ಕೊಲಂಬೋದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಮತಾಂಧರು ಮತ್ತೊಮ್ಮೆ ಅಟ್ಟಹಾಸಗೈದಿದ್ದು, ಸಜ್ಜನ ಶಕ್ತಿಗೊಂದು ಸವಾಲಾಗಿದೆ ಎಂದು ಹೇಳಿರುವ ಹಿಂದು ಜಾಗರಣಾ ವೇದಿಕೆ 25ರಂದು ಕಲ್ಲಡ್ಕ ಶ್ರೀರಾಮ ಮಂದಿರ ಮುಂಭಾಗ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಿಂದು ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಕಳೆದ ಭಾನುವಾರ ಪ್ರಾರ್ಥನೆಯಲ್ಲಿ ತೊಡಗಿದ್ದ ಭಕ್ತಸಮೂಹದ ಮೇಲೆ 8 ಕಡೆಗಳಲ್ಲಿ ನಡೆಸಿದ ಈ ಘೋರ ದಾಳಿ ಕ್ರೌರ್ಯದ ಪರಮಾವಧಿ. ಇದು ಸಜ್ಜನ ಶಕ್ತಿಗೊಂದು ಸವಾಲು. ಯಾವುದೇ ಜಾತಿ -ಮತ -ಪಕ್ಷ -ಭಾಷೆ -ದೇಶಗಳನ್ನೂ ಬಿಡದೆ ನರಮೇಧ ನಡೆಸುತ್ತಿರುವ ಭಯೋತ್ಪಾದಕ ನರರಕ್ಕಸರ ನೀಚಕೃತ್ಯವನ್ನು ಹಿಂದು ಜಾಗರಣ ವೇದಿಕೆ ಅತ್ಯಂತ ಕಟುವಾಗಿ ಖಂಡಿಸುತ್ತದೆ. ಇಂತಹ ಅಮಾನುಷ ಆಕ್ರಮಣಗಳ ವಿರುದ್ಧ ಭಾರತ ಮಾತ್ರವಲ್ಲ ಜಗತ್ತಿನ ಸಜ್ಜನ ಶಕ್ತಗಳೆಲ್ಲ ಜಾಗೃತವಾಗಿ ಎದ್ದು ನಿಂತು ಅದನ್ನು ಮಟ್ಟಹಾಕಬೇಕಾಗಿದೆ. ಸ್ಫೋಟದಲ್ಲಿ ಬಲಿಯಾದ ಎಲ್ಲಾ ಬಂಧುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುವುದರೊಂದಿಗೆ, ಅವರ ಬಂಧುಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.