ಸಿನಿಮಾ

ಆ ಸಂದರ್ಶನದಲ್ಲಿ ಡಾ. ರಾಜ್ ಏನು ಹೇಳಿದ್ದರು ಗೊತ್ತಾ?

ಹಿರಿಯ ಪತ್ರಕರ್ತ ಉದಯಕುಮಾರ ಪೈ ಬರೆಯುತ್ತಿರುವ ಡಾ. ರಾಜ್ ಕುರಿತ ಸರಣಿ ಲೇಖನವಿದು

 

 

ಉದಯಕುಮಾರ ಪೈ

ವಿಜಯಚಿತ್ರ, ರೂಪತಾರಾ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. 

ಇದು ಕೊನೆಯ ಕಂತು. ಡಾ. ರಾಜ್ ಕುಮಾರ್ ಅವರ ಸಂದರ್ಶನ ಪೂರ್ಣ ವಿಚಾರಗಳು ಇಲ್ಲಿವೆ.

ಹಿಂದಿನ ಕಂತು ಓದಲು ಈ ಲಿಂಕ್ ಕ್ಲಿಕ್ ಮಾಡಿರಿ.

https://bantwalnews.com/2019/06/14/rajkumar-7/

ಕರ್ನಾಟಕ ಸಂಘದಲ್ಲಿ ಅಭಿನಂದನೆ ಕಾರ್ಯಕ್ರಮ ಮುಗಿಯುವಾಗ ರಾತ್ರಿ ೮.೩೦ ದಾಟಿತ್ತು. ಕಾರ್ಯಕ್ರಮ ಮುಗಿದ ೧೦ ನಿಮಿಷಗಳೊಳಗೆ ರಾಜಕುಮಾರ ವುಡ್ ಲ್ಯಾಂಡ್ಸ್ ನತ್ತ ಹೊರಟರು. ಸಂಘದಿಂದ ಹೊರಬಂದ ನಾನು ಕೋಡಂಬಾಕ್ಕಂ ರೈಲ್ವೇ ಸ್ಟೇಶನ್ ಸಮೀಪದ ಹೊಟೇಲಿನಲ್ಲಿ ಸ್ವಲ್ಪ ತಿಂದ ಶಾಸ್ತ್ರ ಮಾಡಿ, ಸಮಯ ಕಳೆಯಲು ಚಿತ್ರಮಂದಿರ ಒಂದೇ ದಾರಿ ಎಂದು ತಿಳಿದು ಸಮೀಪದಲ್ಲಿದ್ದ ಲಿಬರ್ಟಿ ಥಿಯೇಟರ್ ಗೆ ಹೋದೆ. ಚಿತ್ರ ನೋಡುತ್ತಿದ್ದರೂ, ಇದು ಸಾಧ್ಯವೇ? ಮರುದಿನ ಬೆಂಗಳೂರಿಗೆ ಹೋಗುವ ವ್ಯಕ್ತಿ ರಾತ್ರಿ ನಿದ್ದೆಗೆಟ್ಟು ನನಗೆ ಸಂದರ್ಶನ ನೀಡುತ್ತಾರೆಯೇ ? ಜತೆಗೆ ಅಪರಾತ್ರಿಯಲ್ಲಿ ಸಂದರ್ಶನ ನೀಡಲು ಕೇಳಿದ್ದು ಸರಿಯೇ ? ಮನಸ್ಸಿನಲ್ಲಿ ತಾಕಲಾಟ ನಡೆದಿತ್ತು. ಆದರೆ ಸಂಪಾದಕರ ಆಣತಿ ಪಾಲಿಸಬೇಕಾದ ಅನಿವಾರ್ಯ ಎಲ್ಲವನ್ನೂ ಮೀರಿಸಿತ್ತು.

ಮಧ್ಯಾಂತರದಲ್ಲಿ ಚಿತ್ರಮಂದಿರದಿಂದ ಹೊರಬಂದು ಪಕ್ಕದಲ್ಲೇ ಇದ್ದ ‘ಟೀಕ್ಕಡೈ'(ಚಹಾ ಅಂಗಡಿ)ಗೆ ನುಗ್ಗಿ ಒಂದು ಚಹಾಗೆ ಹೇಳಿ, ನನ್ನ ಬಗಲು ಚೀಲಕ್ಕೆ ಕೈ ಹಾಕಿ ವಿಜಯನಾರಸಿಂಹ ಅವರು ಬರೆದುಕೊಟ್ಟ ಪ್ರಶ್ನೆಗಳತ್ತ ಒಮ್ಮೆ ಕಣ್ಣು ಹಾಯಿಸಲು ಹಾಳೆಗಳನ್ನು ಹೊರ ತೆಗೆದೆ. ಚೀಲದಲ್ಲಿ ಬರೀ ಖಾಲಿ ಹಾಳೆಗಳೇ ಇದ್ದವು. ವಿಜಯನಾರಸಿಂಹ ಅವರು ಪ್ರಶ್ನೆಗಳನ್ನು ಬರೆದ ಹಾಳೆ ನನ್ನ ಕೈಗಿಟ್ಟಾಗ ಅದೆಲ್ಲೂ ಕೈ ತಪ್ಪಿ ಹೋಗಬಾರದೆಂದು ಟೇಬಲ್ ಡ್ರಾವರ್ ನೊಳಗೆ ಇಟ್ಟಿದ್ದನ್ನು ಪುನಃ ಹೊರ ತೆಗೆಯಲೇ ಇಲ್ಲ. ಈಗ ನಿಜಕ್ಕೂ ಕಂಗಾಲಾದೆ. ಪ್ರಶ್ನೆ ಪತ್ರಿಕೆಯೇ ಕೈಯಲ್ಲಿಲ್ಲ. ದುರದೃಷ್ಟಕ್ಕೆ ಅದನ್ನು ಅವರು ಕೈಗೆ ಕೊಟ್ಟಾಗ ನೋಡದಿದ್ದುದರಿಂದ, ಅವರು ಏನು ಬರೆದುಕೊಟ್ಟರೆಂಬುದೂ ತಿಳಿದಿಲ್ಲ. ಗರ ಬಡಿದವನಂತೆ ಕುಳಿತೆ. ಕೊನೆಗೆ ಹಾಗೂ-ಹೀಗೂ ಚಹಾ ಕುಡಿದು, ಹಣ ತೆತ್ತು ರಸ್ತೆಗಿಳಿದಾಗ ೧೧.೩೦ ದಾಟಿತ್ತು.

