ನಿತ್ಯ ಯೋಗಾಭ್ಯಾಸಿಗಳ ಸಮೂಹ ಸಂಘಟನಾತ್ಮಕ ರೂಪ ತಳೆದು, ಸಮಾಜ ಸೇವೆಗೆ ಸಮರ್ಪಿತವಾದ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಇದರ ಉದ್ಘಾಟನಾ ಸಮಾರಂಭ ಮೇ.26ರಂದು ಬಂಟ್ವಾಳ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣಮಂಟಪದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ.
ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾದನಂದ ಸ್ವಾಮೀಜಿ ಉದ್ಘಾಟಿಸುವರು. ಎಸ್.ಡಿ.ಎಂ. ಕಾಲೇಜು ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ನಂದೀಸ್ ಎನ್.ಎಸ್. ದಿಕ್ಸೂಚಿ ಭಾಷಣ ಮಾಡುವರು ಎಂದು ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ರಘುವೀರ ಅವಧಾನಿ ತಿಳಿಸಿದರು.
ಈಗಾಗಲೇ ಜಪ್ಪಿನಮೊಗರು, ವಾಮಂಜೂರು, ಬಿ.ಸಿ.ರೋಡ್, ನರಿಕೊಂಬು ಸಹಿತ ಜಿಲ್ಲೆಯ ಹಲವೆಡೆ ಯೋಗಾಭ್ಯಾಸದ ತರಬೇತಿಗಳನ್ನು ನಡೆಸಲಾಗುತ್ತಿದ್ದು, ಪ್ರತಿಷ್ಠಾನದ ಮೂಲಕ ಸಾಂಘಿಕ ಸ್ವರೂಪ ಪಡೆಯುತ್ತದೆ. ರಾಜ್ಯಮಟ್ಟದ ಯೋಗ ಸ್ಪರ್ಧೆ, ವಿಶ್ವ ಯೋಗ ದಿನಾಚರಣೆ, ರಕ್ತದಾನದ ತಂಡ ರಚನೆ ಸಹಿತ ಹಲವು ನೆಲೆಗಟ್ಟಿನಲ್ಲಿ ಯೋಗಾಭ್ಯಾಸಿಗಳು ಈ ಪ್ರತಿಷ್ಠಾನದ ಮೂಲಕ ನಡೆಸಲಿದ್ದಾರೆ. ಸಮಾಜದ ವಿವಿಧ ಸ್ತರಗಳಲ್ಲಿ ದುಡಿಯುವ ಜನರು ಇದರ ಸದಸ್ಯರಾಗಿರುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಯೋಗಪಟು ಮೋನಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು. ಡಾ. ಮಹೇಶ್ ಅವರಿಂದ ಸಂಗೀತ, ಎಸ್. ವ್ಯಾಸ ಯೋಗ ವಿದ್ಯಾಲಯದಲ್ಲಿ ತರಬೇತಿ ಪಡೆದು ದೈನಂದಿನ ಯೋಗಾಭ್ಯಾಸ ನಡೆಸಿಕೊಡುವ ಯೋಗ ಶಿಕ್ಷಕರಿಗೆ ಗೌರವ ನೀಡುವ ಕಾರ್ಯ ನಡೆಯಲಿದೆ. ರಕ್ತದಾನ ಪ್ರೇರೇಪಿಸುವ ಸಲುವಾಗಿ ರಕ್ತದಾನಿಗಳ ಮಾಹಿತಿ ಕೈಪಿಡಿಯ ಕಾರ್ಯ ಮತ್ತು ಆಗಸ್ಟ್ ನಲ್ಲಿ ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆಸುವ ತಯಾರಿ ಆಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಟಿ, ಡಾ.ಅಶ್ವಿನ್ ಬಾಳಿಗಾ ಉಪಸ್ಥಿತರಿದ್ದರು.