ಬಂಟ್ವಾಳ: ಶುಕ್ರವಾರ ಬಂಟ್ವಾಳದಲ್ಲಿ ನೀರು ಪೂರೈಕೆಯಾಗಿದೆ. ನೀರನ್ನು ಮಿತವಾಗಿ ಬಳಸಲು ಸೂಚಿಸಿರುವ ಪುರಸಭೆ, ರೇಷನಿಂಗ್ ಆರಂಭಿಸುವುದಾಗಿ ಪ್ರಕಟಿಸಿದ್ದರೂ ನೀರಿನ ಲಭ್ಯತೆಯ ಕಾರಣ ಶುಕ್ರವಾರ ಬಂದ್ ಮಾಡಿರಲಿಲ್ಲ.
ಇದೇ ವೇಳೆ ನೇತ್ರಾವತಿ ನದಿಯಲ್ಲಿ ನೀರಿನ ಸಂಗ್ರಹ ಇರುವ ಜಾಗದಿಂದ ಜಾಕ್ವೆಲ್ ಕಡೆಗೆ ಹರಿಯುವ ಪ್ರದೇಶಗಳಿಗೆ ಆಗಿರುವ ಅಡಚಣೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಂಟ್ವಾಳ ಪುರಸಭೆ ಶುಕ್ರವಾರ ಕೈಗೊಂಡಿತು. ಜೊತೆಗೆ ಹಳೇ ಜಾಕ್ವೆಲ್ ಇರುವ ಪ್ರದೇಶದಲ್ಲಿ ಪಂಪ್ ಗಳನ್ನು ದುರಸ್ತಿಗೊಳಿಸಿ, ಅಲ್ಲಿಂದಲೂ ನೀರು ಲಿಫ್ಟ್ ಮಾಡಲು ಅನುಕೂಲವಾಗುವಂತೆ ಕ್ರಮ ಕೈಗೊಂಡಿದೆ.
ಒಟ್ಟಾರೆಯಾಗಿ ಬಂಟ್ವಾಳ ಪುರಸಭೆಯ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಹಳೇ ಮತ್ತು ಹೊಸ ಜಾಕ್ ವೆಲ್ ಗಳು ಸದ್ಯಕ್ಕೆ ನೀರೆತ್ತಲು ಸಮರ್ಥವಾಗಿವೆ. ಹೊಸ ಜಾಕ್ವೆಲ್ ಸಮೀಪ ಹೂಳೆತ್ತುವ ಕಾರ್ಯ ನಡೆದಿದ್ದು, ಸದ್ಯಕ್ಕೆ ರೇಷನಿಂಗ್ ನಡೆಸುತ್ತಿದ್ದರೂ ಬಂಟ್ವಾಳ ಪುರಸಭೆಯ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ತಿಳಿಸಿದ್ದಾರೆ. ರೇಷನಿಂಗ್ ಆರಂಭಗೊಂಡರೂ ನೀರನ್ನು ಪೂರೈಸುವುದನ್ನು ನಿಲ್ಲಿಸಿಲ್ಲ. ಪ್ರತಿದಿನವೂ ನಲ್ಲಿಯಲ್ಲಿ ನೀರು ಬರುವಂತೆ ಮಾಡಲಾಗುತ್ತಿದೆ ಎಂದ ಮಾತ್ರಕ್ಕೆ ಬೇಕಾದಷ್ಟು ನೀರು ಇದೆ ಎಂಬ ಅರ್ಥವಲ್ಲ. ಹೀಗಾಗಿ ಪುರಸಭೆ ನಿವಾಸಿಗಳು ಮಿತವಾಗಿ ನೀರನ್ನು ಬಳಸಬೇಕು. ಕುಡಿಯುವ ನೀರನ್ನು ತೋಟಕ್ಕೆ ನೀರು ಹಾಯಿಸುವುದು, ಸಾರ್ವಜನಿಕ ಸಮಾರಂಭಗಳು, ಮದುವೆ ಮತ್ತಿತರ ಕಡೆ ನೀರನ್ನು ಬಳಸುವಾಗ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ತಮ್ಮ ತಂಡದೊಂದಿಗೆ ನೀರನ್ನು ಪೋಲು ಮಾಡಿ ತೋಟಗಳಿಗೆ ಹಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದು ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ವಾಸು ಪೂಜಾರಿ ಆಗ್ರಹಿಸಿದ್ದಾರೆ.