ಬಂಟ್ವಾಳ

ಶೀಘ್ರ ತಾಲೂಕು ಮಟ್ಟದ ಬೃಹತ್ ಪಿಂಚಣಿ ಸಮಾವೇಶ – ಅಧಿಕಾರಿಗಳಿಗೆ ಐವನ್ ಸೂಚನೆ

ಬಂಟ್ವಾಳ ತಾಲೂಕಿನಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವ ಹಿನ್ನಲೆಯಲ್ಲಿ ಶೀಘ್ರವಾಗಿ ತಾಲೂಕು ಮಟ್ಟದ ಬೃಹತ್ ಪಿಂಚಣಿ ಸಮಾವೇಶ ನಡೆಸುವಂತೆ ಸಿಎಂ ಸಂಸದೀಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ತು ಸದಸ್ಯ ಐವನ್ ಡಿಸೋಜ ಸೂಚನೆ ನೀಡಿದ್ದಾರೆ.

ಜಾಹೀರಾತು

ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಶನಿವಾರ ಸಂಜೆ ತಾಲೂಕು ಕಂದಾಯ ಇಲಾಖೆಯ ಕುಂದು ಕೊರತೆ ಆಲಿಸುವ ಮತ್ತು ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.

ಜನರ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರಲ್ಲದೆ ಇದಕ್ಕೆಲ್ಲಾ ಜನಪ್ರತಿನಿಧಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆಯೂ ತಿಳಿಸಿದರು. ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ನೇರ ನೇಮಕಾತಿಯ ಮೂಲಕ ಆಯ್ಕೆಯಾಗಿರುವ ಯುವ ಗ್ರಾಮಕರಣಿಕರು, ಸರಕಾರದ ಕೆಲಸವನ್ನು ತಮ್ಮ ಬದ್ದತೆಯೆಂದು ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಗ್ರಾಮಕರಣಿಕರಿಗೆ ಸಲಹೆ ನೀಡಿದರು.

ಗ್ರಾಮಕರಣಿಕರ ಸಮಸ್ಯೆಯೂ ತನಗೆ ಅರಿವಿದ್ದು ಕಂದಾಯ ಇಲಾಖೆ ಮತ್ತು ಸರ್ಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಗ್ರಾಮಕರಣಿಕರಿಗೆ ವಿಶೇಷ ಭತ್ತೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಜಾಹೀರಾತು

ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಕೋರ್ಸುಗಳಿಗೆ ತೆರಳಲು ಆದಾಯ, ಜಾತಿ ಮತ್ತಿತರ ಪ್ರಮಾಣಪತ್ರಗಳಿಗೆ ವಿದ್ಯಾರ್ಥಿಗಳು ಬರಲಿದ್ದಾರೆ, ಈ ಸಂದರ್ಭ ಆ ಕೆಲಸವನ್ನು ತ್ವರಿತವಾಗಿ ಮಾಡಿಕೊಡಿ, ಅವರಿಗೆ ಕುಂಟು ನೆಪ ಹೇಳಿ ಸತಾಯಿಸಬೇಡಿ ಇಂಥ ದೂರುಗಳು ಬಾರದಂತೆ ಕ್ರಮ ಕೈಗೊಳ್ಳಬೇಕು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸೂಚಿಸಿದರು.

ತಹಶೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿ, ತಾಲೂಕಿನಲ್ಲಿ ಶೇ.೮೦ ಮಂದಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗಿದ್ದು, ಶೇ.೭೦ರಷ್ಟು ಮಂದಿ ರೈತರ ಸಾಲ ಮನ್ನಾ ಅರ್ಜಿ ವಿಲೇವಾರಿ ಆಗಿದೆ. ೩೩ ಗ್ರಾಮಗಳನ್ನು ಪೋಡಿಮುಕ್ತ ಗ್ರಾಮವನ್ನಾಗಿ ಮಾಡಲಾಗಿದ್ದು, ಅಂತ್ಯ ಸಂಸ್ಕಾರ ಯೋಜನೆಯಡಿ ೮೩ಲಕ್ಷ ರೂ. ಮೊತ್ತದ ಅನುದಾನ ಅಗತ್ಯವಿದ್ದು, ಕಳೆದ ಒಂದೂವರೆ ವರ್ಷಗಳಿಂದ ಹಣ ವಿತರಣೆ ಸಾಧ್ಯವಾಗಿಲ್ಲ ಎಂದರು. ತಾಲೂಕಿನಲ್ಲಿ ಒಟ್ಟು ೩೫೧ ಮಂದಿ ಎಂಡೋಸಲ್ಫಾನ್ ಪೀಡಿತರಿಗೆ ಪಿಂಚಣಿ ನೀಡಲಾಗುತ್ತಿದ್ದು, ೭,೩೦೦ ಕಂದಾಯ ಅದಾಲತ್ ನಡೆಸಲಾಗಿದೆ. ಡಿಸಿ ಮನ್ನಾ ಜಮೀನಿಗೆ ಸಂಬಂಧಿಸಿದಂತೆ ಒಟ್ಟು ೭೧೦ ಅರ್ಜಿಗಳು ಬಂದಿದ್ದು, ಈ ಪೈಕಿ ಒಟ್ಟು ೪೨.೮ಎಕ್ರೆ ಜಮೀನಿಗೆ ಸಂಬಂಧಿಸಿದಂತೆ ೬೧೨ ಅರ್ಜಿ ವಿಲೇವಾರಿಗೆ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿ , ಡಿಸಿ ಮನ್ನಾ ಮತ್ತು ನಿವೃತ್ತ ಸೈನಿಕರಿಗೆ ಜಮೀನು ವಿತರಿಸಲು ಆದ್ಯತೆ ನೀಡಬೇಕು ಮೀಸಲು ಜಮೀನು ವಿತರಣೆಯಲ್ಲಿ ಶೇ.೯೦ರಷ್ಟು ಬಾಕಿ ಉಳಿಯಲು ಕಾರಣ ಏನು ಎಂಬುದನ್ನು ತಿಳಿದುಕೊಂಡು ಜಿಲ್ಲೆಯಲ್ಲಿ ಇವೆರಡು ಪ್ರಕರಣವನ್ನು ಅತೀ ಪ್ರಾಮುಖ್ಯವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು

