Categories: ಯುವಲಹರಿ

ಊರಿಗೆ ಬಂದರು, ಓಟು ಮಾಡಿದರು

ಹೊರರಾಜ್ಯ, ದೇಶಗಳಲ್ಲಿದ್ದವರು ಮತ ಚಲಾಯಿಸಿದ್ದಾರೆ, ನಮ್ಮೂರಲ್ಲಿರುವರೇ ಓಟು ಹಾಕೋದು ಯಾವಾಗ?

  • ಮೇಧಾ ರಾಮಕುಂಜ

ಲೋಕಸಭಾ ಚುನಾವಣೆ ಪ್ರಾರಂಭವಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆದಿದೆ. ಮತದಾರರು ಬಹಳ ಆಸಕ್ತಿಯಿಂದ ಮತಗೆಟ್ಟೆಯೆಡೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಡಿದ್ದಾರೆ.

ಈ ಬಾರಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರು ಹಾಗೂ ದೂರದ ರಾಜ್ಯ ಮತ್ತು ಹೊರ ಜಿಲ್ಲೆಗಳಲ್ಲಿರುವ ಮತದಾರರು ತಮ್ಮ ಊರಿಗೆ ಆಗಮಿಸಿ, ಮತದಾನ ಮಾಡುವುದರ ಮುಖೇನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಬಂಟ್ವಾಳದಲ್ಲಿ ಅನೇಕರು ದೂರದ ಊರುಗಳಿಂದ ಆಗಮಿಸಿ ಇಂತಹ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಕುರಿತು ಕೆಲವು ಮತದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಲ್ಲಿಯವರೆಗೆ ನಾನು ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ. ಮತ ಚಲಾವಣೆ ನಮ್ಮ ಹಕ್ಕು ಎಂಬ ವಿಚಾರ ರಕ್ತಗತವಾಗಿ ನನ್ನಲ್ಲಿ ಬಂದಿದ್ದು, ಇದು ತಾಯಿ ಕೊಟ್ಟ ಸಂಸ್ಕಾರವೂ ಹೌದು. ಕೆಲಸದ ನಿಮಿತ್ತ ನಾನು ಭಾರತದಾದ್ಯಂತ ಬೇರೆ ಬೇರೆ ರಾಜ್ಯಗಳಾದ ಗುಜರಾತ್, ಛತ್ತೀಸ್‌ಗಢ ಹಾಗೂ ಗೋವಾದಲ್ಲಿದ್ದೆ. ಆ ಸಂದರ್ಭದಲ್ಲೂ ಚುನಾವಣೆ ಇದ್ದಾಗಲೆಲ್ಲಾ ಊರಿಗೆ ಆಗಮಿಸಿ ಮತ ಚಲಾಯಿಸಿದ್ದೇನೆ. ಇಲ್ಲಿಯವರೆಗೆ ಒಮ್ಮೆಯೂ ಮತಚಲಾವಣೆಯಿಂದ ವಂಚಿತನಾಗಲಿಲ್ಲ. ಈ ಬಾರಿ ವಿದೇಶದಲ್ಲಿ ನೆಲೆಸಿರುವ ಭಾರತೀಯರೂ ಕೂಡಾ ಊರಿಗೆ ಬಂದು, ಭಾರತದ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿಯುವ ಸಮರ್ಥ ನಾಯಕ ಬೇಕೆಂದು ಮತ ಚಲಾಯಿಸುತ್ತಿದ್ದಾರೆ ಎಂದು ಕೊಲ್ಕತ್ತಾದಲ್ಲಿ ನೆಲೆಸಿರುವ ಬಿ.ಸಿ.ರೋಡು ನಿವಾಸಿ ರಾಜರಾಮ್ ಭಟ್ ಹೇಳಿದರು.

