ಪ್ರಮುಖ ಸುದ್ದಿಗಳು

ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠ ಅಭಯ

  • ಮಠದಲ್ಲಿ ಪರಿಹಾರ ಕೇಂದ್ರ ಸ್ಥಾಪನೆ,
  • ಜನರಿಗೆ ನೆರವು, ಗೋವುಗಳ ರಕ್ಷಣೆ, ಪಾಲನೆಗೂ ಪಣ
  • ಸಂತ್ರಸ್ರರ ಮಕ್ಕಳಿಗೆ ಉಚಿತ ಶಿಕ್ಷಣ

ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಬಳಿ ಇರುವ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಈಗಾಗಲೇ ಆರಂಭಿಸಿದೆ.

ಯಾವುದೇ ಸರ್ಕಾರಿ ನೆರವು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ ಕರ್ತವ್ಯ ಎಂದು ಭಾವಿಸಿ ಈ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ಹೇಳಿದ್ದಾರೆ.

ಪರಿಹಾರ ಸಾಮಗ್ರಿ ಸಂಗ್ರಹ

ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಕೂಡಾ ಶ್ರೀಮಠ ವ್ಯವಸ್ಥೆ ಮಾಡಿದೆ. ಮಂಗಳೂರಿನ ನಂತೂರು ಶ್ರೀಭಾರತೀ ಸಮೂಹಸಂಸ್ಥೆಯ ಸೇವಾಸಮಿತಿ ಕಚೇರಿ, ಮಾಣಿಮಠ ಕಚೇರಿ, ಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರು ಮಠ ಕಚೇರಿ, ಅಪ್ಸರಕೊಂಡ ಮಠದ ಕಚೇರಿ, ಬಾನ್ಕುಳಿ ಗೋಸ್ವರ್ಗ ಆವರಣದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗುತ್ತದೆ.

ಗೋರಕ್ಷಣೆ:

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಗೋವುಗಳ ರಕ್ಷಣೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ, ನೆರಿಯ, ಕಕ್ಕಿಂಜೆ, ಮುಂಡಾಜೆ, ಚಾರ್ಮಾಡಿ ಮತ್ತಿತರ ಕಡೆಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನೂರಾರು ಕುಟುಂಬಗಳ ಬದುಕು ಬೀದಿಗೆ ಬಂದಿದ್ದು, ಅವರು ಸಾಕುತ್ತಿದ್ದ ಗೋವುಗಳು ದಯನೀಯ ಸ್ಥಿತಿಯಲ್ಲಿರುವುದನ್ನು ಮನಗಂಡು ಶ್ರೀರಾಮಚಂದ್ರಾಪುರ ಮಠ ಈ ಘೋಷಣೆ ಮಾಡಿದೆ.

