ಪ್ರಮುಖ ಸುದ್ದಿಗಳು

ಜಿಲ್ಲೆಯಾದ್ಯಂತ ನಾಳೆ ಬೆಳಗ್ಗೆವರೆಗೆ ನಿಷೇಧಾಜ್ಞೆ, ಶಾಂತಿ ಕದಡಿದರೆ, ವದಂತಿ ಹರಡಿದರೆ ಕಠಿಣ ಕ್ರಮ

ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಎಸ್ಪಿ ಲಕ್ಷ್ಮೀಪ್ರಸಾದ್ ಮಾತನಾಡಿದರು. ಎಎಸ್ಪಿ ಸೈದುಲು ಅಡಾವತ್ ಜತೆಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಜನಜೀವನ ಸಹಜ ಸ್ಥಿತಿಯಲ್ಲಿದ್ದು, ಅಯೋಧ್ಯೆ ತೀರ್ಪು ಕುರಿತಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸತತ ಮುನ್ನೆಚ್ಚರಿಕೆ ಘೋಷಿಸಿ, ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.  ಮುನ್ನೆಚ್ಚರಿಕೆ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವೆಂಬರ್ 9ರ ಬೆಳಗ್ಗೆ 10 ಗಂಟೆಯಿಂದ ನವೆಂಬರ್ 10ರ ಬೆಳಗ್ಗೆ 6 ಗಂಟೆವರೆಗೆ ದ.ಕ. ಜಿಲ್ಲೆಯ ಪೊಲೀಸ್ ಘಟಕ ವ್ಯಾಪ್ತಿಗೆ ಬರುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕುಗಳಲ್ಲಿ ಸೆ.144 ಸಿಆರ್ ಪಿಸಿ ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸುವಂತೆ ಕೋರಿ ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಸ್ತಾವನೆಯಂತೆ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಸೆ.144ರನ್ವಯ ನಿಷೇಧಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಅವಧಿಯಲ್ಲಿ ಶಸ್ತ್ರ, ಬಂದೂಕು, ಚಾಕುವಿನಂಥ ದೈಹಿಕ ಹಿಂಸೆ ಮಾಡುವ ವಸ್ತುಗಳನ್ನು ಒಯ್ಯುವುದು, ಪಟಾಕಿಗಳನ್ನು , ಕ್ಷಾರಕ ಪದಾರ್ಥ, ಸ್ಫೋಟಕ ಒಯ್ಯುವುದು, ಸಿಡಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ರಾಜಕೀಯ ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನ ಉಪಕರಣ ಒಯ್ಯುವಿಕೆ, ಶೇಖರಣೆ, ತಯಾರಿ ನಿಷೇಧಿಸಲಾಗಿದೆ. ವ್ಯಕ್ತಿಗಳ ಅಥವಾ ಅವರ ಶವಗಳ, ಆಕೃತಿಗಳ, ಪ್ರತಿಕೃತಿ ಪ್ರದರ್ಶನ ನಿಷೇಧಿಸಲಾಗಿದೆ. ಸಭ್ಯತೆ, ನೀತಿ ಅತಿಕ್ರಮಿಸುವ ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆ ಉಂಟುಮಾಡುವ ಅಪರಾಧ ಪ್ರಚೋದಕ ಬಹಿರಂಗ ಘೋಷಣೆ, ಹಾಡು, ಸಂಗೀತ, ಆವೇಶಭರಿತ ಭಾಷಣ, ಚಿತ್ರಸಂಕೇತ ಭಿತ್ತಿಪ್ರದರ್ಶನ, ತಯಾರಿ, ಪ್ರಸಾರ, ಪ್ರದರ್ಶನ ನಿಷೇಧಿಸಲಾಗಿದೆ. ಪಟಾಕಿ ಮಾರಾಟಕ್ಕೆ ನಿಷೇಧವಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಬಂಟ್ವಾಳದಲ್ಲಿ ಎಸ್ಪಿ ಮೊಕ್ಕಾಂ:

ಬಂಟ್ವಾಳ ಪರಿಸರದಲ್ಲಿ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಶನಿವಾರ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕಿಸಲು ತಾಲೂಕಿನಾದ್ಯಂತ ಸಂಚಾರ ನಡೆಸಿದರು. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಲಾಗಿದೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾರಾದರೂ ಶಾಂತಿ ಕದಡುವ ಕೃತ್ಯ ಎಸಗುತ್ತಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಅವರು ತಿಳಿಸಿದರು. ನಿರಂತರವಾಗಿ ಬಿ.ಸಿ.ರೋಡ್, ಫರಂಗಿಪೇಟೆ, ಕಲ್ಲಡ್ಕ, ಅಡ್ಯನಡ್ಕ, ಕನ್ಯಾನ, ವಿಟ್ಲ, ಕಬಕ ಪ್ರದೇಶಗಳು, ಗಡಿ ಭಾಗಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಕುರಿತು ಕೂಡ ನಿಗಾ ಇರಿಸಲಾಗಿದೆ. ಬಂಟ್ವಾಳ ಉಪವಿಭಾಗ ವ್ಯಾಪ್ತಿಯಲ್ಲಿ ತಾನು, ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚುವರಿ ಎಸ್ಪಿಯವರು ಭದ್ರತಾ ಕಾರ್ಯದ ಕುರಿತು ನೇತೃತ್ವ ವಹಿಸಲಿದ್ದಾರೆ ಎಂದರು. ಎಎಸ್ಪಿ ಸೈದುಲ್ ಅದಾವತ್ ಜತೆಗಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