ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಶಿಕ್ಷಣಕ್ಕೊಂದು ಹೊಸ ಆಯಾಮ ನೀಡಿದ ಹಾಗೂ ಸುಮಾರು ೩ ಸಾವಿರಕ್ಕೂ ಅಧಿಕ ಶಿಷ್ಯರನ್ನು ಹೊಂದಿರುವ ಯಕ್ಷಗಾನ ಹಿಮ್ಮೇಳ ಕಲಾವಿದ, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರಿನ ೨೦೧೮ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ. ಒಟ್ಟು ಐವರಿಗೆ ಈ ಪ್ರಶಸ್ತಿ ದೊರಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಉಡುಪಿಯ ಗುಂಡ್ಮಿ ಸದಾನಂದ ಐತಾಳ್ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ.
೫೧ ವರ್ಷಗಳ ಹಿಂದೆ ತೆಂಕುತಿಟ್ಟಿನ ಹಿಮ್ಮೇಳದ ಹಿರಿಯ ಕಲಾವಿದರೂ ಆಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹಿಮ್ಮೇಳ ತರಗತಿ ಆರಂಭಿಸಿದ ಬಳಿಕ ತೆಂಕುತಿಟ್ಟಿನ ಬಹುತೇಕ ಎಲ್ಲ ಮೇಳಗಳಲ್ಲೂ ಅವರ ಶಿಷ್ಯರದ್ದೇ ಪಾರಮ್ಯ. ಕಟೀಲು, ಧರ್ಮಸ್ಥಳ ಹೀಗೆ ಬಹುತೇಕ ಮೇಳಗಳ ಭಾಗವತರು ಮತ್ತು ಚೆಂಡೆ ಮದ್ದಳೆ ವಾದಕರು ಮಾಂಬಾಡಿ ಶಿಷ್ಯರಾಗಿದ್ದಾರೆ.
ರಾಜ್ಯಪ್ರಶಸ್ತಿ ವಿಜೇತ ಕೀರ್ತಿಶೇಷ ಮಾಂಬಾಡಿ ನಾರಾಯಣ ಭಾಗವತರ ಪುತ್ರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ತನ್ನ ತಂದೆಯವರಂತೆ ಹಿಮ್ಮೇಳ ಶಿಕ್ಷಣವನ್ನು ನೀಡುತ್ತಿದ್ದಾರೆ.೧೯೪೯ ಮಾರ್ಚ್ ೨೭ ರಂದು ಜನಿಸಿದ ಮಾಂಬಾಡಿಯವರ ಮೊದಲ ವೃತಿ ಜೀವನ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕಟೀಲು ಮೇಳದಿಂದ ಪ್ರಾರಂಭ. ತಂದೆಯವರಿಂದ ಕಲಿತ ಬಾಲಪಾಠದ ನಂತರ ಹೆಸರಾಂತ ಕಲಾವಿದರಾದ ಕುದ್ರೆಕೋಡ್ಲು ರಾಮ ಭಟ್ಟ, ನಿಡ್ಲೆ ನರಸಿಂಹ ಭಟ್ಟರ ಮೆಚ್ಚಿನ ಸಾಹಚರ್ಯದಿಂದ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡ ’ಸುಬ್ಬಣ್ಣ’, ಮೃದಂಗದ ನಡೆಗಳನ್ನು ಅಭ್ಯಸಿಸಿದ್ದು ಕಾಂಚನ ರಾಮ ಭಟ್ಟರಲ್ಲಿ. ಮೂಲ್ಕಿ ಮೇಳ, ಕೂಡ್ಲು ಮೇಳಗಳಲ್ಲಿ ತಲಾ ಎರಡೆರಡು ವರ್ಷ ವ್ಯವಸಾಯ ನಡೆಸಿದ ಮಾಂಬಾಡಿಯವರ ಕಲಾಸೇವೆಯ ಉಚ್ಚ್ರಾಯದ ಪರ್ವ ಒಂಭತ್ತು ವರ್ಷ ಶ್ರೀ ಧರ್ಮಸ್ಥಳ ಮೇಳದ ತಿರುಗಾಟ ಹಾಗೂ ಕಡತೋಕ ಮಂಜುನಾಥ ಭಾಗವತರ ಜತೆಗಾರಿಕೆ. ಇದರಂತೆಯೆ ಮುಂದೆ ಮೂರು ವರ್ಷ ಕದ್ರಿ ಮೇಳದಲ್ಲಿ ಪ್ರತಿಭಾನ್ವಿತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಜತೆಗಿನ ವ್ಯವಸಾಯ. ಕದ್ರಿ ಮೇಳದ ಹೊಸ ಪ್ರಯೋಗಗಳಿಗೆ ಹೊಳ್ಳರ ಹಾಡುಗಾರಿಕೆ ಮತ್ತು ಮಾಂಬಾಡಿ ಚೆಂಡೆ ಅಂದು ಸೂಪರ್ ಹಿಟ್ ಆಗಿತ್ತು.
ಸುಮಾರು ಇಪ್ಪತ್ತು ವರ್ಷ ವ್ಯವಸಾಯಿಯಾಗಿದ್ದ ಮಾಂಬಾಡಿಯವರು ಜೊತೆ ಜೊತೆಗೇ ಹಿಮ್ಮೇಳ ಶಿಕ್ಷಣವನ್ನು ೧೯೬೮ರಲ್ಲಿ ಕಲಾತಪಸ್ವಿ ದಿ.ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಆಹ್ವಾನದಂತೆ ಸುಳ್ಯ ತಾಲೂಕಿನ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ಆರಂಭಿಸಿದರು. ಆ ನಂತರ ದ.ಕ, ಕಾಸರಗೋಡು ಜಿಲ್ಲೆಗಳ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಾಂಬಾಡಿಯವರ ಹಿಮ್ಮೇಳ ತರಗತಿಗಳು ನಡೆದಿವೆ.