ನೋಡಿ ಸ್ವಾಮಿ ಹೀಗಿದೆ ನಮ್ಮ ಮಿನಿ ವಿಧಾನಸೌಧ.ಇಲ್ಲಿ ಲಿಫ್ಟ್ ಕೈಕೊಟ್ಟು ತಿಂಗಳಾಯಿತು. ನಾವು ದೂರುಕೊಟ್ಟು ದಿನಗಳಾದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಯಾವಾಗ ಸರಿ ಆಗುತ್ತದೆ ಎಂದು ಗೊತ್ತಾಗೋದಿಲ್ಲ. – ಹೀಗನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ನಂದಾವರ
ಲಿಫ್ಟ್ ಇಲ್ಲದೆ ಇಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕಾದರೆ ಪ್ರಯಾಸಪಡಬೇಕಾದ ಸ್ಥಿತಿ ಇದೆ – ಹೀಗನ್ನುತ್ತಾರೆ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್.
ಇಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕೆಲಸಕ್ಕೆಂದು ಬಂದಿದ್ದೆ. ಕ್ಯೂ ಇತ್ತು. ಲಿಫ್ಟ್ ಹತ್ತಲು ಹೋದರೆ ಅಲ್ಲಿ ಬಂದ್ ಎಂಬ ಚೀಟಿಯನ್ನೂ ಅಂಟಿಸಿರಲಿಲ್ಲ. ಕೆಲ ಹೊತ್ತು ಕಾದ ಬಳಿಕ ಯಾರೋ ಹೇಳಿದರು, ಇದು ಕೆಲಸ ಮಾಡುತ್ತಿಲ್ಲ. ಬಳಿಕ ಮೆಟ್ಟಿಲು ಹತ್ತಿ ಕಚೇರಿಗೆ ತೆರಳಿದೆ.– ಹೀಗನ್ನುತ್ತಾರೆ ಸಾರ್ವಜನಿಕರಾದ ಜೋಸೆಫ್ ಡಿಸೋಜ.
ಶೌಚಾಲಯ ಉಪಯೋಗಿಸಲೆಂದು ಹೋದರೆ, ಮೇಲೆ ಹೋಗಿ ಎಂದು ಹೇಳಿದರು. ಮತ್ತೆ ಮೆಟ್ಟಿಲು ಹತ್ತುವ ಪರಿಸ್ಥಿತಿ ಬಂತು. – ಹೀಗನ್ನುತ್ತಾರೆ ಸಾರ್ವಜನಿಕರಾದ ವಸಂತ್.
******
ಕಳೆದೊಂದು ತಿಂಗಳಿನಿಂದ ಬಂಟ್ವಾಳದ ಮಿನಿ ವಿಧಾನಸೌಧ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಸಮಸ್ಯೆಗಳ ಕುರಿತು ಸಾರ್ವಜನಿಕರು ಮಾಧ್ಯಮಗಳ ಪ್ರತಿನಿಧಿಗಳಿಗೆ ದೂರುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ ಬಂಟ್ವಾಳನ್ಯೂಸ್ ಗೆ ನೀಡಿದ ಪ್ರತಿಕ್ರಿಯೆ ಇದು.
ಏನೇನು ಸಮಸ್ಯೆ, ಇಲ್ಲಿ ನೋಡಿ ಚಿತ್ರಗಳೇ ಇವನ್ನು ಹೇಳುತ್ತವೆ.
ಕೆಲ ಸಾರ್ವಜನಿಕರು ಅಲ್ಲಲ್ಲಿ ಪಾನ್ ಜಗಿದು ಉಗುಳಿ ಗಲೀಜು ಮಾಡುವುದು, ಶೌಚಾಲಯಕ್ಕೆ ಹೋದರೆ ನೀರು ಹಾಕದೆ ಬರುವುದನ್ನು ಮಾಡುವುದರ ಮೂಲಕ ಉಳಿದವರಿಗೂ ತೊಂದರೆ ಮಾಡಿದರೆ, ಅವರಿಗೆ ಸರಿಯಾದ ಎಚ್ಚರಿಕೆಯನ್ನು ನೀಡುವುದರಲ್ಲಿ ಕಟ್ಟುನಿಟ್ಟು ಮಾಡದೆ ಹಾಗೇ ಬಿಟ್ಟ ಕಾರಣ ಹಾಳುಹಂಪೆಯಂತೆ ಮಿನಿ ವಿಧಾನಸೌಧ ಬಣ್ಣಗೆಡುತ್ತಿದೆ.
