ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಉಪಾಧ್ಯಕ್ಷ, ಶೈಖುನಾ ಅಲ್‌ಹಾಜಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್- ಮಿತ್ತಬೈಲ್ ಉಸ್ತಾದ್ ಮಂಗಳವಾರ ರಾತ್ರಿ ಬಿ.ಸಿ.ರೋಡಿನ ಮಿತ್ತಬೈಲು ಸ್ವಗೃಹದಲ್ಲಿ ವಿಧಿವಶರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ಮುಖಂಡರಾಗಿರುವ ಜಬ್ಬಾರ್ ಉಸ್ತಾದ್ ಅವರು, ಲಕ್ಷ ದ್ವೀಪದ ಕಿಲ್ತಾನ್‌ನವರು. ಉಸ್ತಾದ್ ಅವರ ಬಳಿ ಜ್ಞಾನಾರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ಹಲವು ಉನ್ನತ ಕಾಲೇಜುಗಳಲ್ಲಿ ಬಿರುದು ಪಡೆದು, ಕರ್ನಾಟಕ, ಕೇರಳ, ತಮಿಳುನಾಡು, ಲಕ್ಷದ್ವೀಪ ಹಾಗೂ ವಿವಿಧ ರಾಜ್ಯಗಳಲ್ಲಿ ಮುದರ್ರಿಸರಾಗಿ, ಖಾಝಿಯಾಗಿ, ಖತೀಬರಾಗಿ, ಮುಅಲ್ಲಿಮರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು, ಕಳೆದ ಹಲವು ವರ್ಷಗಳಿಂದ ಬಿ.ಸಿ.ರೋಡ್ ಮಿತ್ತಬೈಲ್ ಜುಮಾ ಮಸೀದಿಯಲ್ಲಿ ಮುದರ್ರಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಿತ್ತಬೈಲ್ ಸಮೀಪದ ಶಾಂತಿಯಂಗಡಿ ಎಂಬಲ್ಲಿನ ಮನೆಯಲ್ಲಿ ತಮ್ಮ ಕುಟುಂಬ ಸಹಿತ ವಾಸವಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯದ ಮಧ್ಯೆಯೂ ಧಾರ್ಮಿಕ ಕಾರ್ಯಕ್ರಮ, ಪ್ರವಾಸದಲ್ಲಿ ತೊಡಗಿಕೊಂಡಿದ್ದರು.
ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಉಸ್ತಾದರು ಸರಳ ಜೀವನ ನಡೆಸಿ, ಆದರ್ಶ ಪ್ರಾಯರಾಗಿದ್ದರು. ದೇಶ, ವಿದೇಶದಾದ್ಯಂತ ಅಪಾರ ಶಿಷ್ಯ ವರ್ಗ ಹೊಂದಿರುವ ಉಸ್ತಾದರು, ಎಲ್ಲ ಧರ್ಮ, ಜಾತಿಯ ಬಾಂಧವರೊಂದಿಗೆ ಸಹೋದರತೆಯ ಭಾವನೆ ಬೆಳೆಸಿಕೊಂಡವರು.
ಜನಸ್ತೋಮ:
ಉಸ್ತಾದರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾತ್ರಿಯಿಂದಲೇ ಅವರ ಶಿಷ್ಯರು, ಅಭಿಮಾನಿಗಳು ಬಿ.ಸಿ.ರೋಡಿನ ಕೈಕಂಬದಲ್ಲಿ ಜಮಾಯಿಸತೊಡಗಿದ್ದು, ಟೋಲ್ ಗೇಟ್ ವರೆಗೂ ವಾಹನದಟ್ಟಣೆ ಇತ್ತು.
ಸಂತಾಪ:
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ತಾ ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಮುನೀಶ್ ಅಲಿ, ಜೆಡಿಎಸ್ ಪ್ರಮುಖ ಪಿ.ಎ.ರಹೀಂ. ಸಹಿತ ಹಲವರು ಉಸ್ತಾದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.