www.bantwalnews.com Editor: Harish Mambady
ಬೇಸಗೆಯನ್ನು ನೋಡುವಾಗ ಇನ್ಯಾವಾಗ ಮಳೆ ಬರುವುದು ಎಂದು ಯೋಚಿಸುತ್ತೇವೆ. ಮಳೆ ಬಂದಾಗ ಒಮ್ಮೆ ಇದು ನಿಂತರೆ ಸಾಕು ಎಂಬ ಆಲೋಚನೆ ಬರುತ್ತದೆ. ಆದರೆ ಸಕಾಲದಲ್ಲಿ ಮಳೆ ಬಾರದೆ ಬರ್ರನೆ ಬಂದು ಹೋಗುತ್ತದೆ ಎಂಬ ವಿಚಾರವೇ ಈಗ ಸಮಸ್ಯೆಗೆ ಕಾರಣ. ಇದಕ್ಕೆ ನಾವೇ ಕಾರಣವಲ್ಲದೆ ಮಳೆ, ಬಿಸಿಲನ್ನು ದೂರಿ ಪ್ರಯೋಜನವಿಲ್ಲ.
ಕಳೆದ ವರ್ಷದ ಆಗಸ್ಟ್ 14ರಂದು ಉಪ್ಪಿನಂಗಡಿಯಲ್ಲಿ ಸಂಗಮವಾಗಿತ್ತು. ಬಂಟ್ವಾಳದಲ್ಲಿ ಪ್ರವಾಹವಿತ್ತು. ನೇತ್ರಾವತಿ 11 ಮೀಟರ್ ಎತ್ತರದ ಗಡಿಯತ್ತ ಬಂದರೂ ಅಷ್ಟೊಂದು ಪ್ರಮಾಣದಲ್ಲಿ ಉಕ್ಕಿ ಹರಿಯಲಿಲ್ಲ. ಆದರೂ ನದಿ ನೀರು ರಸ್ತೆ, ಮನೆಗಳಿಗೆ ನುಗ್ಗಿತ್ತು.
ಗಮನಾರ್ಹ ಅಂಶವೆಂದರೆ ಯಾವಾಗಲೂ ನದಿ ನೀರು ಉಕ್ಕಿ ಹರಿಯುವ ಜಾಗಗಳಲ್ಲೇ ಕಳೆದ ವರ್ಷ ನೆರೆ ಬಂದಿತ್ತು. ಹೊಸದಾದ ಜಾಗವನ್ನು ಆಕ್ರಮಿಸಿಕೊಂಡದ್ದು ಕಡಿಮೆಯಾಗಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿತ್ತು.
ನದಿ ನೀರು ಈ ಬಾರಿ ದಿಕ್ಕು ಬದಲಾಯಿಸಿತು. ಬಂಟ್ವಾಳದಲ್ಲಿ ಹೊಸ ತಗ್ಗು ಪ್ರದೇಶಗಳು ನಿರ್ಮಾಣವಾದ ಕಾರಣ ಅಲ್ಲೆಲ್ಲಾ ನೀರು ನುಗ್ಗಿತು. ಬಹಳ ಹಿಂದೆ ಪ್ರವಾಹ ಕಾಣಿಸುತ್ತಿದ್ದ ಜಾಗಗಳು ಈ ಬಾರಿ ಜಲಾವೃತಗೊಂಡಿದ್ದವು.
ಪರಿಸ್ಥಿತಿ ನಿಭಾವಣೆಯಲ್ಲಿ ಜನಪ್ರತಿನಿಧಿಗಳು, ತಾಲೂಕು ಆಡಳಿತ ನಿರ್ವಹಿಸಿದ ಜವಾಬ್ದಾರಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾದವು. ಈಗಾಗಲೇ ಸುಮಾರು 400ರಷ್ಟು ಮಂದಿಗೆ ಸರಕಾರದ ವತಿಯಿಂದ ದೊರಕುವ ಪರಿಹಾರದ ಕಿಟ್ ವಿತರಿಸಲಾಗಿದೆ.
