ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಏ.19ರಂದು ಶ್ರೀಮದ್ ರಾಮಾಯಣ ಮಹಾಯಜ್ಞ ಮತ್ತು ಶ್ರೀ ಹನುಮೋತ್ಸವ ಭಕ್ತಿ, ಸಡಗರ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಂದ ಸಂಪನ್ನಗೊಂಡಿತು.
ಈ ಸಂದರ್ಭ ಸೇರಿದ್ದ ಭಕ್ತರನ್ನು ಆಶೀರ್ವದಿಸಿದ ಶ್ರೀ ಗುರುದೇವಾನಂದ ಸ್ವಾಮೀಜಿ, ಹನುಮಂತ ಎಂದರೆ ಶಕ್ತಿಸ್ವರೂಪ, ಚಿರಂಜೀವಿ. ಸೇವೆಗೆ ಇನ್ನೊಂದು ಹೆಸರೇ ಆಂಜನೇಯ. ಅಂತರಂಗದ ವಿಕಸನಕೆ ಭಜನೆ ಸಹಕಾರಿ. ಅಂತರಂಗ ವಿಶಾಲವಾಗಲು ಯಜ್ಞ ಅಗತ್ಯ ಪ್ರೇಮತತ್ವವನ್ನು ತಿಳಿಯಪಡಿಸುವುದು ರಾಮತತ್ವ. ಸಂಘಟನೆ ಎಂದರೆ ರಾಮ. ನಾಯಕತ್ವ ಎಂದರೆ ಹನುಮ. ರಾಮ ಸೇವೆ ಎಂದರೆ ರಾಷ್ಟ್ರಸೇವೆ. ರಾಮನೆಂದರೆ ರಾಷ್ಟ್ರ ಹನುಮಂತ ಅವದೂತ. ಅರ್ಪಣಾಭಾವದ ಸೇವೆ ಭಗವಂತನಿಗೆ ಪ್ರಿಯವಾದುದು.ದೇಶ, ಕಾಲ, ಸ್ಥಿತಿಯನ್ನು ಅರಿತಿರುವ ನಾಯಕನ ಆಯ್ಕೆಯಿಂದ ಮಾತ್ರ ದೇಶದ ಸಂಬ್ರಕ್ಷಣೆ ಸಾಧ್ಯ. ಸಂತನ ಬದುಕು ಸಮಾಜದ ಒಳಿತಿಗಾಗಿ ಎಂದರು.
ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ವೀರಾಂಜನೇಯ ವೈಭವ ಯಕ್ಷಗಾನ ಕೃತಿ ಬಿಡುಗಡೆ ಮಾಡಿ,ಹೊಸ್ತೋಟ ಮಂಜುನಾಥ ಭಾಗವತರನ್ನು ಗೌರವಿಸಿದರು. ‘ಮನೆಗೊಂದು ಹನುಮ ಧ್ವಜ’ ವಿತರಣೆ ಮಾಡಿದರು.
ರಾಜ್‌ಗೋಪಾಲ್ ಬೆಂಗಳೂರು, ಮುಂಬೈನ ಉದ್ಯಮಿಗಳಾದ ವಾಮಯ್ಯ ಬಿ.ಶೆಟ್ಟಿ, ಕೃಷ್ಣ ಎಲ್.ಶೆಟ್ಟಿ, ದಾಮೋದರ ಎಸ್ ಶೆಟ್ಟಿ. ಬೆಂಗಳೂರಿನ ಉದ್ಯಮಿಗಳಾದ, ಬಾಲಚಂದ್ರ, ಮುಂಬೈನ ರೇವತಿ.ವಿ.ಶೆಟ್ಟಿ, ಕುಶಲ.ಆರ್.ಶೆಟ್ಟಿ, ಸರ್ವಾಣಿ ಪಿ.ಶೆಟ್ಟಿ, ಡಾ| ಅದೀಪ್ ಶೆಟ್ಟಿ .ಎ, ಸುರೇಶ್ ರೈ ಮಂಗಳೂರು, ಆಶೋಕ್ ಕುಮಾರ್ ಬಿಜೈ, ಸಿದ್ದರಾಮಪ್ಪ ದಾವಣಗೆರೆ, ಅಜಿತ್‌ಕುಮಾರ್ ಪಂದಳಮ್, ಭರತ್ ಭೂಷಣ್ ಮಂಗಳೂರು, ಜಯರಾಮ ರೈ ಮಲಾರು ಮೊದಲಾದವರು ಉಪಸ್ಥಿತರಿದ್ದರು.ಗುರುದೇವಾ ವಿದ್ಯಾಪೀಠದ ಶಿಕ್ಷಕಿ ರೇಣುಕ ಎಸ್ ರೈ ಆಶಯಗೀತೆ ಹಾಡಿದರು. ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸಂತೋಷ್ ಭಂಡಾರಿ ವಂದಿಸಿದರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೇ.ಮೂ ಚಂದ್ರಶೇಖರ ಉಪಾಧ್ಯಾಯ ರವರ ಪೌರೋಹಿತ್ಯದಲ್ಲಿ ಶ್ರೀ ಮುದ್ರಾಮಾಯಣ ಮಹಾಯಜ್ಞ – ಶ್ರೀ ಹನುಮೋತ್ಸವ ನಡೆಯಿತು.
ಬೆಳಿಗ್ಗೆ ಅಖಂಡ ಭಗವನ್ನಾಮ ಸಂಕೀರ್ತನೆ ಸಮಾಪ್ತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಗಂಟೆ 9ರಿಂದ ಮುದ್ರಾಮಾಯಣ ಮಹಾಯಜ್ಞ ಆರಂಭಗೊಂಡಿತು. ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ನಡೆಯಿತು. ಮಧ್ಯಾಹ್ನ ಶ್ರೀ ಮುದ್ರಾಮಾಯಣ ಮಹಾಯಜ್ಞದ ಪೂರ್ಣಾಹುತಿ ನಡೆದು ಪ್ರಸಾದವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.ಬಳಿಕ ವಿಶ್ವಭಾರತಿ ಯಕ್ಷ ಸಂಜೀವಿನಿ ಮುಡಿಪು ಇವರಿಂದ ವೀರಮಣಿಕಾಳಗ ಯಕ್ಷಗಾನ ತಾಳಮದ್ಧಳೆ ನಡೆಯಿತು.ರಾತ್ರಿ ಹನುಮದ್ವ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.