ಕೋಡಬಾಕ್ಕಂನಿಂದ ಟ್ರಸ್ಟ್ ಪುರಂ ಹೋಗಲು ಹಗಲು ಹೊತ್ತಾದರೆ ಇಪ್ಪತ್ತು ಇಪ್ಪತ್ತೈದು ನಿಮಿಷ ಬೇಕು. ರಾತ್ರಿ ಹೊತ್ತಾದುದರಿಂದ ಹದನೈದು ನಿಮಿಷಗಳೊಳಗೆ ನಂ.೨೭, ೨ನೇ ಅಡ್ಡರಸ್ತೆ, ಟ್ರಸ್ಟಪುರಂ ವಿಳಾಸಕ್ಕೆ ಅಂದರೆ ರಾಜಕುಮಾರ ಮನೆ ತಲುಪಿದೆ. ರಾಜಕುಮಾರ ಇನ್ನೂ ಬಂದಿರಲಿಲ್ಲ. ಪ್ರಶ್ನೆ ಪತ್ರಿಕೆ ಕಾರ್ಯಾಲಯದಲ್ಲಿ, ನಾನು ಬೀದಿಯಲ್ಲಿ . ಸಂದರ್ಶನ ನೀಡಬಹುದೇ ? ಅನುಮಾನ ಬೇರೆ. ಹಾಗೆ ನೀಡಿದರೆ ಏನನ್ನು ಕೇಳಬೇಕು ? ಒಟ್ಟೂ ಅಯೋಮಯ ಸ್ಥಿತಿ, ಗೊಂದಲ, ಚಡಪಡಿಕೆ. ಮದರಾಸಿನ ಜನರೆಲ್ಲ ಹರಿಸುವ ಬೆವರು ನನ್ನೊಬ್ಬನ ಮೈಯಿಂದ ಹರಿಯುತ್ತಿರುವ ಅನುಭವ. ಹತ್ತು ನಿಮಿಷ ಕಳೆದಿರಬೇಕು, ರಾಜಕುಮಾರ ಆಗಮಿಸಿದರು. ಬಾಗಿಲ ಜಟಕನಂತೆ (ನಮ್ಮೂರ ಕಡೆಗೆ ಹೇಳುವ ಮಾತು) ನನ್ನನ್ನು ನೋಡಿ ಮುಖದಲ್ಲಿ ದಣಿವಿನ ಛಾಯೆ ಇದ್ದರೂ ‘ತುಂಬ ಕಾಯಿಸಿಬಿಟ್ಟೆನೋ ಏನೋ ! ಬನ್ನಿ ‘ ಎಂದು ಕೈಹಿಡಿದು ಬರ ಮಾಡಿಕೊಂಡರು. ಕೆಲಸದವನನ್ನು ಕರೆದು ನನ್ನನ್ನು ಬಾಲ್ಕನಿಗೆ ಕರೆದೊಯ್ಯುವಂತೆ ಹೇಳಿ, ಅಲ್ಲಿ ಮೂರು ಕುರ್ಚಿ ಹಾಕಲು ತಿಳಿಸಿದರು. ‘ನೀವು ಬಾಲ್ಕನಿಗೆ ಹೋಗಿ, ಐದು ನಿಮಿಷದಲ್ಲಿ ಬರ್ತೀನಿ’ ಎಂದು ಹೇಳಿದರು. ಬಾಲ್ಕನಿಯಲ್ಲಿ ಕುಳಿತೆ. ಆರೇಳು ನಿಮಿಷಗಳಲ್ಲಿ ರಾಜಕುಮಾರ ಹಾಗೂ ಪಾರ್ವತಮ್ಮ ಬಂದರು. ಮನೆಯ ಯಾರೋ ಮಹಿಳೆ ಹಬೆಯಾಡುವ ಎರಡು ಕಾಫಿ, ಎರಡು ತಟ್ಟೆಗಳಲ್ಲಿ ನಿಪ್ಪಟ್ಟುಗಳನ್ನು ತಂದು ಟೀಪಾಯ್ ಮೇಲಿಟ್ಟರು. ಕಾಫಿ ಕುಡಿಯಿರಿ, ಮನೆಯಲ್ಲಿ ಮಾಡಿದ ನಿಪ್ಪಟ್ಟು, ರುಚಿ ನೋಡಿ’ ಎಂದು ಒಂದೆರಡು ನಿಪ್ಪಟ್ಟು ಬಾಯಿಗೆ ಹಾಕಿಕೊಂಡು ಕಾಫಿ ಕುಡಿದರು. ನಾನೂ ಅದನ್ನು ಅನುಸರಿಸಿದೆ ಎಂದು ಹೇಳುವ ಅಗತ್ಯವಿಲ್ಲ. ಕೆಳಗೆ ಹೋದ ಮಹಿಳೆ ಪುನಃ ಮೇಲೆ ಬಂದು ಗೋಡೆಯ ಹತ್ತಿರ ಅದೇನನ್ನೋ ಇಟ್ಟು ಹೋದರು.

