ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಒಡಿಯೂರು: ತುಳುನಾಡಿನಲ್ಲಿ ತುಳುವನ್ನು ಹುಡುಕಬೇಕಾದ ಪರಿಸ್ಥಿತಿ ಬರಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಗುರುವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ತುಳುನಾಡ್ದ ಜಾತ್ರೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಯನ, ಪಠ್ಯಕಲಿಕೆಯ ಮೂಲಕ ತುಳುವನ್ನು ಬೆಳೆಸಬೇಕು. ಸಂಸ್ಕಾರದ ಮೂಲಕ ನಿರಂತರ ಸಂಸ್ಕೃತಿ ಹರಿಯುತ್ತದೆ. ಸಾಹಿತ್ಯ ಸಹಿಸುವುದಕ್ಕೆ ಸಾಧ್ಯವಾಗಬೇಕು. ಸಾಹಿತ್ಯ ಸಮಾಜಮುಖಿಯಾದಾಗ ಪರಿವರ್ತನೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ ಮಹಿಳೆಯರಿಗೆ ತುಳುನಾಡಿನಲ್ಲಿ ವಿಶೇಷ ಸ್ಥಾನವಿದೆ. ಆದರೆ ತುಳು ಭಾಷೆ ಹೇಗೆ ಉಳಿಯುತ್ತದೆ ಎಂಬುದೂ ಚಿಂತನಾರ್ಹ. ಎಲ್ಲರೂ ಆಂಗ್ಲ ಮಾಧ್ಯಮ ಶಿಕ್ಷಣ ಕಲಿಯುತ್ತಿದ್ದಾರೆ. ಇಂದು ಸಂದಿಗ್ಧ ಕಾಲ. ಭಾಷೆ ಅಳಿದರೆ ಸಂಸ್ಕೃತಿಯ ಅಳಿವು ಎಂದರು. ತುಳುನಾಡ ಶ್ರದ್ದಾಕೇಂದ್ರಗಳ ಆರಾಧನೆಯ ಬಗ್ಗೆ ಅವಹೇಳನಕ್ಕೆ ಅವಕಾಶ ನೀಡಬಾರದು. ದೈವರಾಧನೆಯ ಬಗ್ಗೆ ಶ್ರದ್ಧೆ, ನಂಬಿಕೆ ಬೆಳೆಯುವಂತಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಮಾತನಾಡಿ ಜಿಲ್ಲೆಯ 45 ಶಾಲೆಗಳಲ್ಲಿ ತುಳುವನ್ನು ಕಲಿಸುವ ಕಾರ್ಯ ಮಾಡಲಾಗುತ್ತಿದೆ. ತುಳು ವಿಷಯದಲ್ಲಿ 660 ವಿದ್ಯಾರ್ಥಿಗಳು ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮುಂದಿನ ವರ್ಷ 22 ವಿದ್ಯಾರ್ಥಿಗಳು ಎಂ ಎ ಪದವಿ ಪಡೆಯುತ್ತಿರುವುದು ತುಳುವಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಸಾಧ್ವಿ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಉಗ್ಗಪ್ಪ ಪೂಜಾರಿ ಅವರ ಅಜ್ಜೆ ನಡಿನ ಗೋಲಿದ ಮರ ಪುಸ್ತಕ ಹಾಗೂ ಪೂವರಿ ತುಳು ಪತ್ರಿಕೆಯ 50ನೇ ಸಂಚಿಕೆಯ ಬಿಡುಗಡೆ ಮಾಡಲಾಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಸೀತಾರಾಮ ರೈ ಸವಣೂರು ಉಪಸ್ಥಿತರಿದ್ದರು. ರೇಣುಕಾ ಎಸ್. ರೈ ಒಡಿಯೂರು ಪ್ರಾರ್ಥಿಸಿದರು. ಒಡಿಯೂರು ತುಳುಕೂಟದ ಸ್ಥಾಪಕ ಅಧ್ಯಕ್ಷ ಮಲಾರ್ ಜಯರಾಮ ರೈ ಸ್ವಾಗತಿಸಿದರು. ತುಳು ಕಾರ್ಯಕ್ರಮ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ವಂದಿಸಿದರು. ಪ್ರದೀಪ್ ಆಳ್ವ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.