ಬಾಲ್ಯದಲ್ಲಿ ಕಲಿತ ಪಾಠಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕಿರುವ ಮಹತ್ವದ ಕುರಿತು ವಿವರಿಸಲಾಗುತ್ತಿತ್ತು. ಅದರಿಂದಾಗಿ ಪ್ರತಿ ಬಾರಿಯೂ ಮತದಾನ ಮಾಡಲೇಬೇಕೆಂಬ ಹಂಬಲ ನನ್ನಲ್ಲಿ ಮೂಡಿತು. ಈ ಹಿಂದೆ ನಾನು ಮೈಸೂರಿನಲ್ಲಿದ್ದಾಗಲೂ ಚುನಾವಣೆಯ ಸಂದರ್ಭದಲ್ಲಿ ಊರಿಗೆ ಬಂದು ಮತ ಚಲಾಯಿಸಿದ್ದೆ. ಈ ಬಾರಿ ಮತದಾನದ ಜೊತೆಗೆ ಇತರ ಕಾರ್ಯಕ್ರಮಗಳನ್ನು ಚುನಾವಣೆಯ ದಿನಾಂಕದ ಜೊತೆಗೆ ಹೊಂದಿಸಿಕೊಂಡು ಬಂದಿದ್ದೇನೆ. ನನ್ನ ಇತರ ಗೆಳೆಯರು ಕೂಡಾ ಚುನಾವಣೆಯ ದಿನವನ್ನು ಗಮನದಲ್ಲಿರಿಸಿಕೊಂಡೇ ಊರಿನತ್ತ ಪಯಣ ಬೆಳೆಸುವ ಯೋಜನೆ ಹಾಕಿಕೊಂಡವರಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಕುರಿತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೂ ವಿಶ್ವಾಸ ಹುಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮಗಳು ಕೂಡಾ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸುತ್ತಿವೆ ಎಂದು ಯು.ಎಸ್.ಎ.ಯ ಲೋಸ್ ಏಂಜಲೀಸ್‌ನಲ್ಲಿ ನೆಲೆಸಿರುವ ಕೊಡಂಗೆ ಮೂಲದ ಶ್ರೀಕರ ಕೌಡಂಬಾಡಿ ಅಭಿಪ್ರಾಯಪಟ್ಟರು.

ಇದೇ ಮೊದಲ ಬಾರಿಗೆ ನಾನು ಮತದಾನ ಮಾಡುವ ಉದ್ದೇಶದಿಂದ ಚೆನ್ನೈನಿಂದ ಬಂದಿದ್ದೇನೆ. ಕೇಂದ್ರ ಸರಕಾರದಲ್ಲಿ ದಕ್ಷ ನಾಯಕ ಹಾಗೂ ಉತ್ತಮ ಸರಕಾರ ಬೇಕೆಂದು ಮತಚಲಾಯಿಸಿದ್ದೇನೆ. ಜೊತೆಗೆ ನಮ್ಮ ಸುತ್ತಮುತ್ತಲೂ ಇರುವ ಗೆಳೆಯರನ್ನು ಕೂಡಾ ಓಟು ಹಾಕಲು ಪ್ರೇರೇಪಿಸಿದ್ದೇನೆ. ಈ ಬಾರಿ ಚುನಾವಣೆಗಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ ಎಂದು ಚೆನ್ನೈನಲ್ಲಿ ನೆಲೆಸಿರುವ ಅಜ್ಜಿಬೆಟ್ಟು ನಿವಾಸಿ ಮನೀಷ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮತದಾನ ನಮ್ಮ ಹಕ್ಕು. ಸರಕಾರದ ವಿರುದ್ಧ ಬೆಟ್ಟು ಮಾಡಿ ತೋರಿಸುವ ಮೊದಲು ನಾವು ಮತ ಚಲಾಯಿಸಬೇಕು. ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಸೂಕ್ತ ಅಭ್ಯರ್ಥಿ ಹಾಗೂ ಸರಕಾರವನ್ನು ನಾವೇ ಆಯ್ಕೆ ಮಾಡಬೇಕು. ನನ್ನ ಒಂದು ಮತವೂ ದೇಶದ ಅಭಿವೃದ್ಧಿಗೆ ಕಾರಣವಾಗುವುದರಿಂದ ವಿದೇಶದಿಂದ ಬಂದಿದ್ದೇನೆ. ಮತದಾನದ ಬಳಿಕ ಷೇರು ಮಾರುಕಟ್ಟೆಯ ಸುಧಾರಣೆ ಹಾಗೂ ಸೂಕ್ತ ತೆರಿಗೆ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಅಬುದಾಭಿಯಲ್ಲಿ ನೆಲೆಸಿರುವ ಬಂಟ್ವಾಳ ಮೂಲದ ಅನಂತ್ ಪೈ ಹೇಳಿದರು.

ದೇಶದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಮತ ಚಲಾಯಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಹಾಗಾಗಿ ನಾವೆಲ್ಲರೂ ಎಲ್ಲೇ ಇದ್ದರೂ, ಎಷ್ಟೇ ದೂರದಲ್ಲಿ ನೆಲೆಸಿದ್ದರೂ ಚುನಾವಣೆಯ ಸಂದರ್ಭದಲ್ಲಿ ಬಂದು ಮತ ಚಲಾಯಿಸಲೇಬೇಕು. ದೇಶದಲ್ಲಿ ಪ್ರಜಾಪ್ರಭುತ್ವದ ಶಕ್ತಿಯನ್ನು ಬಿಂಬಿಸುವ ಸಲುವಾಗಿ ಚುನಾವಣೆಯಲ್ಲಿ ಭಾಗಿಯಾಗಬಬೇಕೆಂದು ಊರಿಗೆ ಬಂದೆ. ಮೂಲಭೂತ ಸೌಕರ್ಯ, ರಾಷ್ಟ್ರೀಯ ಭದ್ರತೆಗಾಗಿ ಉತ್ತಮ ಸರಕಾರದ ನಿರೀಕ್ಷೆಯಿದೆ; ಹಾಗಾಗಿ ಮತ ಚಲಾಯಿಸಿದೆ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಬಿ.ಸಿ. ರೋಡು  ಮೂಲದ ನಂದನ್ ಭಟ್ ಅಭಿಪ್ರಾಯಪಟ್ಟರು.

ಮತಾದಾನ ಮಾಡಲೆಂದೇ ನಾನು ಊರಿಗೆ ಬಂದಿದ್ದೇನೆ. ಭಾರತ ದೇಶದ ಪ್ರಗತಿಗೆ ಹಾಗೂ ದೇಶದ ಒಳಿತಿಗೆ ನಮ್ಮ ಕಡೆಯಿಂದ ಕಿರುಕಾಣಿಕೆ ನಿಡುವ ಉದ್ದೇಶದಿಂದ ಮತದಾನದ ಹಕ್ಕನ್ನು ಚಲಾಯಿಸಿದ್ದೇವೆ. ಬೇರೆ ಕಾರ್ಯಕ್ರಮವಿದ್ದರೂ ಮೊದಲು ಮತದಾನದ ಜವಾಬ್ದಾರಿಯನ್ನು ಪೂರೈಸಿ ಬಳಿಕ ಕಾರ್ಯಕ್ರಮಕ್ಕೆ  ತೆರಳುವ ಉದ್ದೇಶ ನನ್ನದು. ದೇಶದ ಉದ್ಧಾರಕ್ಕಾಗಿ ಮತ ಚಲಾಯಿಸುವುದರ ಮೂಲಕ ಅಳಿಲು ಸೇವೆ ಮಾಡಿರುವ ಹೆಮ್ಮೆ ನನಗಿದೆ ಎಂದು ಬೆಂಗಳೂರಿನಲ್ಲಿ ನೆಲೆಸಿರುವ  ಕಲ್ಲಡ್ಕ ನಿವಾಸಿ ಜ್ಯೋತಿ ಭಟ್ ಹೇಳಿದರು.