ಮನಸ್ಸಿನಲ್ಲಿ ಗೊಂದಲವಿದ್ದರೂ, ಯಾಂತ್ರಿಕವಾಗಿ ಕಾಫಿ ಹೀರಿದೆ. ಏನು ಮಾತನಾಡಬೇಕೆಂದು ತಿಳಿಯದಿದ್ದರೂ, ಮಾತು ಪ್ರಾರಂಭಿಸಲೇಬೇಕಾಗಿತ್ತಾದುದರಿಂದ ಪದ್ಮಭೂಷಣ ಪ್ರಶಸ್ತಿ ದೊರೆತುದಕ್ಕಾಗಿ ‘ಫಿಲ್ಮಾಲಯ’ ಹಾಗೂ ಪತ್ರಿಕೆಯ ಓದುಗರ ಬಳಗದ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತ, ‘ಪದ್ಮಭೂಷಣ ಪ್ರಶಸ್ತಿಯ ಮೂಲಕ ರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ಗುರುತಿಸಿ , ಗೌರವಿಸಲಾಗಿದೆ. ನೀವು ಇದನ್ನು ಹೇಗೆ ಗ್ರಹಿಸುತ್ತಿದ್ದೀರಿ, ಇದರ ಬಗ್ಗೆ ಏನು ಹೇಳುತ್ತೀರಿ ?’ ನನಗರಿಯದಂತೆ ಪ್ರಶ್ನೆ ಚಿಮ್ಮಿತು.

ಕೊನೆಯ ಗುಟುಕು ಹೀರಿ ಕಪ್ ಕೆಳಗಿಟ್ಟ ರಾಜಕುಮಾರ ಒಂದು ಕ್ಷಣ ಮೌನದಿಂದಿದ್ದು ‘ಈ ರಾಜಕುಮಾರ ತಾನಾಗಿ ರೂಪುಗೊಂಡವನಲ್ಲ. ಹಲವರು, ಹಲವು ಕಾಲದಿಂದ ರೂಪಿಸಿದ್ದಾರೆ. ಮಾತು, ಸಂಗೀತ, ಅಭಿನಯ ಕಲಿಸಿದ ನುರಿತವರು, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದ ರಂಗಭೂಮಿಯ ಹಿರಿಯರು , ಅನ್ನ ನೀಡಿ ಸಾಕಿದವರು, ಚಿತ್ರರಂಗದಲ್ಲಿ ಅವಕಾಶ ನೀಡಿ ಒಳ್ಳೊಳ್ಳೆಯ ಪಾರ್ಟುಗಳನ್ನು ಮಾಡಿಸಿದವರು, ದೃಶ್ಯಗಳ ರಸಪುಷ್ಟಿಯಾಗುವಂತೆ ಸಹಕರಿಸಿದ ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು, ಸಂಕಲನಕಾರರು ಹಾಗೂ ಚಿತ್ರದ ಶಿಲ್ಪಿಗಳೆನಿಸಿದ ನಿರ್ದೇಶಕರು, ಬೆನ್ನುಲುಬಾಗಿ ನಿಂತ ನಿರ್ಮಾಪಕರು ಹೀಗೆ ಹಲವರ ಸತತ ಪರಿಶ್ರಮದ ಫಲ ಈ ರಾಜಕುಮಾರ. ಜತೆಗೆ ಪ್ರೋತ್ಸಾಹಿಸಿದ ಪ್ರೇಕ್ಷಕ ವರ್ಗ. ಇವರೆಲ್ಲರ ಪ್ರತಿನಿಧಿಯಾಗಿ ರಾಜಕುಮಾರನಿಗೆ ಈ ಪ್ರಶಸ್ತಿ ನೀಡಿದ್ದಾರೆ. ಹಾಗಾಗಿ ಈ ಪ್ರಶಸ್ತಿ ಇವರೆಲ್ಲರಿಗೂ ಸೇರಿದ್ದು, ಇದರಲ್ಲಿ ಎಲ್ಲರಿಗೂ ಪಾಲಿದೆ ಎಂದು ನಂಬಿದ್ದೇನೆ ಎಂದು ಸ್ವಲ್ಪ ದೀರ್ಘವಾಗಿ ಹೇಳಿದರು.

ಈ ಉತ್ತರ ಮುಂದಿನ ಪ್ರಶ್ನೆಗೆ, ಇನ್ನೊಂದು ಉತ್ತರ ಮತ್ತೊಂದು ಪ್ರಶ್ನೆಗೆ ದಾರಿ ಮಾಡಿಕೊಟ್ಟು ಮಾತುಕತೆ ಮುಂದುವರಿಯಿತು. ಹೀಗೆ ಮಾತನಾಡುತ್ತ ಅವರ ಕುರಿತ ವಿವಾದಗಳ ಬಗ್ಗೆ, ಅದರಲ್ಲೂ ವಿತರಣ ಸಂಸ್ಥೆ ಹಾಗೂ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದಾಗ, ಇದೊಂದು ಪರ್ಯಾಯ ಉದ್ಯಮ ಎಂದೆಲ್ಲ ನಡೆದ ಟೀಕೆ-ಟಿಪ್ಪಣಿಗಳ ಕುರಿತು ಪ್ರಾಸಂಗಿಕವಾಗಿ ಪ್ರಶ್ನಿಸಿದೆ. ‘ಜನರ ಪ್ರೀತಿ-ವಿಶ್ವಾಸ, ಆದರ-ಅಭಿಮಾನಗಳಂತೆ ಟೀಕೆ-ಟಿಪ್ಪಣಿಗಳನ್ನೂ ಸ್ವೀಕರಿಸಬೇಕಾಗುತ್ತದೆ. ಸ್ವೀಕರಿಸಿದ್ದೇನೆ. ಸಿಹಿ ತಿಂಡಿಗಳನ್ನು ಸತತವಾಗಿ ತಿನ್ನಲು ಸಾಧ್ಯವಿಲ್ಲ. ನಡುನಡುವೆ ಖಾರದ, ಕುರುಕು ತಿಂಡಿಯನ್ನು ತಿನ್ನಬೇಕು. ಆಗ ಮುಂದೆ ಸಿಹಿಯ ಸವಿಯನ್ನು ಸವಿಯಲು ನಾಲಗೆ ಸಿದ್ಧವಾಗುತ್ತದೆ. ಹಾಗೆಯೇ ಇದೂ ಕೂಡ. ಹಲವು ವಿತರಣ ಹಾಗೂ ನಿರ್ಮಾಣ ಸಂಸ್ಥೆಗಳಿವೆ. ಒಂದೊಂದನ್ನೂ ಪರ್ಯಾಯ ಉದ್ಯಮ ಎಂದು ಹೇಳಲಾದೀತೇ ? ಅವುಗಳಂತೆ ನಮ್ಮ ಸಂಸ್ಥೆಯೂ ಒಂದು ಅಷ್ಟೇ’ ಎಂದು ಹೇಳಿದರು.

ಅಷ್ಟರಲ್ಲಿ ಪಾರ್ವತಮ್ಮನವರು ಮಾತನಾಡಿ ‘ಈ ವಿಷಯದಲ್ಲಿ ನಾನೊಂದು ಮಾತು ಹೇಳಬಹುದೇ ?’ ಎಂದರು. ಹೂಂ ಅಗತ್ಯವಾಗಿ ಎಂದೆ. ‘ ನಮ್ಮ ಯಜಮಾನರ ಚಿತ್ರಗಳ ವಿತರಣೆಯಿಂದ ತಮಗೆ ನಷ್ಟವಾಗುತ್ತಿದೆ ಎಂದು ವಿತರಕರು ಹೇಳಲಾರಂಭಿಸಿದರು. ಅವರಿಗೇಕೆ ನಷ್ಟವಾಗಬೇಕು ಎಂದು ವಿತರಣೆ ಸಂಸ್ಥೆ ಆರಂಭಿಸಿದೆವು. ಹಾಗೆಯೇ ಕೆಲವು ನಿರ್ಮಾಪಕರು ಇವರನ್ನು ಹಾಕಿ ತಯಾರಿಸಿದ ಚಿತ್ರಗಳ ಬಂಡವಾಳ ವಾಪಸ್ ಬರಲಿಲ್ಲ ಎಂದು ಅವರಿವರಲ್ಲಿ ಅಲವತ್ತುಕೊಳ್ಳಲಾರಂಭಿಸಿದರು. ಇವರಿಂದಾಗಿ ಅವರೇಕೆ ನಷ್ಟ ಅನುಭವಿಸಬೇಕೆಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದೃವು. ಈ ವಿತರಕರಿಗೆ ಹಾಗೂ ನಿರ್ಮಾಪಕರಿಗೆ ಹೇಗೆ ನಷ್ಟವಾಯಿತು ಎಂದು ನಮಗೆ ತಿಳಿಯಲಿಲ್ಲ. ವ್ಯವಹಾರದಲ್ಲಿ ಎಲ್ಲೋ ಮೋಸ ಹೋಗಿರಬಹುದು ಪಾಪ !’ ಎಂದು ಅದರ ಹಿನ್ನೆಲೆ ತಿಳಿಸಿದರು. ಮೇಲ್ನೋಟಕ್ಕೆ ಸರಳವಾದ ಮಾತಿನಲ್ಲಿ ಸಾಕಷ್ಟು ಹರಿತ-ಇರಿತಗಳನ್ನು ಗುರುತಿಸಬಹುದಾಗಿತ್ತು.ಈ ಒಂದು ವಿಷಯದಲ್ಲಿ ಬಿಟ್ಟರೆ ಮಿಕ್ಕಂತೆ ಪಾರ್ವತಮ್ಮ ಮೌನ ಪ್ರೇಕ್ಷಕರಾಗಿದ್ದರು. ಮುಖದಲ್ಲಿ ಆಗಾಗ ಮುಗುಳ್ನಗೆ ಬೀರುತ್ತಿದ್ದರು.