ಏನಾಗಬೇಕು:
ಬೆಳ್ತಂಗಡಿ ತಾಲೂಕನ್ನು ಹೋಲಿಸಿದರೆ, ಬಂಟ್ವಾಳ ತಾಲೂಕಿನಲ್ಲಿ ನದಿ ನೀರು ಒಂದೇ ದಿನದಲ್ಲಿ ಏರಿಕೆಯಾಗಿ ಇಳಿದಿದೆ. ಇನ್ನೇನಿದ್ದರೂ ಪಶ್ಚಾತ್ ಪರಿಣಾಮಗಳನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆ. ಆದರೆ ಆಡಳಿತ ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೇನೆಂದರೆ ನದಿ ನೀರಷ್ಟೇ ಅಲ್ಲ, ಸಣ್ಣ ಮಳೆಗೇ ಖಾಲಿ ಜಾಗಗಳು ಕೆರೆಯಂತಾಗದೆ, ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ನಿರ್ಮಾಣವಾಗದೇ ಇರುವುದು. ಅಂಗಡಿ, ಬಹುಮಹಡಿ ಕಟ್ಟಡಗಳೇನೋ ನೋಡಲು ಸುಂದರವಾಗಿ ಕಾಣಿಸುತ್ತವೆ. ಆದರೆ ಸುತ್ತಮುತ್ತಲೆಲ್ಲ ಜಲಾವೃತಗೊಂಡರೆ, ಕಟ್ಟಡದ ಕೆಳಭಾಗಕ್ಕೆ ಬರಲೂ ಸಾಧ್ಯವಾಗದ ಪರಿಸ್ಥಿತಿ ಇದ್ದರೆ, ಇದಕ್ಕೆ ಏನು ಮಾಡೋದು, ಮುಂದಿನ ವರ್ಷ ಹೀಗಾಗದಂತೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ ನಿವಾಸಿಗಳು, ನಾಗರಿಕರು, ನಾಗರಿಕ ಪ್ರತಿನಿಧಿಗಳು, ಆಡಳಿತ ಜೊತೆ ಸಭೆಗಳನ್ನು ಕರೆದು ನಿರ್ಧಾರ ಕೈಗೊಳ್ಳಬೇಕು.
ಎಲ್ಲರಿಗೂ ಸಮಸ್ಯೆ:
ಪ್ರವಾಹ ಬಂದರೆ ಎಲ್ಲರಿಗೂ ಸಮಸ್ಯೆ. ನದಿ ಉಕ್ಕಿ ಹರಿದರೆ ಏನೂ ಮಾಡಲಾಗುವುದಿಲ್ಲ. ಆದರೆ ಕೃತಕ ನೆರೆಯಿಂದ ಸಮಸ್ಯೆಗಳು ಬಂದರೆ ಜನಸಾಮಾನ್ಯರಿಂದ ಅಧಿಕಾರಿಗಳವರೆಗೆ ಎಲ್ಲರ ಸಮಯವೂ ಅದಕ್ಕೆ ಮೀಸಲಿಡಬೇಕಾಗುತ್ತದೆ. ನಾವು ನದಿಯನ್ನು ನಿಯಂತ್ರಿಸಲು ಆಗುವುದಿಲ್ಲ. ಆದರೆ ಕೃತಕ ನೆರೆ ಬಾರದೇ ಇರುವಂತೆ ಕ್ರಮ ಕೈಗೊಳ್ಳಲು ಖಂಡಿತಾ ಸಾಧ್ಯ. ಇಚ್ಛಾಶಕ್ತಿ, ಪ್ಲಾನಿಂಗ್ ಮತ್ತು ಘೋಷಣೆಗಳನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುವುದು ಇಂದಿನ ಜರೂರತ್ತು. ಇದು ಬಂಟ್ವಾಳನ್ಯೂಸ್ ಕಾಳಜಿಯೂ ಹೌದು.