www.bantwalnews.com Editor: Harish Mambady
ರಸ್ತೆ ಹೊಂಡ ಹಾಗೂ ಪೆನಾಲ್ಟಿ…
ಸದ್ಯ ಫೇಸ್ ಬುಕ್ ಮತ್ತು ವಾಟ್ಸಾಪ್ ಎಂಬ ಪ್ರಬಲ ಮಾಧ್ಯಮಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸಂದೇಶಗಳು ಹರಿದಾಡುತ್ತಿವೆ.
ಮಂಗಳೂರು – ಕಾಸರಗೋಡು ರಸ್ತೆ, ಬಿ.ಸಿ.ರೋಡ್ ಉಪ್ಪಿನಂಗಡಿ ರಸ್ತೆಯಷ್ಟೇ ಅಲ್ಲ, ಸ್ಥಳೀಯ ರಸ್ತೆ, ಊರುಗಳ ಸ್ಥಿತಿಗತಿಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ತಮ್ಮೂರ ಹೆಸರುಗಳನ್ನು ಬದಲಾಯಿಸಿ, ಎಲ್ಲಿ ಹೆಚ್ಚು ಸಮಸ್ಯೆ ಇದೆಯೋ ಅವನ್ನೇ ಇದರಲ್ಲಿ ಬಿತ್ತರಿಸಲಾಗುತ್ತಿದೆ. ಇದರೊಂದಿಗೆ ಮತ್ತೊಂದು ಸಂದೇಶವೂ ಹರಿದಾಡುತ್ತಿದೆ. ಸಾರಿಗೆ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀರಿ, ರಸ್ತೆ ಹೊಂಡ, ತಿರುವುಗಳಿಂದಾಗಿ ಅಪಘಾತಗಳು ಸಂಭವಿಸುತ್ತವೆ ಎಂಬುದಾಗಿ ಸರ್ವೇ ಹೇಳುತ್ತದೆ. ಅದಕ್ಕೆ ಎಷ್ಟು ಫೈನ್ ಹಾಕುತ್ತೀರಿ?
ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶಗಳಲ್ಲಿ ಬಿ.ಸಿ.ರೋಡ್ – ಉಪ್ಪಿನಂಗಡಿ ರಸ್ತೆಯ ಕುರಿತ ಲೇವಡಿ (ಇದು ವಾಸ್ತವವೂ ಹೌದು) ಹೀಗಿದೆ.
- ಬಿ.ಸಿ.ರೋಡ್ ಹಾಗೂ ಉಪ್ಪಿನಂಗಡಿ ರೂಟಲ್ಲಿ ಸ್ವಯಾನುಭವ ಸೂಚಕಗಳ ಅಳವಡಿಸುವಿಕೆ
- ಈ ರೂಟಲ್ಲಿ ರಾತ್ರೆ ವೇಳೆ ಬಸ್ಸ್ ಪ್ರಯಾಣಿಕರು ಇಳಿಯುವ ಸ್ಟಾಪ್ ತಿಳಿಯದೆ ಎಲ್ಲೆಲ್ಲಿಯೋ ಇಳಿದು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಪ್ರಯಾಣಿಕರಿಗೆ ಸುಲಭವಾಗಿ ಸ್ಟಾಪ್ ಯಾವುದೆಂದು ತಿಳಿಸುವ ವ್ಯವಸ್ಥೆ ಮಾಡಲಾಗಿದೆ.
- ನೀವು ಬಸ್ಸಿನಲ್ಲಿ ಕುಳಿತ ಸೀಟಿನಲ್ಲಿಯೆ ಗಡ್ಕ್ ಗಡ್ಕ್ ಎಂದು ಆರು ಸಲ ಹಾರಿದರೆ ಮುಂದೆ ಪಾಣೆಮಂಗಳೊರು
- ಬಸ್ಸು ಸೈಡಿಗೆ ಮಾಲಿ ನಿಮ್ಮ ತಲೆ ನಾಲ್ಕರಿಂದ ಆರುಸಲ ಸೈಡಿಗೆ ಬಡಿದರೆ ಮೆಲ್ಕಾರ್
- ನೀವು ಡಬಕ್ ಎಂದು ಕೆಳಕ್ಕೆ ಬಿದ್ದು ಸೀಟಿಗೆ ತಲೆಬಡಿದರೆ ನೆಕ್ಸ್ಟ್ ಕಲ್ಲಡ್ಕ
- ನಿಮ್ಮತಲೆ ಆಕಡೆ ಒಮ್ಮೆ ಈ ಕಡೆ ಎರಡುಸಲ ಬಡ್ಡಿದುಕೊಂಡರೆ ತಲಪಿದೆ ಸೂರಿಕುಮೆರು
- ಒಂದೇ ರಭಸಕ್ಕೆ ಡ್ರೈವರ್ ಸೀಟಿನ ಹತ್ತಿರಕ್ಕೆ ರಾಶಿಬಿದ್ದರೆ ಮಾಣಿ ಹತ್ತಿರವಿದೆ.