ರಾಜಕುಮಾರ ಅಭಿನಯದ ಕೆಲವು ಚಿತ್ರಗಳನ್ನು ಹೋಲಿಸಿ, ಇಂಥ ಚಿತ್ರಗಳಿಗೆ ರಾಜಕುಮಾರ ಅಗತ್ಯವಿರಲಿಲ್ಲವೇನೋ ಎಂದೆನಿಸುತ್ತಿದೆ ಎಂದಾಗ, ‘ನೀವು ಹೇಳುವುದೇನೋ ಸರಿ. ಅನಕೃ ತಮ್ಮ ಕೆಲವು ಕೃತಿಗಳನ್ನು ಋಣ ಪರಿಹಾರ ಗ್ರಂಥಮಾಲೆ ಎಂದು ಹೇಳಿದ್ದಾರೆ. ಅದರಂತೆಯೇ ಇದೂ ಕೂಡ. ದಯವಿಟ್ಟು ನನಗೂ, ಅನಕೃಷ್ಣರಾಯರಿಗೂ ಹೋಲಿಸಬೇಡಿ. ಅದು ಸರಿಯಲ್ಲ. ದೊಡ್ಡ ಕುಟುಂಬದ ಹೊಣೆಗಾರಿಕೆ ನಿರ್ವಹಿಸಲು ಹಣಕಾಸಿನ ಅಗತ್ಯವೂ ಇದೆ. ಕಲೆಯಷ್ಟೇ ಬದುಕೂ ಮುಖ್ಯ. ನಾನು ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದವನು. ಹಾಗಾಗಿ ಇಂಥದೆಲ್ಲ ಅನಿವಾರ್ಯ. ಹಾಗೆಂದು ಕೀಳುಮಟ್ಟದ ಅಭಿರುಚಿಯ ಚಿತ್ರಗಳಲ್ಲಿ ನಾನು ಅಭಿನಯಿಸಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ’ ಎಂದರು.

ಮಾತಿನ ನಡುವೆ ಗೋಕಾಕ ಆಂದೋಲನ, ಅದರ ವಿವಾದಗಳ ಕುರಿತು ಪ್ರಸ್ತಾಪವಾಯಿತು. ಗೋಕಾಕರು ನೀಡಿದ ವರದಿ ಯಾವ ಭಾಷೆಯ ವಿರೋಧಿಯೂ ಅಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಮನ್ನಣೆ ದೊರೆಯಬೇಕೆಂದು ಹೇಳಿದರೆ ಅದು ಇತರ ಭಾಷೆಗಳನ್ನು ಹೇಗೆ ವಿರೋಧಿಸಿದಂತಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಹಾಗೆ ಬೇರೆ ಭಾಷೆಗಳನ್ನು, ಭಾಷಿಕರನ್ನು ವಿರೋಧಿಸಿದರೆ ಪರೋಕ್ಷವಾಗಿ ನಾನು ಕನ್ನಡ-ಕನ್ನಡಿಗರ ವಿರೋಧಿಯಾಗುತ್ತೇನೆ. ಏಕೆಂದರೆ ಕನ್ನಡಿಗರು ಇತರ ಹಲವಾರು ರಾಜ್ಯಗಳಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ. ಇತರ ಪ್ರದೇಶಗಳಲ್ಲಿ ಹೇಗೆ ಆಯಾ ಪ್ರದೇಶದ ಭಾಷೆಗೆ ಪ್ರಾಮುಖ್ಯವಿದೇಯೋ, ಅದೇ ಸಹಜ ನ್ಯಾಯ ಕರ್ನಾಟಕಕ್ಕೂ ಸಿಗಬೇಕು ಎಂದು ಗೋಕಾಕ ಆಂದೋಲನದಲ್ಲಿ ಪಾಲ್ಗೊಂಡವರ ಆಶಯ. ಇದು ಹೇಗೆ ಅನ್ಯ ಭಾಷಾ ವಿರೋಧಿಯಾಯಿತೋ ತಿಳಿಯದು. ಈ ಕುರಿತು ಹಿರಿಯರು, ತಜ್ಞರು ಹೇಳಬೇಕು. ಇದಕ್ಕಿಂತ ಹೆಚ್ಚು ನಾನೇನೂ ಹೇಳಲಾರೆ‘ ಎಂದರು.

