ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಹಿಂದಿನ ಶಿಕ್ಷಣ ವ್ಯವಸ್ಥೆಗಳಲ್ಲಿ ಹಲವಾರು ರೀತಿಯ ವೈವಿದ್ಯತೆಗಳನ್ನು ಕಾಣಬಹುದು. ಕಾಲದ ಬದಲಾವಣೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಚಲನಶೀಲತೆಯನ್ನು ಕಾಣುವುದು ಅದರ ನೈಜ ಮನೋಧರ್ಮವಾಗಿರುತ್ತದೆ. ಈ ದೃಷ್ಟಿಯಿಂದ ನೂತನ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ, ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಮಂಡಿಸಲ್ಪಟ್ಟ ಹೊಸ ಶೈಕ್ಷಣಿಕ ನೀತಿಯ ಕುರಿತ ಡಾ| ಕಸ್ತೂರಿರಂಗನ್ ವರದಿಯನ್ನು ಪ್ರಸ್ತುತ ಹೆಚ್ಚು ಅಧ್ಯಯನ ಮಾಡಬೇಕಾಗಿದೆ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮನೇಜ್‌ಮೆಂಟ್ ಅಸೋಸಿಯಷನ್ ವತಿಯಿಂದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ನಡೆದ ನ್ಯೂ ಎಜುಕೇಶನ್ ಪಾಲಿಸಿ ಕುರಿತಾದ ಚರ್ಚಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಯಾವುದೇ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿ ಮತ್ತು ಅಧ್ಯಾಪಕರ ಮನೋಸಾಮರ್ಥ್ಯವನ್ನು ಹೆಚ್ಚಿಸುವಂತಿರಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿರಬೇಕು ಎಂದು ಅವರು ಹೇಳಿದರು.
ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮೇನೇಜ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ| ಎಚ್ ಶಾಂತರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಎಜುಕೇಶನ್ ಸೊಸೈಟಿ ಉಜಿರೆ ಇದರ ಕಾರ್ಯದರ್ಶಿ ಡಾ| ಯಶೋವರ್ಮ ಮಾತನಾಡಿ ಈ ಹೊಸ ಶಿಕ್ಷಣ ನೀತಿಯ ವರದಿಯು ಕ್ರಾಂತಿಕಾರಿ ವರದಿಯಾಗಿದೆ. ಇದು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತಿದೆ. ಇದು ಹೊರದೇಶದ ವಿಶ್ವವಿದ್ಯಾನಿಲಯಗಳು ಸಹ ಅನುಸರಿಸಬಹುದಾದ ವರದಿಯಾಗಿದೆ ಎಂದರು. ವಿವಿಧ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಮತ್ತು ಪ್ರಾಂಶುಪಾಲರುಗಳು ವರದಿಯ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಸ್ವಾಗತಿಸಿದರು. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮೇನೇಜ್‌ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿಯಾದ ಪ್ರೊ| ವೈ ಭಾಸ್ಕರ ಶೆಟ್ಟಿ ವಂದಿಸಿದರು. ಅಸೋಸಿಯೇಷನ್‌ನ ಕೋಶಾಧಿಕಾರಿ ಸಿ.ಎ. ಎಸ್. ಎಸ್. ಕಾಮತ್ ಉಪಸ್ಥಿತರಿದ್ದರು. ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಅಖಿಲಾ ಪೈ ಕಾರ್ಯಕ್ರಮ ನಿರೂಪಿಸಿದರು.