ಸಾಧಕರು

ಕಲಾವಿಹಾರಿ ಈಶ್ವರಯ್ಯ

  • ಹರೀಶ ಮಾಂಬಾಡಿ

ಚಿತ್ರ: ಯಜ್ಞ ಆಚಾರ್ಯ (ಯಜ್ಞ ಮಂಗಳೂರು)
ಈಶ್ವರಯ್ಯ 75ರ ಅಭಿನಂದನೆ ಸಂದರ್ಭ ತೆಗೆದ ಚಿತ್ರಗಳು.

ಹಿರಿಯ ಪತ್ರಕರ್ತ ಅನಂತಪುರ ಈಶ್ವರಯ್ಯ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ.

ಉದಯವಾಣಿ ಕಚೇರಿಗೆ ಉದ್ಯೋಗಕ್ಕೆಂದು ಸೇರಿದ ಹೊಸದು. ಟೇಬಲ್ ನಲ್ಲಿ ಕಂಪ್ಯೂಟರ್ ಗಳನ್ನು ಫಿಕ್ಸ್ ಮಾಡಲು ಎಂಜಿನಿಯರುಗಳು ಬರುತ್ತಿದ್ದ ಕಾಲವದು. ಹಿರಿಯರೊಂದಿಗೆ ಹೇಗೆ ಮಾತನಾಡುವುದು ಎಂಬ ಅಳುಕು ಇದ್ದಾಗ ಪ್ರೀತಿಯಿಂದ ಕರೆದು ಮಾತನಾಡಿಸಿದವರು ಅನಂತಪುರ ಈಶ್ವರಯ್ಯ.

ನನ್ನದು ಯಕ್ಷಗಾನದ ಮನೆತನ. ಹೀಗಾಗಿ ಮಾಂಬಾಡಿ ಎಂದ ಕೂಡಲೇ ಅಜ್ಜನ ಬಗ್ಗೆ ಪ್ರಶ್ನಿಸಿದರು ಈಶ್ವರಯ್ಯ. ಆಗ ಉದಯವಾಣಿಯ ಕಲಾವಿಹಾರದಲ್ಲಿ ಕ್ಯಾಸೆಟ್ ಕಾರ್ನರ್ ಎಂಬ ಕ್ಯಾಸೆಟ್ ಪರಿಚಯದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಒಂದಷ್ಟು ಕ್ಯಾಸೆಟ್ ಕೊಟ್ಟು, ಇದರ ಬಗ್ಗೆ ಎರಡು ಪ್ಯಾರಾ ಬರೆ, ಓದಿದ ಮೇಲೆ ಕ್ಯಾಸೆಟ್ ಮಾರಾಟವಾಗುವಂತಾಗಬೇಕು ಎಂದು ಹೇಳಿ ಬರೆಸಿ, ಅದನ್ನು ತಿದ್ದಿ ಪ್ರೋತ್ಸಾಹಿಸುತ್ತಿದ್ದ ಈ ಹಿರಿಯ ಪತ್ರಕರ್ತ, ನನ್ನಂಥ ಜ್ಯೂನಿಯರ್ ಮೋಸ್ಟ್ ನನ್ನೂ ಸಮಪ್ರಾಯದ ಗೆಳೆಯನಂತೆ ಮಾತನಾಡಿಸುತ್ತಾ, ಅದೇ ಹೊತ್ತಿನಲ್ಲಿ ಸುದ್ದಿಬರೆಹಗಳನ್ನು ಹೇಗೆ ಪ್ರಸ್ತುತಪಡಿಸುವುದು ಎಂದು ತಿಳಿಹೇಳುತ್ತಿದ್ದರು.

ಕೆಲವೊಮ್ಮೆ ಸೀಟಿ ಹಾಕುವುದಿತ್ತು. ನನಗೆ ಅದೊಂದು ಕೊಳಲುವಾದನದಂತೆ ಕೇಳುತ್ತಿತ್ತು. ಸಂಗೀತಪ್ರೇಮಿಯಾಗಿದ್ದ ಈಶ್ವರಯ್ಯನವರು ಬಿಡುವಿನ ವೇಳೆಯಲ್ಲಿ ಪೇಪರ್ ಓದುತ್ತಾ, ಸಣ್ಣದಾಗಿ ಸೀಟಿ ಹಾಕುತ್ತಿದ್ದರೆ ಸಂಗೀತ ಕಛೇರಿ.

ಮಧ್ಯಾಹ್ನ ಅವರು ಮಣಿಪಾಲದ ಹೋಟೆಲ್ ಗೆ ಊಟ ಮಾಡಲು ಹೋಗುತ್ತಿದ್ದರು. ಒಂದು ಬಾರಿ ನಾನೂ ಅಲ್ಲಿ ಊಟಕ್ಕೆ ಹೋಗಿದ್ದಾಗ ಅವರು ನನ್ನ ಬಳಿ ಹೇಳಿದ ಮಾತು ಈಗಲೂ ಅನುರಣಿಸುತ್ತದೆ.

‘’ನೋಡು, ಲೇಖನಗಳನ್ನು ಬರೆಯುವಾಗ ಓದುಗರನ್ನು ನೀವು ಹೀಗೆ ಮಾಡಿ, ಹಾಗೆ ಮಾಡಿ ಎಂದು ಉದ್ದೇಶಿಸುವುದು ಅಷ್ಟೊಂದು ಒಳ್ಳೆಯದಲ್ಲ. ನಾವು ಓದುಗರಿಗೆ ಡೈರೆಕ್ಷನ್ ಕೊಡಬಾರದು. ಸಾಮಾನ್ಯವಾಗಿ ಪತ್ರಕರ್ತರೆಂದರೆ ಬುದ್ಧಿವಂತರು, ಓದುಗರು ಶತದಡ್ಡರು ಎಂಬ ಭಾವನೆ ಹೊಂದಿರುತ್ತಾರೆ. ನೀನು ಲೇಖನಗಳನ್ನು ಬರೆಯುವುವಾಗ ಮೊದಲಾಗಿ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದದ್ದು ಅದು ‘’

ಕಚೇರಿಯಲ್ಲಿ ಟಾಪ್ ಹುದ್ದೆಯಲ್ಲಿದ್ದವರು ಆರ್ಡಿನರಿ ಸಬ್ ಎಡಿಟರ್ ಮನೆ ಕಾರ್ಯಕ್ರಮಗಳಿಗೆ ಹೋಗುವುದು ವಿರಳ. ಹತ್ತಿರವೆಲ್ಲಾದರೂ ಇದ್ದರೆ ಬಂದು ಹೋಗುತ್ತಾರೆ. ಆದರೆ ಈಶ್ವರಯ್ಯನವರು ಬಂಟ್ವಾಳಕ್ಕೆ ನನ್ನ ಮದುವೆಗೆ ಬಂದು ಪ್ರೀತಿಯಿಂದ ಆಶೀರ್ವದಿಸಿ, ಮನೆಯವರೆಲ್ಲ ಊಟ ಮಾಡಿದ ಮೇಲೆಯೇ ತೆರಳಿದ್ದರು. ಇಂಥ ಸನ್ನಿವೇಶ ಈಗಿನ ವ್ಯವಸ್ಥೆಗಳಲ್ಲಿ ಮರುಸೃಷ್ಟಿಯಾಗುವುದು ಕಷ್ಟ. ಅವರು ತುಂಬಿದ ಕೊಡ.

ನಾನು ವಿಜಯವಾಣಿಯಲ್ಲಿದ್ದಾಗ ಸೆಲೆಬ್ರಿಟಿ ಇನ್ ವಿಜಯವಾಣಿ ಎಂಬ ಪರಿಕಲ್ಪನೆಯ ಸಂವಾದ ಕಾರ್ಯಕ್ರಮಕ್ಕೆ ಈಶ್ವರಯ್ಯ ಅವರನ್ನು ಆಹ್ವಾನಿಸಿದ್ದೆವು. ಉಡುಪಿಯಿಂದ ಬಸ್ಸಿನಲ್ಲೇ ಬಂದ ಅವರು, ನಮ್ಮೊಡನೆ ಲವಲವಿಕೆಯಿಂದ ಮಾತನಾಡಿ ಊಟ ಮಾಡಿ, ಬಸ್ಸಿನಲ್ಲೇ ತೆರಳಿದ್ದರು. ಎಂಥ ಸರಳತೆ!

ಹೊಸ ಕ್ಯಾಮರಾ ಬಂದರೆ ಅದರೊಳಗೇನಿದೆ ಎಂದದು ಸಂಶೋಧಿಸುವ, ಹೊಸ ಮೊಬೈಲ್ ಬಂದರೆ ಅದನ್ನು ಖರೀದಿಸಿ, ಸದ್ಬಳಕೆ ಮಾಡುತ್ತಿದ್ದ ಈಶ್ವರಯ್ಯನವರು ಜೀವನೋತ್ಸಾಹಕ್ಕೆ ಪಕ್ಕಾ ಉದಾಹರಣೆಯಂತಿದ್ದರು.

ಇವಿಷ್ಟು ಈಶ್ವರಯ್ಯನವರ ಬಗ್ಗೆ ನನ್ನ ಪುಟ್ಟ ಅನುಭವ.

ಕಾಸರಗೋಡಿನ ಕುಂಬ್ಳೆ ಸಮೀಪದ ಅನಂತಪುರ ನಾರಾಯಣಯ್ಯ-ವೆಂಕಟಲಕ್ಷ್ಮಮ್ಮ ದಂಪತಿಯ ಪುತ್ರ ಈಶ್ವರಯ್ಯ ಸೂರಂಬೈಲು ಹಿರಿಯ ಪ್ರಾಥಮಿಕ ಶಾಲೆ, ಪೆರಡಾಲದ ನವಜೀವನ ಹೈಸ್ಕೂಲ್ ಶಿಕ್ಷಣದ ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮಂಗಳೂರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ದುಡಿದು,ಊರಿಗೆ ಬಂದರು. ಆದರೆ ಮತ್ತೆ ಉಡುಪಿಯ ಸೆಳೆತ. ಕು. ಶಿ. ಹರಿದಾಸ ಭಟ್ಟರ ಪ್ರೇರಣೆಯಿಂದ ಉದಯವಾಣಿಗೆ ಸೇರಿದ ಕೆಲ ತಿಂಗಳಲ್ಲೇ ಉದಯವಾಣಿ ಸಾಪ್ತಾಹಿಕಕ್ಕೆ ಸಂಪಾದಕರಾದರು. ಬಳಿಕ ತುಷಾರ ಸಂಪಾದಕನಾಗಿ ಓದುಗರ, ಬರಹಗಾರರ ತಂಡವನ್ನೇ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ.

ಉದಯವಾಣಿಯ ಕಲಾವಿಹಾರದಲ್ಲಿ ಸಂಗೀತ-ಕಲಾ ಕಾರ್ಯಕ್ರಮದ ವಿಮರ್ಶೆಗೂ ಅವಕಾಶ ನೀಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಫೊಟೋಗ್ರಫಿ ಪ್ರದರ್ಶನ, ಕಾರ್ಯಾಗಾರ ನಡೆಸಿದರು. ರಾಗಧನದ ಪತ್ರಿಕೆ ಸಂಪಾದಕರಾದರು. ಈಶ್ವರಯ್ಯ ಅವರಿಗೆ ರಾಜ್ಯಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟದ್ದು ತುಷಾರ ಮತ್ತು ತುಷಾರದ ಓದುಗ ವರ್ಗ. ಅವರನ್ನು ತುಷಾರಯ್ಯ ಎಂದೇ ಕರೆಯಲಾಗುತ್ತಿತ್ತು. ಅವರು ಬರೆದ ಸರಸ – ಬರೆಹಗಳನ್ನು ಕಾದು ಕುಳಿತವರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