ಹಾಗೆಯೇ ರಾಜಕೀಯದ ಕುರಿತು ಕೇಳಿದಾಗ, ‘ಅದು ನನ್ನ ಕ್ಷೇತ್ರವಲ್ಲ. ಅದಕ್ಕೆಲ್ಲ ಸಾಕಷ್ಟು ತಿಳಿವಳಿಕೆ ಅಗತ್ಯ. ಸಮಸ್ಯೆಗಳನ್ನು ಅರಿತು ಪರಿಹಾರ ಸೂಚಿಸಲು, ಆಡಳಿತ ನಡೆಸಲು ನನಗೆ ಸಾಮರ್ಥ್ಯವಿಲ್ಲ. ಜತೆಗೆ ಎಲ್ಲ ಪಕ್ಷಗಳಲ್ಲೂ ನನಗೆ ಅಭಿಮಾನಿಗಳಿದ್ದಾರೆ. ರಾಜಕೀಯ ಪ್ರವೇಶಿಸಿ, ಅವರಲ್ಲಿ ಒಡಕು ಮೂಡಿಸುವ ಕೆಲಸ ನಾನೇಕೆ ಮಾಡಲಿ ? ಹಾಗಾಗಿ ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ. ಹಲವು ಬಾರಿ ಈ ಬಗ್ಗೆ ಹೇಳಿದ್ದೇನೆ, ಈಗಲೂ ಅದನ್ನೇ ಪುನಃ ಹೇಳುತ್ತೇನೆ’ ಎಂದರು.

‘ನಟನಾಗಿ ರಾಜಕುಮಾರ ಬೆಳವಣಿಗೆಯಲ್ಲಿ ಇಮೇಜ್ ಎಲ್ಲೋ ಒಂದುಕಡೆ ಏಕತಾನತೆಯಲ್ಲಿ ಸಾಗುವಂತೆ ಮಾಡಿದೆ ಎಂದು ಅನಿಸುತ್ತಿಲ್ಲವೇ ?’ ಪ್ರಶ್ನೆಯಲ್ಲಿ ಸ್ವಲ್ಪ ಸಂಕೋಚವೂ ಇತ್ತು.

ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳಿರುತ್ತವೆ. ನಾನು ಮೂಲತಃ ರಂಗಭೂಮಿಯಿಂದ ಬಂದವನು. ಅಂದಿನ ವ್ಯವಸಾಯ ರಂಗಭೂಮಿಯ ನಾಟಕಗಳ ಮೂಲ ತಳಹದಿ ಒಳಿತಿನ ಗೆಲುವು, ಕೆಡುಕಿನ ಸೋಲು. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಎಂಬ ನೀತಿ ಪ್ರತಿಪಾದನೆ. ನಾನು ಅಂಥ ಪರಂಪರೆಯಿಂದ ಬಂದವನಾದುದರಿಂದ, ಅಂಥ ಮೌಲ್ಯಗಳನ್ನೇ ಪ್ರತಿಪಾದಿಸುವ ಪಾತ್ರಗಳನ್ನು ಇಷ್ಟಪಡುತ್ತೇನೆ. ಸಿನಿಮಾದಿಂದ ಸಮಾಜದಲ್ಲಿ ಒಳ್ಳೆಯದಾಗುತ್ತದೆ ಎಂದು ವಾದಿಸಲು ಹೋಗುವುದಿಲ್ಲ. ಆದರೆ ನಾನು ಅಭಿನಯಿಸುವ ಪಾತ್ರಗಳು ಪ್ರೇಕ್ಷಕರಲ್ಲಿ ಒಳಿತನ್ನು ಮಾಡಲು ಪ್ರೇರೇಪಿಸದಿದ್ದರೂ, ಕೆಡುಕನ್ನು ಮಾಡಲು ಪ್ರಚೋದಿಸಬಾರದು ಎಂಬ ಎಚ್ಚರ ನನ್ನದು. ಹಾಗೆಯೇ ನಾಯಕ ಸಂದರ್ಭದ ಶಿಶುವಾಗಿ ತಪ್ಪು ಮಾಡುವುದು, ಅದನ್ನು ಸಮರ್ಥಿಸುವುದು, ತಾನು ಮಾಡಿದ ತಪ್ಪಿಗೆ ಸಮಾಜವನ್ನು ಹೊಣೆಗಾರನಾಗಿಸುವುದು ಚಿತ್ರದಲ್ಲಿ ತಾರ್ಕಿಕವಾಗಿ ಸರಿ ತೋರಬಹುದು. ಆದರೆ ಅದು ನೇತ್ಯಾತ್ಮಕ ಪರಿಣಾಮ ಬೀರಿದರೆ, ಸಮಾಜದ ನೆಮ್ಮದಿ ಕೆಡುವ ಸಾಧ್ಯತೆ ಇದೆ. ಒಳ್ಳೆಯ ವಿಷಯ ಪರಿಣಾಮ ಬೀರಲು ಸಮಯ ಹಿಡಿಯಬಹುದು. ಆದರೆ ಕೆಡುಕು ಬಹುಬೇಗ ಪರಿಣಾಮ ಬೀರುತ್ತದೆ. ಚಿತ್ರಗಳು ವಿಚಾರ ಪ್ರಚೋದಕವಾಗಿರಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವಂತಾಗಬಾರದು. ಭಗ್ನ ಮನೋರಥನಾಗುವ, ಹತಾಶೆಯಲ್ಲಿ ಮುಳುಗುವ ಪಾತ್ರಗಳು ಆಳವಾದ ಪರಿಣಾಮ ಬೀರುತ್ತವೆ. ಸಮಾಜದಲ್ಲಿ ನಿರ್ಮಾಣದ ಪ್ರವೃತ್ತಿ, ಭರವಸೆ ತುಂಬುವ ಕೆಲಸವಾಗಬೇಕೇ ಹೊರತು ಹತಾಶೆ ಮೂಡಿಸುವ, ವಾಸ್ತವತೆಯ ಹೆಸರಿನಲ್ಲಿ ನಂಬಿಕೆ ಕಳೆದುಕೊಳ್ಳುವ ಪಾತ್ರಗಳನ್ನು ರೂಪಿಸುವಾಗ, ಅಂಥ ಪಾತ್ರ ಪೋಷಣೆ ಮಾಡುವಾಗ ಹಲವು ಬಾರಿ ಆಲೋಚಿಸಬೇಕಾಗುತ್ತದೆ. ಹಾಗಾಗಿ ಏನೇ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ, ಬದುಕಿನಲ್ಲಿ ನಂಬಿಕೆ ಮೂಡಿಸುವ, ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಾತ್ರಗಳಿಗೆ ನಾನು ಆದ್ಯತೆ ನೀಡುತ್ತೇನೆ. ಏಕೆಂದರೆ ಸಿನಿಮಾ ಒಂದು ಸಶಕ್ತ ಮಾಧ್ಯಮ’ ಎಂದು ಹೇಳಿದರು.

