ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ, ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಎಂಬಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕೋಡಪದವಿನ ಕುಕ್ಕಿಲದ ನಿವಾಸಿ, ನವವಿವಾಹಿತ ಧನಂಜಯ್ ಶುಕ್ರವಾರ ಇಫ್ತಾರ್ ಕೂಟವನ್ನು ಆಯೋಜಿದ್ದರು. ಈ ಸಂದರ್ಭದಲ್ಲಿ ಕೋಡಪದವು ಹಾಗೂ ಕುಕ್ಕಿಲ ಜಮಾಅತ್ನ ಸುಮಾರು 150 ಮಂದಿ ಕುಕ್ಕಿಲ ಮಸೀದಿಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
ಕೋಡಪದವಿನ ಕುಕ್ಕಿಲದ ಧನಂಜಯ್ ರಿಗೆಮೇ 8 ರಂದು ವಿಟ್ಲ ದಲ್ಲಿ ಮದುವೆ ನಡೆದಿತ್ತು. ಮದುವೆಗೆ ಊರಿನ ಎಲ್ಲರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ ಊರಿನ ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿ ತೆರಳಿದ್ದು, ರಮಝಾನ್ ಉಪವಾಸದ ಕಾರಣ ಮದುವೆಯ ಔತಣಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ. ಈ ನಿಟ್ಟಿನಲ್ಲಿ ಕುಕ್ಕಿಲದ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಧನಂಜಯ್ ಏರ್ಪಡಿಸಿದ್ದು ಶ್ಲಾಘನೆಗೆ ಪಾತ್ರವಾಗಿದೆ ಎಂಬ ವಿಚಾರವೀಗ ಜಾಲತಾಣಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.