ಮಿನಿ ವಿಧಾನಸೌಧದಲ್ಲಿ ವಿಶಾಲವಾದ ಕಾರಿಡಾರ್ ಅನ್ನು ಸಾರ್ವಜನಿಕರು ಬಳಕೆ ಮಾಡಲು ಒದಗಿಸಬೇಕು. ಆದರೆ ಕಿಟಕಿ ಇರುವ ಕಡೆಯಲ್ಲೆಲ್ಲ ಫೈಲುಗಳ ರಾಶಿ ಇತ್ತು. ಸಬ್ ರಿಜಿಸ್ಟ್ರಾರ್ ಕಚೇರಿ ಪಕ್ಕ ಫೈಲುಗಳ ರಾಶಿ ಇದ್ದರೆ, ಅವುಗಳ ಪಕ್ಕದಲ್ಲೇ ಸೊಳ್ಳೆಗಳೂ ಹಾರಾಡುತ್ತಿದ್ದವು. ಮೆಟ್ಟಿಲು ಹತ್ತುವ ಜಾಗದ ಅಡಿಯಲ್ಲಿ ಕಸ, ಕಡ್ಡಿಗಳು ತುಂಬಿ ಹೋಗಿ, ಪಾಳುಬಿದ್ದ ಕಟ್ಟಡಕ್ಕೆ ಹೋದಂತೆ ಭಾಸವಾಗುತ್ತಿದ್ದವು. ಅಲ್ಲಲ್ಲಿ ಗೋಡೆಯಲ್ಲಿ ಪಾನ್ ಅನ್ನು ಪಿಚಕಾರಿಯಂತೆ ಉಗುಳಿದ ಚಿತ್ರಗಳೂ ಕಂಡರೆ, ಕ್ಯೂ ನಿಂತ ಸಾರ್ವಜನಿಕರು ಎಲ್ಲಾದರೂ ವಿರಮಿಸುವ ಎಂದು ಮೆಟ್ಟಲಲ್ಲಿ ಕುಳಿತರೆ, ತುರಿಕೆ ಏಳುವಷ್ಟು ಧೂಳು ಇದ್ದವು.
ಇಲ್ಲಿನ ಶೌಚಾಲಯ ದುರ್ವಾಸನೆಯಿಂದ ಕೂಡಿರುವುದು ಕಂಡುಬಂತು. ಹೀಗಾಗಿ ನೆಲ ಅಂತಸ್ತಿನ ಶೌಚಾಲಯ ವಾಸನೆ ಮೂಡಿಸುತ್ತಿದ್ದರೆ, ಮೇಲಂತಸ್ತಿನ ಶೌಚಾಲಯವೂ ಭಿನ್ನವೇನಲ್ಲ. ವೃದ್ಧರು, ಮಹಿಳೆಯರು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ.
ಮಿನಿ ವಿಧಾನಸೌಧದ ಮುಖ್ಯ ಆಕರ್ಷಣೆಯಾಗಿದ್ದ ಲಿಫ್ಟ್ ಒಂದು ತಿಂಗಳಿನಿಂದ ಬಂದ್ ಆಗಿದೆ. ಇಡೀ ಮಿನಿ ವಿಧಾನಸೌಧ ನಿರ್ವಹಣೆಯ ಬ್ಯಾಟರಿ ಹಾಗೂ ಜನರೇಟರ್ ಆಗಾಗ್ಗೆ ಕೈಕೊಡುತ್ತಿರುವ ಕಾರಣ ಲಿಫ್ಟ್ ಚಾಲೂ ಆಗಿ ಕರೆಂಟ್ ಕೈಕೊಟ್ಟರೆ, ಜನರೇಟರ್ ಆರಂಭಿಸುವ ಸಮಸ್ಯೆ ಇದೆ. ಹೀಗಾಗಿ ಲಿಫ್ಟ್ ಕೈಕೊಟ್ಟದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಕೈಹಾಕಿಲ್ಲ ಎಂದು ಸಾರ್ವಜನಿಕರು ದೂರಿದರು. ಸಬ್ ರಿಜಿಸ್ಟ್ರಾರ್ ಕಚೇರಿ ಇಡೀ ಕಟ್ಟಡದಲ್ಲಿ ಅತ್ಯಂತ ಹೆಚ್ಚು ಚಟುವಟಿಕೆಯಲ್ಲಿರುವ ಕೊಠಡಿಯಾಗಿದ್ದು, ಇಲ್ಲಿಗೆ ತೆರಳುವ ಸಾರ್ವಜನಿಕರು ಲಿಫ್ಟ್ ಕೈಕೊಟ್ಟ ಕಾರಣ ಮೆಟ್ಟಿಲು ಹತ್ತಬೇಕಾಯಿತು.
ಕೈಕಾಲು ಗಟ್ಟಿಮುಟ್ಟಾಗಿರುವವರು ತೊಂದರೆ ಇಲ್ಲ ಎಂದು ಹೇಳಿದರೆ, ವೃದ್ಧರು, ಮಹಿಳೆಯರು, ಮಂಡಿ ನೋವಿನವರು ಇದರಿಂದ ತೊಂದರೆಗೆ ಒಳಗಾದರು. ಕೆಲವು ವೃದ್ಧರನ್ನು ಎತ್ತಿಕೊಂಡೇ ಹೋಗುವ ಪ್ರಸಂಗವೂ ಇಲ್ಲಿ ಸಾಮಾನ್ಯ ದೃಶ್ಯ.