ಯಕ್ಷಗಾನ ಹಿಮ್ಮೇಳ ಶಿಕ್ಷಣ ನೀಡುತ್ತಿರುವ ಹಿರಿಯ ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಧಾರವಾಡದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
1970ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ದೇ.ಜವರೇಗೌಡ ಅಧ್ಯಕ್ಷತೆಯಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಭಾಗವತ, ಮಾಂಬಾಡಿ ನಾರಾಯಣ ಭಾಗವತರನ್ನು ಸನ್ಮಾನಿಸಲಾಗಿತ್ತು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು, ಮಾಂಬಾಡಿ ಭಾಗವತರ ಪುತ್ರ. 1920ರ ಆಸುಪಾಸಿನಲ್ಲೇ ಇಸವಿಯಿಂದಲೇ ಮಾಂಬಾಡಿ ಭಾಗವತರು ತೆಂಕುತಿಟ್ಟಿನ ಹಿಮ್ಮೇಳ ಶಿಕ್ಷಣವನ್ನು ನೀಡಲು ಆರಂಭಿಸಿದ್ದರು. 1990ನೇ ಇಸವಿಯಲ್ಲಿ ಅವರು ನಿಧನಹೊಂದುವ ಕೆಲ ವರ್ಷಗಳ ಮೊದಲವರೆಗೂ ಆಸಕ್ತರಿಗೆ ಉಚಿತವಾಗಿ ತನ್ನ ಮಾಂಬಾಡಿ ಮನೆಯಲ್ಲಿ ಹಿಮ್ಮೇಳ ಶಿಕ್ಷಣ ನೀಡುತ್ತಿದ್ದರು. ಅವರ ಪುತ್ರ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು 1967ರಿಂದ ಹಿಮ್ಮೇಳ ಶಿಕ್ಷಣ ನೀಡಲು ಆರಂಭಿಸಿದ್ದರು. ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಅವರ ಶಿಷ್ಯರ ಸಮಾವೇಶ ನಡೆದಿತ್ತು. ಇಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯರ ಜೊತೆಗೆ ಮಾಂಬಾಡಿ ಭಾಗವತರ ಶಿಷ್ಯರಾದ ಪದ್ಯಾಣ ಗಣಪತಿ ಭಟ್ ಅವರೂ ಭಾಗವಹಿಸಿದ್ದು ಗಮನಾರ್ಹ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿ ತಂದೆ ಮತ್ತು ಮಗ ಇಬ್ಬರಿಗೂ ಸನ್ಮಾನಿಸಿ ಗೌರವಿಸಲಾಗಿದ್ದು, ದಾಖಲಾರ್ಹ ವಿದ್ಯಮಾನ. ವಿಶೇಷವೆಂದರೆ ಮಾಂಬಾಡಿ ನಾರಾಯಣ ಭಾಗವತರು ಸನ್ಮಾನ ಸ್ವೀಕರಿಸಿದಾಗಲೂ 70 ವರ್ಷ (1970ನೇ ಇಸ್ವಿ). ಸುಬ್ರಹ್ಮಣ್ಯ ಭಟ್ಟರೂ 70ರ ಹರೆಯಕ್ಕೆ ಕಾಲಿಡುತ್ತಿದ್ದಾರೆ.
ಮಾಂಬಾಡಿ ಭಾಗವತರ ಮನೆತನದ ಬಗ್ಗೆ ಮತ್ತಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.