ಚಂದನವನದಲ್ಲಿ ಈಗೀಗ ನವ ಪ್ರತಿಭೆಗಳದ್ದೇ ಕಲರವ. ನವ ಕಥೆ, ನವ ನಿರೂಪಣೆ ಇದ್ದು ಗೆದ್ದ ಸಿನೆಮಾಗಳ ಪಟ್ಟಿ ಬೆಳೆಯುತ್ತಾ ಇದ್ದ ಹಾಗೆ ಇದೀಗ ಇನ್ನೊಂದು ನವ ಪ್ರಯೋಗ ಹಾಗು ಅತ್ಯಂತ ವಿಭಿನ್ನ ನಿರೂಪಣೆ ಹೊಂದಿರುವ ಹೊಸ ಚಿತ್ರ ಸೆಟ್ಟೇರಿದೆ.
ಜಿಷ್ಣು ಹೆಸರಿನ ಹಾಗೆ ಚಿತ್ರವೂ ವಿಭಿನ್ನವಾಗಿ ಮೂಡಿ ಬರಲಿದೆ ಎಂದು ಹೇಳುತ್ತಾರೆ ಚಿತ್ರ ನಿರ್ದೇಶಕ ಗಣಿ ದೇವ್ ಕಾರ್ಕಳ.
ಗಣಿ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರವಾಗಿದ್ದು, ಮೊದಲ ಚಿತ್ರ ನಿಲುಕದ ನಕ್ಷತ್ರ ಬಿಡುಗಡೆಯ ಹಂತದಲ್ಲಿದ್ದು, ಎರಡನೇ ಚಿತ್ರದಲ್ಲಿ ಗಣಿ ದೇವ್ ನಿರ್ದೇಶನದ ಜೊತೆಗೆ ನಾಯಕನಾಗುತ್ತಿರೋದು ಈ ಚಿತ್ರದ ವಿಶೇಷ.
‘ಪಂಚ ವಿಭಿನ್ನ ಪಾತ್ರ ಹಾಗೂ ಪಾತ್ರಕ್ಕೆ ತಕ್ಕವಾಗಿ ದೇಹ ದಂಡನೆ ಮಾಡಲಿದ್ದೇನೆ, ಅತ್ಯಂತ ಕಷ್ಟಕರವಾಗಿದ್ದರೂ ಇಷ್ಟ ಪಟ್ಟು ಮಾಡಿ ನಿರೂಪಿಸುವೆ’, ಎನ್ನುವ ಗಣಿ ದೇವ್ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜೊತೆಗೆ ಸಾಹಿತ್ಯ ಹಾಗು ಸಂಗೀತವನ್ನೂ ನೀಡಿದ್ದಾರೆ.
ಸುಮಿತ್ರಾ ಗೌಡ, ಯಾಮಿನಿ ತಿವಾರಿ ಹಾಗು ನಿಕಿತಾ ದೇವಾಡಿಗ ನಾಯಕಿಯರಾಗಿ ಮಿಂಚಲಿದ್ದಾರೆ ಗಮನ ಸೆಳೆಯುವ ಪಾತ್ರದಲ್ಲಿ ಮೀನಾ ಎಸ್, ಶೈಲೇಂದ್ರ, ವಿಶ್ವ ಶೆಟ್ಟಿ ಹಾಗು ಹಿರಿ ತೆರೆಯ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಕಟಣೆಯನ್ನು ಚಿತ್ರತಂಡ ನೀಡಲಿದೆ.
ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರಲಿದ್ದು ಮುಖ್ಯ ನಿರ್ಮಾಪಕರಾಗಿ ಕನಿಕ ಕವಿತಾ ಪೂಜಾರಿ ನಿರ್ವಹಿಸಲಿದ್ದಾರೆ. ಈ ಮೂಲಕ ಚಂದನವನಕ್ಕೆ ಮತ್ತೊಬ್ಬ ಮಹಿಳಾ ನಿರ್ಮಾಪಕಿಯ ಆಗಮನವಾಗಲಿದೆ.
ತನ್ನದೇ ಅಭಿಮಾನಿ ಬಳಗ ಹೊಂದಿರುವ ಗಣಿ ದೇವ್ ಕಾರ್ಕಳ ಅವರ ಪಂಚ ಅವತಾರಕ್ಕೆ ಸೋಶಿಯಲ್ ಮೀಡಿಯಾ ಈಗಾಗಲೇ ಹರ್ಷ ವ್ಯಕ್ತ ಪಡಿಸಿದೆ.
ತಮ್ಮ ಈ ಪ್ರಯತ್ನಕ್ಕೆ ಗುರುಗಳಾದ ಶಂಕರ್ ನಾಗ್ ಸ್ಫೂರ್ತಿ ಹಾಗೂ ಈ ಚಿತ್ರಕ್ಕೆ ಚಿಯಾನ್ ವಿಕ್ರಂ ಅವರನ್ನು ಸ್ಫೂರ್ತಿ ಯಾಗಿ ತೆಗದುಕೊಂಡಿರುವೆ ಎನ್ನುವ ಗಣಿ ದೇವ್ ಅವರ ಹೇಳಿಕೆ ಚಿತ್ರದ ನಿರೀಕ್ಷೆ ಯನ್ನು ಇಮ್ಮಡಿಯಾಗಿದೆ. ಮುಹೂರ್ತ ದಿನ, ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಮಾಹಿತಿ ಚಿತ್ರತಂಡ ಶೀಘ್ರದಲ್ಲಿ ನೀಡಲಿದ್ದು ಚಂದನವನದಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಹೊಸ ಸಂಚಲನ ಮೂಡಿಸುತ್ತಿದೆ. ದೊಡ್ಡ ಬಜೆಟ್ ನಲ್ಲಿ ತಯಾರಿಸುವ ಈ ಕನ್ನಡ ಚಲನಚಿತ್ರ ತಮಿಳು ಮಲಯಾಳಂ ತೆಲುಗು ಹಿಂದಿ ಹೀಗೆ ಪಂಚ ಭಾಷೆಯಲ್ಲಿ ರಾಷ್ಟ್ರದ್ಯಂತ ಹಾಗು ವಿದೇಶದಲ್ಲಿ ಬಿಡುಗಡೆಯಾಗಲಿರುವುದು ಇನ್ನೊಂದು ವಿಶೇಷ.