ಮತದಾನ ನಮ್ಮ ಹಕ್ಕು ಆಗಿರುವುದರಿಂದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತ ಚಲಾಯಿಸಲೇಬೇಕು. ಒಂದು ಮತವೂ ಬದಲಾವಣೆಗೆ ಕಾರಣವಾಗಬಹುದು. ವಸ್ತುಗಳ ಬೆಲೆ ಕಡಿಮೆಯಾಗಿ ಮಧ್ಯಮವರ್ಗ ಹಾಗೂ ಬಡಜನರು ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಠಿಯಾಗಿ ವಿದೇಶದಲ್ಲಿರುವ ನಮ್ಮಂತವರು ಭಾರತಕ್ಕೆ ಮರಳಿ ಉದ್ಯೋಗ ಪಡೆದುಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಮತ ಚಲಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ’ಆನ್‌ಲೈನ್ ಓಟಿಂಗ್’ ವ್ಯವಸ್ಥೆ ಮಾಡಿದರೆ, ವಿದೇಶದಲ್ಲಿರುವ ಭಾರತೀಯರು ಮತ ಚಲಾಯಿಸಲು ಹೆಚ್ಚು ಸಹಾಯವಾಗಬಹುದು ಎಂದು ದುಬೈಯಲ್ಲಿ ನೆಲೆಸಿರುವ ಮೊಡಂಕಾಪು ನಿವಾಸಿ ಡೆಲಿಷ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.

ಬಲಿಷ್ಠ ಭಾರತ, ದೃಢ ಸರಕಾರ ಹಾಗೂ ಉತ್ತಮ ಆಡಳಿತಕ್ಕಾಗಿ ನನ್ನ ಕೊಡುಗೆ ನೀಡಲು ಊರಿಗೆ ಬಂದು ಮತ ಚಲಾಯಿಸಿದ್ದೇನೆ. ಚುನಾವಣೆಯ ಉದ್ದೇಶದಿಂದಲೇ ಬಂದು, ನಾನು ಮತ ಚಲಾಯಿಸುವುದರ ಜೊತೆಗೆ ಇತರರಿಗೂ ಮತ ಚಲಾಯಿಸುವಂತೆ ಕೇಳಿಕೊಂಡಿದ್ದೇನೆ. ಭಾರತದ ಹಿರಿಮೆ ವಿದೇಶದಲ್ಲಿಯೂ ಪಸರಿಸುತ್ತಿರುವುದರಿಂದ ಈ ಬಾರಿ ವಿದೇಶದಲ್ಲಿರುವ ಭಾರತೀಯ ಮತದಾರರು ದೇಶಕ್ಕೆ ಬಂದು ಮತ ಚಲಾಯಿಸುವಲ್ಲಿ ಆಸಕ್ತಿ ತೋರಿದ್ದಾರೆ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಬಂಟ್ವಾಳ ಮೂಲದ ಸಮರ್ಥ್ ಹೇಳಿದರು.

ಮತ ಚಲಾವಣೆ ನನ್ನ ಸಾಂವಿಧಾನಿಕ ಹಕ್ಕು. ದೇಶದ ಪ್ರಜೆಯಾಗಿ ಚುನಾವಣೆಯಲ್ಲಿ ಭಾಗಿಯಾಗುವುದು ನನ್ನ ಜವಾಬ್ದಾರಿ. ಮತ ಚಲಾಯಿಸದೇ ಇದ್ದಲ್ಲಿ ಪರೋಕ್ಷವಾಗಿ ಯೋಗ್ಯನಲ್ಲದ ಅಭ್ಯರ್ಥಿ ಆಯ್ಕೆಯಾಗುವಲ್ಲಿ ನಾನೇ ಜವಾಬ್ದಾರನಾಗುತ್ತೇನೆ. ಹಾಗಾಗಿ ಪ್ರತಿಯೊಂದು ಮತವೂ ಮುಖ್ಯ. ಭಾರತದಲ್ಲಿ ಉದ್ಯೋಗಾವಕಾಶ ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಇನ್ನಷ್ಟು ಯೋಜನೆಗಳ ಅವಶ್ಯಕತೆಯಿದೆ. ಹಾಗಾಗಿ ವಿದೇಶದಿಂದ ಬಂದು ಮತ ಚಲಾಯಿಸಿದೆ ಎಂದು ಯು.ಎ.ಇ.ಯ ಶರ್ಜಾದಲ್ಲಿ ನೆಲೆಸಿರುವ ಪ್ರವೀಣ್ ಕುಡ್ವ ಹೇಳಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Share
Published by
Harish Mambady

Recent Posts