- ಹಾರಿ ಹಾರಿ ನಿಮ್ಮ ಮಂಡೆ ಮೂರುಸಲ ಮೇಲೆ ಬಡಿದು ಮತ್ತೆ ಪೆತ್ತದ ಅಂಬಿಯ ಮುದ್ದೆಯಂತೆ ಬಿದ್ದರೆ ಗಡಿಯಾರ ಸ್ಟಾಪ್ ತಲಪಿತು.
- ಹಿಂದಿನ ಸೀಟಿನಿಂದ ಜಾರಿದ ರಭಸಕ್ಕೆ ನೀವು ಮುಂದಿನ ಸೀಟಿನಡಿಗೆ ತಲಪಿ ಅಲ್ಲಿ ಒಬ್ರು ನಿಮ್ಮೆದೆಗೆ ತುಳಿದರೆ, ಪೆರ್ನೆ ಇಳಿಯುವಿರಾ
- ನಾಲ್ಕುಸಲ ಹಾರಿ ತಿರುಗಿ ಕಂಬಕ್ಕೆ ಮಂಡೆಬಡಿದು ಮತ್ತೆ ಜಾರಿ ಬಾಗಿಲಬಳಿ ಮೆಟ್ಟಿಲಲ್ಲಿ ತಲೆಕೆಳಗಾಗಿ ನಿಂತರೆ
- ಉಪ್ಪಿನಂಗಡಿ ತಲಪುತ್ತಿದೆ ಎಂದು ಗೊತ್ತಾಗುತ್ತದೆ.!!!
- (ಇನ್ನೂ ಹಲವು ಸ್ಟೋಪ್ ಗಳಿವೆ. ಪ್ರಯಾಣಿಸುವಾಗ ನಿಮ್ಗೆ ಗೊತ್ತಾದ್ರೆ ಇದಕ್ಕೆ ಸೇರಿಸಿ ಮುಂದಕ್ಕೆ ಮಾಹಿತಿ ನೀಡಿ ಎಂದು ಈ ಸೂಚನೆಗಳು ಹೇಳುತ್ತವೆ.
ನೋಡಲು ಲೇವಡಿಯಂತೆ ಕಾಣುವ ಈ ಸಂದೇಶ ಇಂದಿನ ವಾಸ್ತವ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಂತಿದೆ. ಈಗಾಗಲೇ ಬ್ರಹ್ಮರಕೂಟ್ಲುವಿನ ಟೋಲ್ ಗೇಟ್ ನಲ್ಲಿ ಸುಂಕ ಕೊಟ್ಟ ಕೂಡಲೇ ಹೊಂಡಕ್ಕೆ ವಾಹನಗಳನ್ನು ಧಡಕ್ಕನೆ ಹಾಕಬೇಕಾದ ಕುರಿತು ವಿಡಿಯೋಗಳು ಹರಿದಾಡುತ್ತಿದ್ದವು.
ಎಲ್ಲದಕ್ಕೂ ಉತ್ತರಿಸಬೇಕಾದವರು ನಮ್ಮ ಜನಪ್ರತಿನಿಧಿಗಳು. ಭರವಸೆ, ಘೋಷಣೆ ಭಾಷಣಗಳನ್ನು ಕೇಳಿದ್ದಾಗಿದೆ. ಇದೀಗ ಕಾರ್ಯರೂಪಕ್ಕೆ ತರಬೇಕಾದ ಕಾಲ. ನಮ್ಮಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು. ಈ ರಸ್ತೆಗಳಲ್ಲೂ ಸಾಮಾನ್ಯ ವಾಹನಗಳಲ್ಲಿ ಸಂಚರಿಸಬೇಕು ಹಾಗೂ ಇವುಗಳ ಸ್ವಯಂ ಅನುಭವ ಪಡೆದು ಕೂಡಲೇ ಕ್ರಮ ಕೈಗೊಳ್ಳಲು ಮತ್ತು ಮುಂದಿನ ವರ್ಷ ಇಂಥ ಸಮಸ್ಯೆಗಳು ಆಗದೇ ಇರುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಓದುಗರ ಒತ್ತಾಯ. ಬಂಟ್ವಾಳನ್ಯೂಸ್ ಕಾಳಜಿಯೂ ಹೌದು.