ಸಹಾಯಕ್ಕೆ ನಾವು ಸೈ, ರಾಜಕೀಯ ಮಾತನಾಡಿದರೆ ಗುಡ್ ಬೈ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಇವರು ಕುಟುಂಬದ ಸದಸ್ಯರು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ, ಕಷ್ಟಕಾಲದಲ್ಲಿ ರೋಗಿಗಳಿಗೆ ಆರ್ಥಿಕ ಬಲದ ಸಹಾಯಕೊಡಲಾಗದಿದ್ದರೂ ರಕ್ತ ಕೊಡುವುದು, ಪರಿಸರ ಸಂರಕ್ಷಣೆ, ಹಳ್ಳಿ ಪ್ರದೇಶಗಳಲ್ಲಿ ಇರುವ ಅತ್ಯಂತ ಬಡ ಕುಟುಂಬಗಳಿಗೆ ನೆರವು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವು, ಬಡ ಕುಟುಂಬಗಳಿಗೆಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ನೆರವು ಒದಗಿಸುವುದು, ಪ್ರಾಕೃತಿಕ ವಿಕೋಪದ ಸಂದರ್ಭ ರಕ್ಷಣಾ ತಂಡಕ್ಕೆ ಸಹಕರಿಸುವುದು ಇವರ ಕೆಲಸ ಕಾರ್ಯಗಳು. ಬೇರೆ ಬೇರೆ ಉದ್ಯೋಗದಲ್ಲಿರುವ ಇವರಿಗೆ ದೈನಂದಿನ ದುಡಿಮೆಯೇ ಆಧಾರ. ಆದರೆ ವಸುದೈವ ಕುಟುಂಬಕಂ ಎಂಬ ತತ್ವದಡಿ ಕಾರ್ಯಾಚರಿಸುವ ಈ ಟೀಮ್ ನಲ್ಲಿ ರಾಜಕೀಯ ವಿಚಾರ ವಿನಿಮಯವೇ ಇಲ್ಲ.
ಇದು ನೆಟ್ಲ, ಗೋಳ್ತಮಜಲು ಪರಿಸರದ ಸಾಮಾನ್ಯ ಕೆಲಸಗಳನ್ನು ದೈನಂದಿನ ಜೀವನೋಪಾಯಕ್ಕಾಗಿ ನಿರ್ವಹಿಸುವ ನಿಸ್ವಾರ್ಥಿ ಯುವಕರ ತಂಡ. ಧನಂಜಯ ಗುಂಡಿಮಜಲು ಅಧ್ಯಕ್ಷ. ದಿನೇಶ್ ಕೆದ್ಲ ಇದರ ಉಪಾಧ್ಯಕ್ಷ. ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಗುಂಡಿಮಜಲು ಮತ್ತು ಪುರುಷೋತ್ತಮ ಗೋಳ್ತಮಜಲು ಇದ್ದಾರೆ. ಸಂಸ್ಥೆಯಲ್ಲಿ ಯಾವುದೇ ರಾಜಕಿಯ ಪಕ್ಷದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ, ಜಾತಿ ಭೇದ ತಾರತಮ್ಯವಿಲ್ಲದೆ ನಾವೆಲ್ಲರೂ ಒಂದೇ ಎಂಬ ಮೂಲತತ್ವದಡಿ ಯಾವುದೇ ಆರ್ಥಿಕ ಚಿಂತನೆಗೆ ಒಳಪಡದೆ ಸೇವೆಯನ್ನಷ್ಟೇ ಮಾಡುವುದು ಇದರ ಮೂಲ ಉದ್ದೇಶ.
ಕುಟುಂಬದ ಕೆಲಸ ಮಾಡುವ ಸಂದರ್ಭ ಸಂಸ್ಥೆಯ ಯೂನಿಫಾರ್ಮ್ ಧರಿಸಬೇಕು, ಕೆಲಸಕ್ಕೆಹೋದ ಕಡೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಶಿಸ್ತು ಕಾಪಾಡುವುದು, ಮಹಿಳೆಯರೊಂದಿಗೆ, ಮನೆಯವರೊಂದಿಗೆ ಗೌರವದಿಂದ ನಡೆದುಕೊಳ್ಳುವುದು ಹೀಗೆ ಹಲವು ಕಠಿಣ ಷರತ್ತುಗಳೂ ಕುಟುಂಬ ತಂಡಕ್ಕಿದೆ.
