ಬಂಟ್ವಾಳ

ಕೃಷಿ ಅಭಿಯಾನ ಪರಿಣಾಮಕಾರಿಯಾಗಿರಲಿ: ಶಾಸಕ ರಾಜೇಶ್ ನಾಯ್ಕ್ ಸಲಹೆ

ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ “ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ” ಮೂರು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಅಭಿಯಾನ ೨೦೧೯-೨೦ಕ್ಕೆ ಸೋಮವಾರ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಅಭಿಯಾನ ಪರಿಣಾಮಕಾರಿಯಾಗಿ ನಡೆಯಲಿ, ಕೇವಲ ಘೋಷಣೆಗಳನ್ನು ಕೂಗುವುದರಿಂದಷ್ಟೇ ಅಲ್ಲ, ರೈತರಿಗೆ ನಿಜಾರ್ಥದಲ್ಲಿ ಅಭಿಯಾನ ತಲುಪಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಹೊಂದಲು ಸರಕಾರವು ಇಸ್ರೇಲ್ ಮಾದರಿಯ ಕೃಷಿ ಯೋಜನೆಯನ್ನು ರೂಪಿಸಿದೆ. ಆದರೆ, ಯೋಜನೆಯಡಿ ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನು ಕೈಬಿಟ್ಟಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನಕ್ಕೆ ಸೂಕ್ತವಾದ ಕೃಷಿ ಪ್ರದೇಶವಾಗಿದೆ. ಈ ಯೋಜನೆಯನ್ನು ತಮ್ಮ ಜಿಲ್ಲೆಗಳಿಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿದ್ದು, ಮುಂದಿನ ಬಜೆಟ್‌ನಲ್ಲಿ ಸೇರಿಸುವ ಭರವಸೆ ನೀಡಿದ್ದಾರೆ ಎಂದವರು ಹೇಳಿದರು.

ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿರುವ ಭತ್ತ ಬೆಳೆಯನ್ನು ಯಾಂತ್ರೀಕೃತ ಬಳಸಿಕೊಂಡು ಕೃಷಿಯನ್ನು ಲಾಭದಾಯಕವಾಗಿ ಮಾಡಬಹುದು. ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕಾರ್ಮಿಕರ ಕೊರತೆಯೊಂದು ಕಾರಣವೊಂದು ಬಿಟ್ಟರೆ ಮುಂದುವರಿದ ಯಾಂತ್ರೀಕರಣವನ್ನು ಬಳಸಿ ಭತ್ತದ ಬೆಳೆಯನ್ನು ಲಾಭಯಾದಕವನ್ನಾಗಿ ಮಾಡಬಹುದು ಎಂದು ಸಲಹೆ ನೀಡಿದರು.

ಸರಕಾರ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದರೂ, ಮಾಹಿತಿ ಕೊರತೆಯಿಂದ ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಇದಕ್ಕಾಗಿ ಇಲಾಖೆಯು ಪ್ರತೀ ಗ್ರಾಮ ಮಟ್ಟದಲ್ಲಿ ಕೃಷಿಕರ ಸಭೆ ನಡೆಸಬೇಕು ಜೊತೆಗೆ ಹೊಸ ಮಾದರಿಯ ಯಾಂತ್ರೀಕೃತ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕತೆಯ ಮೂಲಕ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿಕರನ್ನು ಮಾನಸಿಕವಾಗಿ ಬಲಾಢ್ಯಗೊಳಿಸಲು ಇಲಾಖೆಗಳು ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದು, ಇದೀಗ ಎಲ್ಲ ಕಾರ್ಯಗಳು ಆನ್ ಮೂಲಕ ನಡೆಯುತ್ತಿವೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯು ಕೂಡಾ ಆನ್‌ಲೈನ್ ಮೂಲಕ ನಡೆಯುತ್ತಿವೆ. ದಲ್ಲಾಳಿಗಳ ಹಾವಳಿಗನ್ನು ತಪ್ಪಿಸಲು ರೈತರೇ ಸೇರಿಕೊಂಡು ಆನ್‌ಲೈನ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿರುವುದು ಕೃಷಿ ಮಾರುಕಟ್ಟೆಯಲ್ಲಾಗಿರುವ ಮಹತ್ತರ ಬದಲಾವಣೆ. ಮುಂದಿನ ದಿನಗಳಲ್ಲಿ ರೈತರೇ ಬೆಲೆ ನಿಗದಿಪಡಿಸಿ ಆನ್‌ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಬರಹುದು ಎಂದು ತಿಳಿಸಿದರು. ಈ ವೇಳೆ ತಾಲೂಕಿನ ೧೦ ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತಾಪಂ ಇಒ ರಾಜಣ್ಣ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬಂಟ್ವಾಳ ಕೃಷಿ ಸಮಾಜದ ಅಧ್ಯಕ್ಷ  ಅಶೋಕ್ ಕುಮಾರ್ ಬರಿಮಾರು ಹಾಜರಿದ್ದರು. ಸಹಾಯಕ ಕೃಷಿ ನಿದೇರ್ಶಕ ನಾರಾಯಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಇಲಾಖೆಯ ಸಿಬ್ಬಂದಿ ಪ್ರಿಯಾಂಕಾ ವಂದಿಸಿ, ನಂದನ್ ಕಿಣಿ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts