for more news Click www.bantwalnews.com Editor: Harish Mambady
ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ) ಕರೆಂಕಿ ದತ್ತುಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸ.ಹಿ.ಪ್ರಾ.ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಸಮಾರಂಭ ಶನಿವಾರ ಜನವರಿ 5 ಮತ್ತು ಭಾನುವಾರ ಜನವರಿ 6ರರಂದು ಶಾಲೆಯಲ್ಲಿ ನಡೆಯಲಿದೆ.
ಇದರಲ್ಲೇನು ವಿಶೇಷ?
ಸಾಮಾಜಿಕ ಸಂಘಟನೆಯೊಂದು ಸರಕಾರಿ ಶಾಲೆಯೊಂದನ್ನು ದತ್ತು ಸ್ವೀಕರಿಸಿ, ಸಮಗ್ರವಾಗಿ ಅಭಿವೃದ್ದಿ ಪಡಿಸಿ, ಸುಸಜ್ಜಿತವಾದ ಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿ, ನಿರಂತರ ಪ್ರಯತ್ನದ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ, ಮುಚ್ಚುವ ಹಂತದಲ್ಲಿದ್ದ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಿದ್ದು ಗಮನಾರ್ಹ ಸಂಗತಿ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ವರ್ಷ 8 ಕೊಠಡಿಗಳನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿತ್ತು. ಈಗ ಮೇಲಂತಸ್ತಿನ ಸರದಿ. ಇಲ್ಲಿ 12 ಕೊಠಡಿಗಳು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಶಾಲಾ ಕಟ್ಟಡವೊಂದರ ಉದ್ಘಾಟನೆಗೆ ಕರ್ನಾಟಕದ ರಾಜ್ಯಪಾಲ ಬರುತ್ತಾರೆ ಎಂಬುದೇ ವಿಶೇಷ.
ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಪಣ ತೊಟ್ಟು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಸರಕಾರಿ ಶಾಲೆ ಉಳಿಸಿ ಬೆಳೆಸಿ -ರಾಜ್ಯ ಸಮಿತಿ ಹಾಗೂ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮುಂದಾಳತ್ವದಲ್ಲಿ ಕರ್ನಾಟಕದ ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಶನಿವಾರ ಸಂಜೆ ಉದ್ಘಾಟಿಸಲಿದ್ದಾರೆ.
ಏನೇನು ಕಾರ್ಯಕ್ರಮ?
ಶನಿವಾರ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲ, ರಾಜ್ಯಪಾಲರು ಕಟ್ಟಡ ಲೋಕಾರ್ಪಣೆ ಮಾಡಲಿದ್ದರೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸುವರು. ಇವರಲ್ಲದೆ ವಿಧಾನಪರಿಷತ್ತು ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಹೈಕೋರ್ಟ್ ನ್ಯಾಯವಾದಿ ಎಸ್. ರಾಜಶೇಖರ ಉಪಸ್ಥಿತರಿರುವರು.
ಇದರ ಜೊತೆಗೆ ಶಾಲಾ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಮಕ್ಕಳಿಂದ ಕಿರು ನಾಟಕ ಹೀಗಾದರೆ ಹೇಗೆ…? (ರಚನೆ: ಪುರುಷೋತ್ತಮ ಅಂಚನ್) ನಡೆಯಲಿದೆ.
ಸಂಜೆ 7 ಗಂಟೆಗೆ ಮಾತೃಭಾಷೆಯೊಂದಿಗೆ ಆಂಗ್ಲ ಶಿಕ್ಷಣದ ಮಹತ್ವ ಎಂಬ ಉಪನ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ನೀಡುತ್ತಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಹಿಸುವರು.
7.30ರಿಂದ ಕಲರ್‍ಸ್ ಸೂಪರ್ ಕನ್ನಡ ವಾಹಿನಿಯ ಮಜಾಭಾರತ ಖ್ಯಾತಿಯ ಕಲಾವಿದರಿಂದ ಕಾಮಿಡಿ ಹಂಟ್ಸ್ ಕಾರ್ಯಕ್ರಮ ನಡೆಯುವುದು.
ಜನವರಿ 6ರಂದು ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯುವುದು. ವಿಧಾನಪರಿಷತ್ತು ಸದಸ್ಯ ಎಸ್.ಎಲ್ ಭೋಜೇಗೌಡ ಅಧ್ಯಕ್ಷತೆ ವಹಿಸುವರು. ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಸಂಜೀವ ಮಠಂದೂರು ಸಹಿತ ಪ್ರಮುಖರು ಭಾಗವಹಿಸುವರು. ಇದಕ್ಕೂ ಮುನ್ನ ಸಂಜೆ 3ಕ್ಕೆ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ, ಸಂಜೆ 4ಕ್ಕೆ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತ ಸಾಹಿತ್ಯ ಸಂಭ್ರಮ, ರಾತ್ರಿ 8ಕ್ಕೆ ರಾತ್ರಿ ೮ಕ್ಕೆ ವೈಷ್ಣವಿ ಕಲಾವಿದೆರ್, ಕೊಯಿಲ ಇವರಿಂದ ಕುಸಲ್ದ ಗೌಜಿ ಕಾರ್ಯಕ್ರಮ ಇರಲಿದೆ.
ಹೊರೆಕಾಣಿಕೆ ಮೆರವಣಿಗೆ
ಶುಕ್ರವಾರ ಬೆಳಿಗ್ಗೆ 9ಕ್ಕೆ ಸರಿಯಾಗಿ ಮಣಿಹಳ್ಳದಿಂದ ದಡ್ಡಲಕಾಡು ವಿದ್ಯಾದೇಗುಲಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಶಾಲೆಯ ಬಗ್ಗೆ ಇನ್ನಷ್ಟು ಮಾಹಿತಿಗೆ ಕ್ಲಿಕ್ ಮಾಡಿರಿ.
https://bantwalnews.com/2018/12/22/daddalakaadu/