ಜಾಹೀರಾತು

ಕಳೆದ ಹಲವು ವರ್ಷಗಳ ಹಿಂದೆ ನಾಗರಿಕರಿಗೆ ದೊರೆತ ಮನೆ ನಿವೇಶನ ಮತ್ತು ಅಕ್ರಮ-ಸಕ್ರಮ ಜಮೀನಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಪಹಣಿಪತ್ರ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಿಂದ ವಿತರಣೆಯಾದ ೯೪ಸಿ ಮತ್ತು ೯೪ಸಿಸಿ ಹಕ್ಕುಪತ್ರಗಳಿಗೂ ಪಹಣಿಪತ್ರ ಸಿಕ್ಕಿಲ್ಲ. ಹೊಸ ಜಮೀನು ನೋಂದಣಿಯಾದ ಬಳಿಕ ಪಹಣಿಪತ್ರ ಸಿದ್ಧಪಡಿಸಲು ನೇರವಾಗಿ ಭೂಮಿ ಶಾಖೆಗೆ ದಾಖಲೆ ಪತ್ರ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ನೆಪದಲ್ಲಿ ಜನರ ನೆಮ್ಮದಿ ಕೆಡಿಸುತ್ತಿದೆ. ದಫನ ಭೂಮಿಗೆ ಕಾದಿರಿಸಿದ ಜಮೀನು ಹಸ್ತಾಂತರ ಆಗಿಲ್ಲ ಎಂದು ಸಭೆಯಲ್ಲಿ ದೂರುಗಳು ಕೇಳಿ ಬಂದವು.

ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ಕುಮ್ಕಿ ಅರ್ಜಿಗಳಿಗೆ ಹಕ್ಕು ಪತ್ರ ನೀಡುವ, ಮಂಜೂರಾದ ಜಮೀನುಗಳಿಗೆ ನಿರಪೇಕ್ಷಣಾ ಪತ್ರವನ್ನು ತಹಶೀಲ್ದಾರರೇ ನೀಡುವ ಎನ್‌ಸಿಆರ್ ಜಮೀನು ದರ್ಖಾಸುಗಳನ್ನು ಪೋಡಿ ಮುಕ್ತ ಗ್ರಾಮಗಳಿಗೆ ಸೇರಿಸುವ ಬಗ್ಗೆ ತಾ.ಪಂ.ಸದಸ್ಯ ಉಸ್ಮಾನ್ ಕರೋಪಾಡಿ ಐವನ್ ಡಿಸೋಜಾ ಅವರಿಗೆ ಮನವಿ ಮೂಲಕ ಒತ್ತಾಯಿಸಿದರು. ಇದಕ್ಕೆ ವಕೀಲ ಹಾತೀಂ ಧ್ವನಿಗೂಡಿಸಿದರು. ರಾಮಚಂದ್ರ ಶೆಟ್ಟಿಗಾರ್ ಅರಳ ಮೊದಲಾದವರು ಕಂದಾಯ ಇಲಾಖೆಯ ವಿವಿಧ ಸಮಸ್ಯೆಯನ್ನು ಸಭೆಯಲ್ಲಿ ಗಮನ ಸೆಳೆದರು.

ತಾನು ಇಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಕಂದಾಯ ಸಚಿವರಿಗೆ ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತೇನೆ ಎಂದರು.

ಜಾಹೀರಾತು

ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಎಸ್.ಗಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ ಬೆಂಜನಪದವು ಮತ್ತಿತರರು ಹಾಜರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