಸುದ್ದಿ ಹಾಗೂ ಲೇಖನಗಳನ್ನಷ್ಟೇ ಒದಗಿಸುತ್ತದೆ. ಬ್ರೇಕಿಂಗ್ ನ್ಯೂಸ್ ನ ಆತುರ ನಮಗಿಲ್ಲ. ಯಾವ ಪ್ರಚೋದನಕಾರಿ ವಿಚಾರ, ಭಾಷಣ, ವೈಯಕ್ತಿಕ ಆರೋಪ, ಪ್ರತ್ಯಾರೋಪ ಬಂಟ್ವಾಳನ್ಯೂಸ್ ವೇದಿಕೆಯಾಗುವುದಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವುದಷ್ಟೇ ವೆಬ್ ಆಶಯ. 2016, ನ.10ರಿಂದಲೂ ಇದನ್ನು ಅನುಸರಿಸಿಕೊಂಡು ಬಂದಿದ್ದು, ಇದು ಮುಂದುವರಿಯಲಿದೆ. ಓದುಗರು ಈ ಅಂಶವನ್ನು ಗುರುತಿಸಿದ್ದಾರೆ ಎಂಬುದಕ್ಕೆ 15,50,000ಕ್ಕೂ ಅಧಿಕ ಮಂದಿ ವೀಕ್ಷಕರೇ ಸಾಕ್ಷಿ. ಎಲ್ಲ ಓದುಗರಿಗೂ, ಜಾಹೀರಾತುದಾರರಿಗೂ, ಸ್ನೇಹಿತರಿಗೂ, ಮಾರ್ಗದರ್ಶಕರಿಗೂ ಮನದಾಳದ ಕೃತಜ್ಞತೆ. ಇದನ್ನು ಹೀಗೆಯೇ ಮುಂದುವರಿಸಲು ಮತ್ತೊಮ್ಮೆ ತಮ್ಮ ಸಹಕಾರ ಕೋರುತ್ತಿದ್ದೇನೆ.
ಇಂತಿ ನಿಮ್ಮವ
ಹರೀಶ ಮಾಂಬಾಡಿ. ಸಂಪಾದಕ
ದೂರವಾಣಿ: 9448548127