ಹಾಗೆಯೇ ಕಲಾತ್ಮಕ ಚಿತ್ರಗಳ ಬಗೆಗೆ ಮೆಚ್ಚುಗೆ ಸೂಚಿಸಿದರು. ಹೀಗೆ ವಿವಿಧ ವಿಷಯಗಳ ಕುರಿತು ಸುದೀರ್ಘ ಮಾತುಕತೆ ನಡೆಯಿತು. ಹಗಲಿಡೀ ಬಿಡುವಿಲ್ಲದೇ ಕಾರ್ಯಕ್ರಮಗಳಲ್ಲಿ ತೊಡಗಿದ್ದರೂ ಆ ಅಪರಾತ್ರಿಯಲ್ಲಿ ರಾಜಕುಮಾರ ಸಂದರ್ಶನ ನೀಡಿದ್ದು ನನ್ನ ಪಾಲಿಗೆ ಮರೆಯಲಾಗದ ಘಟನೆ. ಸಂದರ್ಶನ ಮುಗಿದಾಗ ರಾತ್ರಿ ೨.೩೦ ದಾಟಿತ್ತು.

ಅಂಥ ಸಮಯದಲ್ಲಿ ನಿದ್ದೆಗೆಟ್ಟು ಪತ್ರಿಕೆಗಾಗಿ ಸಂದರ್ಶನ ನೀಡಿದ ರಾಜಕುಮಾರ ಹಾಗೂ ಪಾರ್ವತಮ್ಮನವರನ್ನು ಅಭಿನಂದಿಸಿದೆ. ಸಂತಸ ವ್ಯಕ್ತಪಡಿಸಿದ ರಾಜ್ ದಂಪತಿ, ಇನ್ನು ರಾತ್ರಿಯಾಯಿತು. ಇಲ್ಲೇ ಮಲಗಿ, ಬೆಳಗ್ಗೆ ಹೋಗುವಿರಂತೆ ಎಂದು ಹೇಳಿ ಕೆಲಸದಾಕೆ ಗೋಡೆಗಾನಿಸಿಟ್ಟ ಚಾಪೆಯನ್ನು ಹಾಸಿ, ದಿಂಬನ್ನಿಟ್ಟು ಮೇಲೆ ಬೆಡ್ ಶೀಟ್ ಹಾಸಿದರು. ತುಂಬ ಮುಜುಗರವಾಯಿತು. ಹೂಂ ಆರಾಮಾಗಿ ನಿದ್ದೆ ಮಾಡಿ ಎಂದು ಇಬ್ಬರೂ ಕೆಳಗಿಳಿದು ಹೋದರು.