ಸದ್ಯದ ಕೆಲಸ:
ಕಲ್ಲಡ್ಕ ಸಮೀಪ ನೆಟ್ಲ ಬಳಿಯ ಪಿಲಿಂಜ ಎಂಬ ಪ್ರದೇಶದಲ್ಲಿರುವ 65 ವರ್ಷದ ಧರ್ಣಮ್ಮಜ್ಜಿಯ ಮಗ ವರ್ಷದ ಮೊದಲು ಮೃತಪಟ್ಟಿದ್ದರು. ಈಗ ಬೀಳುವ ಸ್ಥಿತಿಯಲ್ಲಿರುವ ಮನೆಯೇ ಅವರಿಗೆ ಆಧಾರ. ಮುಂದಿನ ಮಳೆಗಾಲದಲ್ಲಿ ಹೇಗೋ ಎಂಬ ಆತಂಕವನ್ನು ತೊಡೆದು ಹಾಕಿದ್ದು ‘ಕುಟುಂಬ’ ಸದಸ್ಯರು. ಬಂಟ್ವಾಳ ಪೊಲೀಸರು ನೀಡಿದ ಮಾರ್ಗದರ್ಶನವೇ ಇದಕ್ಕೆ ಕಾರಣ.
ಕಳೆದ ಭಾನುವಾರ 55 ಸದಸ್ಯರನ್ನು ಹೊಂದಿರುವ ಕುಟುಂಬ ತಂಡದ ಸದಸ್ಯರು ಧರ್ಣಮ್ಮ ಅವರ ಮನೆ ಮರುನಿರ್ಮಾಣಕ್ಕೆ ಕೈಜೋಡಿಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿ ಧರ್ಣಮ್ಮ ಅವರ ಕಣ್ಣಲ್ಲಿ ಆನಂದಬಾಷ್ಪ ತರಿಸಿದರು. ಇದಕ್ಕೆ ಸಾಲಿಯಾನ್ ಸರ್ವೀಸಸ್ ಮಾಲೀಕ ಚಂದ್ರಶೇಖರ್ ಮತ್ತು ಪಂಚಾಯತ್ ಸದಸ್ಯ ಗಿರೀಶ್ ಕುಲಾಲ್ ಅವರ ನೆರವೂ ಇತ್ತು. ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಬೀಟ್ ಪೊಲೀಸ್ ನಾಗರಾಜ್ ಕೆ ಮತ್ತು ಪೊಲೀಸ್ ಸಿಬ್ಬಂದಿ ಚೆನ್ನಪ್ಪ ಗೌಡ ಅವರು ಧರ್ಣಮ್ಮ ಅವರ ಸಂಕಷ್ಟದ ಸ್ಥಿತಿಯನ್ನು ಗಮನಿಸಿ ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ಕೆ ತೊಡಗಿಸಿಕೊಂಡರು.
ಏಪ್ರಿಲ್ ನಲ್ಲಿ ಯುಗಾದಿಯ ಸಂದರ್ಭ ಕುಟುಂಬ ತಂಡ ನೆಟ್ಲ ದೇವಸ್ಥಾನದ ಶುಚಿತ್ವ ಸಹಿತ ಹಲವು ಕಾರ್ಯಗಳನ್ನು ನಿಸ್ವಾರ್ಥವಾಗಿ ನಡೆಸುವ ಮಹದುದ್ದೇಶದಿಂದ ಆರಂಭಗೊಂಡಿದೆ. ಕುಸಿದು ಬೀಳುವ ಧರ್ಣಮ್ಮಜ್ಜಿ ಮನೆಗೆ ಹೊಸ ಮಾಡು, ಜಗಲಿ, ಬಾಗಿಲು, ಟಾಯ್ಲೆಟ್, ಬಾತ್ ರೂಮ್ ನಿರ್ಮಿಸಿಕೊಂಡುವ ಸಂಕಲ್ಪ ಕೈಗೊಂಡಿರುವ ಕುಟುಂಬ ಸದಸ್ಯರು ದಾನಿಗಳ ನೆರವು ಕೋರಿದ್ದಾರೆ. ಮುಂದಿನ ಯುಗಾದಿಗೆ ಧರ್ಣಮ್ಮ ಅವರ ಮನೆ ಹೊಸ ಲುಕ್ ನಿಂದ ಕಂಗೊಳಿಸಲಿದೆ.ಯುಗಾದಿಗೆ ಧರ್ಣಮ್ಮಜ್ಜಿ ಅವರ ಮನೆಯನ್ನು ಪುನರ್ನಿಮಿಸಿ, ಗೃಹಪ್ರವೇಶ ಮಾಡಿಸಬೇಕು ಎಂಬ ಸಂಕಲ್ಪ ನಮಗಿದೆ ಎಂದು ತಂಡದ ಅಧ್ಯಕ್ಷ ಧನಂಜಯ ಗುಂಡಿಮಜಲು ಹೇಳುತ್ತಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