ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಕುರ ವಾರ್ಷಿಕ ಬೇಸಗೆ ಶಿಬಿರವನ್ನು ಮೊಳಕೆ ಬಂದ ಕಾಳುಗಳಿದ್ದ ಪಾತ್ರೆಯ ಮುಚ್ಚಳ ತೆರೆಯುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಲಾಯಿತು.
ಉದ್ಘಾಟನೆ ನೆರವೇರಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಮಾತನಾಡಿ, ಇತರ ಶಾಲೆಯಲ್ಲಿ ಸಿಗುವಂತಹುದು ಕೇವಲ ಔಪಚಾರಿಕ ಶಿಕ್ಷಣವಾಗಿದೆ. ನಿಮ್ಮ ಜೀವನ ಉನ್ನತಕ್ಕೆ ಒಯ್ಯುವ ಶಿಕ್ಷಣ ಇಲ್ಲಿ ದೊರೆಯುತ್ತದೆ. ಉನ್ನತ ಸ್ಥಾನಮಾನ ಅಂದರೆ ಅವನಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮುವುದು. ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಇವರ ಔದಾರ್‍ಯ, ಸಂಸ್ಕಾರ , ಒಳ್ಳೆಯ ಸದ್ಗುಣ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸಿದೆ. ಅದಕ್ಕೆ ಇಂತಹ ಬೇಸಿಗೆ ಶಿಬಿರ ಪ್ರೇರಣೆಯಾಗಲಿ, ಒಳ್ಳೆಯ ವಿದ್ಯಾರ್ಥಿಗಳಾಗಿ, ಶಾಲೆಗೆ, ದೇಶಕ್ಕೆ ಕೀರ್ತಿ ತನ್ನಿ ಎಂದರು.
ನೀರು ಮತ್ತು ಗಾಳಿಯ ಸ್ಪರ್ಶವಾಗಿ ಮೊಳಕೆಯೊಡೆದ ಬೀಜಕ್ಕೆ ಸೂರ್‍ಯರಶ್ಮಿ ಬಿದ್ದಾಗ ಒಂದೊಳ್ಳೆ ಗಿಡವಾಗಿ ಹೇಗೆ ಪರಿಸರದಲ್ಲಿ ಬೆಳೆಯುತ್ತದೋ ಅದೇ ರೀತಿ ಮಕ್ಕಳಲ್ಲಿರುವ ಸುಪ್ತಪ್ರತಿಭೆ ನಮ್ಮ ಅಂಕುರ ಬೇಸಿಗೆ ಶಿಬಿರದ ಮೂಲಕ ಅನಾವರಣಗೊಳ್ಳಬೇಕೆಂಬುದು ಈ ಬೇಸಿಗೆ ಶಿಬಿರದ ಉದ್ದೇಶ. ಇದು ಸರಿಯಾಗಿ ಸಾಕಾರಗೊಳ್ಳಲಿ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಶುಭ ಹಾರೈಸಿದರು.
ಕಾರ್ತಿಕ್ ಪ್ರೇರಣಾ ಗೀತೆ ಹಾಡಿದರು. ಶಿಕ್ಷಕಿಯರಾದ ರೇಷ್ಮಾ ನಿರೂಪಿಸಿ, ರೇಣುಕಾ ಸ್ವಾಗತಿಸಿದರು. ಶೈನಿ ವಂದಿಸಿದರು