ಮಲಗಿದಾಗ ನಿದ್ದೆ ಹತ್ತಿದರೂ, ಬೇರೆ ಜಾಗವಾಗಿದ್ದರಿಂದ ಹಾಗೂ ನಡೆದ ಎಲ್ಲ ಪ್ರಸಂಗದಿಂದಾಗಿ ಅದು ಕಾಗೆ ನಿದ್ದೆಯಾಯಿತು. ಬೆಳಗ್ಗೆ ೫.೩೦ ಗಂಟೆಗೆಲ್ಲ ಎದ್ದು ಕೆಳಗೆ ಬಂದೆ. ಕೆಲಸದಾಕೆ ಎಂದು ಕಾಣುತ್ತದೆ, ಹಲ್ಲು ತೊಳೆಯಿರಿ, ಕಾಫಿ ಮಾಡುತ್ತೇನೆ ಎಂದು ಬಚ್ಚಲು ಮನೆಯ ದಾರಿ ತೋರಿದಳು. ವಿಚಿತ್ರವೆಂದರೆ ಅಲ್ಲಿ ಪೇಸ್ಟ್ ಇತ್ತು. ಜತೆಗೆ ಇಜ್ಜಲು ಪುಡಿ (ಮಂಕಿ ಬ್ರಾಂಡ್ ಮಾದರಿಯದು) ಹಾಗೂ ಬೇವಿನ ಕಡ್ಡಿಗಳೂ ಇದ್ದವು. ಅದೇಕೋ ಚಿಕ್ಕ ವಯಸ್ಸಿನ ಮಂಕಿ ಬ್ರಾಂಡ್ (ನಾವು ಅದನ್ನು ಮಾಂಕಡ ಛಾಪ್ ಎಂದು ಹೇಳುತ್ತಿದ್ದೆವು) ನೆನಪಾಗಿ ಇಜ್ಜಲು ಪುಡಿಯಿಂದ ಹಲ್ಲುಜ್ಜಿದೆ. ಮುಖ ತೊಳೆದು ಬಂದಾಗ ಒರೆಸಿಕೊಳ್ಳಲು ತುಂಡು ಸಿದ್ಧವಾಗಿತ್ತು. ಕಾಫಿ ಕುಡಿಯುತ್ತಿರುವಂತೆ, ಯೋಗಾಭ್ಯಾಸ ಮುಗಿಸಿ ರಾಜಕುಮಾರ ಬಂದು ನಿದ್ದೆ ಬಂತೇ ಎಂದು ಕೇಳಿದರು. ‘ಚೆನ್ನಾಗಿ ನಿದ್ದೆ ಮಾಡಿದೆ. ಇಂದು ತಾವು ಬೆಂಗಳೂರಿಗೆ ಹೋಗಬೇಕಾದ ಸ್ಥಿತಿಯಲ್ಲೂ ನಿದ್ದೆಗೆಡಿಸಿ ಸಂದರ್ಶನ ಪಡೆದಿದ್ದೆನೆ. ನಿಮಗಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಹಾಗೆಯೇ ನಿದ್ದೆಗೆಟ್ಟು ಸಂದರ್ಶನ ನೀಡಿದ ನಿಮಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದೆ. ‘ಹಾಗೇನೂ ಇಲ್ಲ, ಮನಸ್ಸಿಗೆ ಸಂತೋಷವಾಯಿತು’ ಎಂದು ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಷ್ಟರಲ್ಲಿ ಯಾರೋ ಬಂದರು. ನಾನಿನ್ನು ಹೊರಡುತ್ತೇನೆ ಎಂದು ಹೇಳುತ್ತಿದ್ದಂತೆ, ಡ್ರೈವರ್ ಗೆ ಹೇಳಿದ್ದೇನೆ. ಕಾರಿನಲ್ಲೇ ಹೋಗುವಿರಂತೆ. ನಿಮ್ಮ ಮನೆ ಎಲ್ಲಿ ಎಂದು ಕೇಳಿದರು. ಎಂಜಿಆರ್ ನಗರ ಎಂದೆ. ಸರಿ ಬನ್ನಿ ಎಂದು ಕಾರಿನ ವರೆಗೂ ಬಂದು ನನ್ನನ್ನು ಕುಳ್ಳಿರಿಸಿ, ನನ್ನನ್ನು ಎಂಜಿಆರ್ ನಗರದಲ್ಲಿರುವ ಮನೆಗೆ ಬಿಟ್ಟು ಬರುವಂತೆ ಡ್ರೈವರ್ ಗೆ ಸೂಚಿಸಿದರು. ಕಾರು ಹೊರಡುತ್ತಿದ್ದಂತೆ ಪುನಃ ಕೈ ಮುಗಿದು ಬೀಳ್ಕೊಂಡರು.

ಅಂದಿನ ಎಲ್ಲ ಘಟನೆಗಳು ಅದರಲ್ಲೂ ಅಂದು ರಾತ್ರಿಯ ಘಟನೆಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ. ಅಷ್ಟೊಂದು ಜನಪ್ರಿಯ ನಟ, ನನ್ನಂಥ ಓರ್ವ ಸಾಮಾನ್ಯ ವ್ಯಕ್ತಿಗೆ (ಪತ್ರಕರ್ತನಿರಬಹುದು) ಅಪರಾತ್ರಿಯಲ್ಲಿ ಸಂದರ್ಶನ ನೀಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆಯಾಗಿದೆ. ದುರಂತವೆಂದರೆ ‘ಫಿಲ್ಮಾಲಯ’ ಪತ್ರಿಕೆಯ ಒಂದೇ ಒಂದು ಪ್ರತಿ ನನ್ನಲ್ಲಿಲ್ಲ. ಆದರೆ ಸಂದರ್ಶನಕ್ಕಾಗಿ ಪಟ್ಟ ಪಾಡು, ವಿಜಯನಾರಸಿಂಹ ಅವರು ನೀಡಿದ ಪ್ರಶ್ನೆಗಳ ಹಾಳೆ ಜತೆಗಿರದೇ ಕಂಗಾಲಾಗಿದ್ದು ಹಾಗೂ ಯಾವುದೇ ಪೂರ್ವ ತಯಾರಿ ಇಲ್ಲದೇ ಆತಂಕದಲ್ಲಿ ಆರಂಭವಾದ ಸಂದರ್ಶನ ಉಭಯತರಿಗೂ ನೀಡಿದ ತೃಪ್ತಿ ಈ ಎಲ್ಲ ನೆನಪುಗಳಿಗೆ ನಾನು ಬದುಕಿರುವಷ್ಟು ಕಾಲ ಸಾವಿಲ್ಲ.

ಇನ್ನೂ ಒಂದೆರಡು ವಿಷಯಗಳಿವೆ. ಸದ್ಯಕ್ಕೆ ಇದನ್ನು ಮುಗಿಸುತ್ತಿದ್ದೇನೆ. ಲೇಖನ ಮಾಲೆ ಓದಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