ಪರಿಹಾರ ಕಾರ್ಯಗಳಲ್ಲಿ ನಿರತ ಮಠದ ಕಾರ್ಯಕರ್ತರು

ಈ ಪ್ರದೇಶದಲ್ಲಿ ಬಹಳಷ್ಟು ಮಂದಿ ಪ್ರೀತಿಯಿಂದ ಸಾಕಿದ ಗೋವುಗಳ ಮಾರಾಟಕ್ಕೆ ಮುಂದಾಗಿದ್ದು, ಯಾರೂ ಗೋವುಗಳನ್ನು ಮಾರಾಟ ಮಾಡದಂತೆ ಶ್ರೀಮಠ ಮನವಿ ಮಾಡಿದೆ. ಗೋವುಗಳನ್ನು ಸಾಕಲಾಗದಿದ್ದರೆ, ಶ್ರೀಮಠದ ಗೋಶಾಲೆಗಳಿಗೆ ನೀಡಿದಲ್ಲಿ ಉಚಿತವಾಗಿ ಅವುಗಳನ್ನು ಸಾಕಲಾಗುತ್ತದೆ. ರೈತರು ಪರಿಸ್ಥಿತಿ ಸುಧಾರಿಸಿದ ಬಳಿಕ ತಮ್ಮ ಗೋವುಗಳನ್ನು ಕೊಂಡೊಯ್ಯಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶ್ರೀಮಠದ ಕಾಮದುಘಾ ಮತ್ತು ಗೋ ಪರಿವಾರ ವತಿಯಿಂದ ಸಂತ್ರಸ್ತ ಪ್ರದೇಶಗಳ ಗೋವುಗಳಿಗೆ ರಕ್ಷಣೆ ನೀಡಲಾಗಿದೆ. ಹಲವಾರು ಕಡೆಗಳಲ್ಲಿ ಗೋವುಗಳಿಗೆ ದಾಸ್ತಾನು ಮಾಡಿದ್ದ ಮೇವು ನೀರುಪಾಲಾಗಿರುವ ಹಿನ್ನೆಲೆಯಲ್ಲಿ ಮೇವು ಇರುವ ಕಡೆಗಳಿಂದ ಖರೀದಿಸಿ ಬಾಗಲಕೋಟೆ ಜಿಲ್ಲೆ ಶಿವಯೋಗ ಮಂದಿರದ ಗೋಶಾಲೆ, ಹಾನಗಲ್ ಗೋಶಾಲೆಗಳಿಗೆ ಮತ್ತು ಚಾರ್ಮಾಡಿ ಪ್ರದೇಶಗಳಲ್ಲಿ ಸಂತ್ರಸ್ತ ಜನರು ಸಾಕುತ್ತಿದ್ದ ಗೋವುಗಳಿಗೆ ಪೂರೈಕೆ ಮಾಡಲಾಗಿದೆ. ಇದರ ಜತೆಗೆ ಶ್ರೀಮಠದ ನೂರಾರು ಸೇವಾಬಿಂದುಗಳು ಶ್ರಮದಾನದ ಮೂಲಕ ಸಂತ್ರಸ್ತರ ಬದುಕು ಕಟ್ಟುವ ಮಾನವೀಯ ಕಾರ್ಯದಲ್ಲಿ ನೆರವಾಗಿದ್ದಾರೆ. ಶ್ರೀಮಠದ ಎಲ್ಲ ಅಂಗಸಂಸ್ಥೆಗಳಲ್ಲಿ ಹಾಗೂ ಶಾಖಾಮಠಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರವನ್ನು ಆರಂಭಿಸಿ ಸಂತ್ರಸ್ತರಿಗೆ ವಿತರಿಸುವ ಕಾರ್ಯವೂ ಭರದಿಂದ ಸಾಗಿದೆ. ನೆರವು ಅಗತ್ಯವಿರುವ ರೈತರು ವೇಣೂರು ಪರಮೇಶ್ವರ ಭಟ್ (9008167013) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಚಿತ ಶಿಕ್ಷಣ

ದಕ್ಷಿಣ ಕನ್ನಡ ಜಿಲ್ಲೆಯ ಬಂದಾರು- ಮೊಗ್ರು ಗ್ರಾಮದ ಪ್ರವಾಹ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಮಹತ್ವದ ಯೋಜನೆಯನ್ನು ಶ್ರೀರಾಮಚಂದ್ರಾಪುರ ಮಠ ಇಂದು ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ಬಂದಾರು- ಮೊಗ್ರು ಗ್ರಾಮಗಳ ಸಂಪರ್ಕ ಸೇತುವಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಈ ಗ್ರಾಮಗಳ ಹತ್ತಾರು ಮಕ್ಕಳು ಶಾಲೆಗಳಿಗೆ ತೆರಳಲು ಸಾಧ್ಯವಾಗದೇ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿತ್ತು.

ಸಂತ್ರಸ್ತ ಮಕ್ಕಳ ಅಸಹಾಯಕ ಸ್ಥಿತಿಗೆ ಸ್ಪಂದಿಸಿದ ಶ್ರೀಮಠ ತಕ್ಷಣದಿಂದಲೇ ಉಭಯ ಗ್ರಾಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.

ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೀಡಾಗಿರುವ ಶಿವಯೋಗ ಮಂದಿರದ ಗೋವುಗಳಿಗೆ ಒಂದು ಲೋಡ್ ಮೇವನ್ನು ಶ್ರೀಮಠದ ವತಿಯಿಂದ ವಿತರಿಸಲಾಗಿದ್ದು, ಹಾನಗಲ್ ಮಠದ ಗೋಶಾಲೆಗೆ ಒಂದು ಲೋಡ್ ಮೇವು ವಿತರಿಸಲಾಗಿದೆ. ಶಿವಯೋಗ ಮಂದಿರಕ್ಕೆ ಸಿಂಧನೂರಿನಿಂದ ಎರಡು ಲೋಡ್ ಹಾಗೂ ದಾವಣಗೆರೆಯಿಂದ ಒಂದು ಲೋಡ್ ಮೇವನ್ನು ಗೋ ಪರಿವಾರ ವತಿಯಿಂದ ವಿತರಿಸಲಾಗಿದೆ.

ಶ್ರೀಮಠದ ನೂರಾರು ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶ್ರೀಮಠದ ಸೇವಾ ವಿಭಾಗದ ವತಿಯಿಂದ ಸಂತ್ರಸ್ತರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ಪೂರೈಸಲಾಗಿದೆ. ಈಗಾಗಲೇ ಶ್ರೀಮಠದ ಎಲ್ಲ ಅಂಗಸಂಸ್ಥೆಗಳಲ್ಲಿ ನೆರೆ ಸಂತ್ರಸ್ತರಿಗೆ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

www.bantwalnews.com Editor: Harish Mambady

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts