ತುಂಬೆಯಲ್ಲಿ ಎಷ್ಟಿದೆ ನೀರು? ನೋಡಲು ಬಂದರು ಮಂಗಳೂರಿನ ಶಾಸಕರು

ಮಂಗಳೂರಿನಲ್ಲಿ ನೀರಿಗೆ ಇನ್ನು ರೇಷನಿಂಗ್ ಅಗತ್ಯ ಇದೆಯೇ ಇಲ್ಲವೇ, ತುಂಬೆಯಲ್ಲಿ ನೀರು ಸಾಕಷ್ಟಿಲ್ಲವೇ ಎಂಬಿತ್ಯಾದಿ ಅನುಮಾನಗಳು ದಿನೇ ದಿನೇ ಕಾಣಿಸುವಂತೆ ಮಾಡಿದ್ದು, ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಬರಿದಾಗುತ್ತಿರುವ ನೇತ್ರಾವತಿ.

ಹೀಗಾಗಿ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್,ಡಾ.ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಗಳ ನಿಯೋಗ ಸೋಮವಾರ ಸಂಜೆ ತುಂಬೆ ವೆಂಟೆಡ್ ಡ್ಯಾಂ ಹಾಗೂ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕಕ್ಕೆ ಭೇಟಿ ನೀಡಿ ನೀರಿನ ಸಂಗ್ರಹದ ಸ್ಥಿತಿಯನ್ನು ಪರಿಶೀಲಿಸಿದರು.

ಸದ್ಯ ತುಂಬೆ ವೆಂಟೆಡ್ ಡ್ಯಾಂನಲ್ಲಿ 5.23 ಮೀ.ನೀರು ಸಂಗ್ರಹವಿದ್ದರೆ,ಎಎಂಆರ್ ಜಲವಿದ್ಯುತ್ ಘಟಕದಲ್ಲಿ 3 ಮೀ.ನಷ್ಟು ಮಾತ್ರ ನೀರು ಸಂಗ್ರಹವಾಗಿದೆ ಎಂಬ ಅಂಶವನ್ನು ತಿಳಿದುಕೊಂಡ ಅವರಿಗೆ ಎ ಎಂ ಆರ್ ನಿಂದ ಈ ನೀರನ್ನು ತುಂಬೆ ಡ್ಯಾಂನತ್ತ ಹರಿಯಬಿಟ್ಟರೂ, ಅಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಬಹುದೇ ವಿನಹ ಇದರಿಂದ ಹೆಚ್ಚಿನ ಲಾಭವಾಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

ಯಾಕೆ ರೇಷನಿಂಗ್?

ತುಂಬೆಯಲ್ಲಿ ಈ ಹಿಂದೆ  ಹಳೇ ಡ್ಯಾಂನಲ್ಲಿ 4 ಮೀ.ನಷ್ಟು ನೀರು ಇದ್ದಾಗಲೂ ಮಂಗಳೂರಿನ ಜನತೆಗೆ ರೇಷನಿಂಗ್ ನಲ್ಲಿ ನೀರು ಪೂರೈಸಿರಲಿಲ್ಲ,ಈಗಿನ ಹೊಸ ಡ್ಯಾಂನಲ್ಲಿ 5.23 ನಷ್ಟು ನೀರು ಇರುವಾಗ ಕುಡಿಯುವ ನೀರನ್ನು ರೇಷನಿಂಗ್ ನಲ್ಲಿ ಪೂರೈಸುವುದು ಅಸಮಂಜಸವಾಗಿದೆ. ಈ ಕುರಿತು ಮಂಗಳವಾರವೇ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಶಾಸಕದ್ವಯರಾದ ವೇದವ್ಯಾಸ ಕಾಮತ್,ಡಾ.ವೈ.ಭರತ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು,ಮಾಜಿ ಕಾರ್ಪೊರೇಟರ್ ಗಳಾದ  ಪ್ರೇಮಾನಂದ ಶೆಟ್ಟಿ,ಸುಧೀರ್ ಶೆಟ್ಟಿ ಕಣ್ಣೂರು,ವಿಜಯಕುಮಾರ್,ಸುರೇಂದ್ರ ಜಪ್ಪಿನಮೊಗರು, ರಾಜೇಶ್, ರೂಪ ಡಿ.ಬಂಗೇರ, ಪೂರ್ಣಿಮ, ಜಯಂತಿ ಆಚಾರ್ಯ, ಬಿಜೆಪಿ ಮುಖಂಡರಾದ ನತಿನ್ ಕುಮಾರ್,ರವಿಶಂಕರ್ ಮಿಜಾರ್ ಮೊದಲಾದವರಿದ್ದರು.

ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಪ್ರಮಾಣವನ್ನು ಪರಿಶೀಲಿಸಿದರು.

ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಂದರ್ಭ, ಬಾಗಿನ ಕೊಡುವ ಸಂದರ್ಭ, ಮಂಗಳೂರಿನ ಪತ್ರಕರ್ತರ ತಂಡವನ್ನು ಕಟ್ಟಿಕೊಂಡು ಜನಪ್ರತಿನಿಧಿಗಳು ಭೇಟಿ ನೀಡುತ್ತಾರಾದರೂ ಮಂಗಳೂರಿನ ಜನರು ನೀರನ್ನು ಮಿತವಾಗಿ ಬಳಸುವ ಕುರಿತು, ದಿನೇ ದಿನೇ ಜಾಸ್ತಿಯಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಜಲಮೂಲಗಳ ಶೋಧ ಹಾಗೂ ಜಲಸಂರಕ್ಷಣೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು, ಜನರಿಗೆ ಚುರುಕು ಮುಟ್ಟಿಸುವ ಕಾರ್ಯಯೋಜನೆ ರೂಪಿಸುವತ್ತ ಗಮನ ಹರಿಸುವುದೂ ಅಗತ್ಯವಿದೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