ಇದು ಬಿ.ಸಿ.ರೋಡ್ ಮಯ್ಯರಬೈಲು ಪಕ್ಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂದಿರದ ಹಿಂಬದಿ ಪ್ರಗತಿಬಂಧು ಒಕ್ಕೂಟವೊಂದು ನೂರು ದಿನಗಳಲ್ಲಿ ಬತ್ತದ ಬೆಳೆ ಬೆಳೆದ ಯಶೋಗಾಥೆ.
ಸುಗ್ಗಿಯ ಬೆಳೆಯನ್ನು ಕಟಾವು ಮಾಡುವ ಹುಮ್ಮಸ್ಸಿನಲ್ಲಿರುವ ಈ ತಂಡ ಬಿಸಿಲು ಲೆಕ್ಕಿಸದೆ ಮೈಮುರಿದು ದುಡಿದದ್ದರ ಫಲ ಪಡೆಯುವ ಕಾಲ ಸನ್ನಿಹಿತವಾಗಿದೆ. ಬತ್ತದ ಕೃಷಿ ಕಣ್ಮರೆಯಾಗುತ್ತದೆ ಎಂಬ ಆತಂಕದ ಮಧ್ಯೆ ಯೋಜನೆ ಸದಸ್ಯರು ಇಚ್ಛಾಶಕ್ತಿ ಇದ್ದರೆ ಸಾಧಿಸಿ ತೋರಿಸಬಹುದು ಎಂದು ಸಾರುತ್ತಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ರೋಡ್ ವಲಯದ ಪಂಜಿಕಲ್ಲು ಕಾರ್ಯಕ್ಷೇತ್ರದ ಆಚಾರಿಪಲ್ಕೆ ಒಕ್ಕೂಟದ ಕೇಳ್ದೋಡಿ (ಎ) ಪ್ರಗತಿಬಂಧು ಒಕ್ಕೂಟದ ಸದಸ್ಯರು ಬತ್ತ ಬೆಳೆಯುವ ಯೋಜನೆ ಕೈಗೊಳ್ಳುವ ವಿಚಾರವನ್ನು ಕಳೆದ ನಾಲ್ಕು ತಿಂಗಳ ಹಿಂದೆ ಮಂಡಿಸಿದರು ಅಧ್ಯಕ್ಷರೂ ಆಗಿರುವ ರಾಜೇಶ್ ಗೌಡ, ಸದಸ್ಯರಾದ ಪದ್ಮನಾಭ ಪೂಜಾರಿ, ಬೂಬ ಮೂಲ್ಯ, ಮೋಹಿನಿ ಈ ನಾಲ್ವರೂ ಬಿ.ಸಿ.ರೋಡಿನ ಮಯ್ಯರಬೈಲಿನಲ್ಲಿರುವ ಪುರುಷೋತ್ತಮ ಮತ್ತು ವಾಸು ಕುಲಾಲ್ ಅವರ ಜಾಗ ಗೇಣಿಗೆ ಪಡೆದು ಬತ್ತ ಬೆಳೆಯುವ ವಿಚಾರವನ್ನು ಪ್ರಸ್ತಾಪಿಸಿದರು. ಅದರಂತೆ ವಲಯ ಮೇಲ್ವಿಚಾರಕ ರಮೇಶ್ ಎಸ್ ಮತ್ತು ಕೃಷಿ ಮೇಲ್ವಿಚಾರಕ ಮುರಳೀಧರ ಮಾರ್ಗದರ್ಶನದಲ್ಲಿ ಪುರುಷೋತ್ತಮ ಮತ್ತು ವಾಸು ಕುಲಾಲ್ ಅವರಿಬ್ಬರ ಮೂರು ಎಕರೆ ಜಾಗವನ್ನು ಗೇಣಿಗೆ ಪಡೆದು ಕೆಲಸದ ಶುಭಾರಂಭ ಮಾಡಿಯೇಬಿಟ್ಟರು.
ಬಿತ್ತನೆ ಕಾರ್ಯ ನಡೆದು ಕೊಯ್ಲಿನವರೆಗೆ ಸುಮಾರು 100 ದಿನ ಅವಧಿಯಲ್ಲಿ ಪಂಜಿಕಲ್ಲಿನಿಂದ ಈ ನಾಲ್ವರೂ ಸದಸ್ಯರು ಪ್ರತಿನಿತ್ಯ ಆಗಮಿಸಿ, ಗದ್ದೆಯ ಕಾರ್ಯಗಳನ್ನು ನಡೆಸುತ್ತಿದ್ದರು. ಇದಕ್ಕೆ ಪೂರಕವಾಗಿ ನೀರಿನ ಕೊರತೆ ಆಗದೇ ಇರುವುದು ಹಾಗೂ ಉಳುಮೆಯಂತ್ರ ಬಳಕೆಯಾದದ್ದು ಪ್ಲಸ್ ಪಾಯಿಂಟ್ ಆಯಿತು. ನೋಡನೋಡುತ್ತಿದ್ದಂತೆಯೇ ಖಾಲಿ ಬಿದ್ದಿದ್ದ ಜಾಗದಲ್ಲಿ ಭತ್ತದ ಪೈರುಗಳು ನಳನಳಿಸಲು ಆರಂಭಿಸಿದವು. ಉರಿಬಿಸಿಲು ಇದ್ದರೂ ಪ್ರಗತಿಬಂಧು ತಂಡದ ಸದಸ್ಯರ ಉತ್ಸಾಹಕ್ಕೆ ಕುಂದು ಬರಲಿಲ್ಲ.
ಸುಮಾರು ೪೫ ಸಾವಿರ ರೂ ಖರ್ಚಾಗಿದೆ. ನಮ್ಮ ಸದಸ್ಯರೇ ಮೈಮುರಿದು ಕೆಲಸ ಮಾಡಿದ್ದಾರೆ. ಇದೀಗ ಕಟಾವಿನ ಹೊತ್ತು.
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