ಅನಂತು v/s ನುಸ್ರತ್
ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಕಡಲ ತಡಿಯಲ್ಲೂ ಈ ಹೆಸರಿನ ತಂಗಾಳಿ ಬೀಸತೊಡಗಿದೆ. ಡಾ.ರಾಜ್ ಕುಮಾರ್ ಮೊಮ್ಮಗ, (ರಾಘವೇಂದ್ರ ರಾಜ್ ಕುಮಾರ್ ಮಗ) ವಿನಯ್ ರಾಜ್ ಕುಮಾರ್ ಅವರಿಗೆ ದೊಡ್ಡ ಬ್ರೇಕ್ ಅನ್ನು ಈ ಚಿತ್ರ ನೀಡಲಿದೆ ಎಂಬುದು ಇದರ ಟ್ರೈಲರ್ ನೋಡಿದಾಗ ಗೊತ್ತಾಗುತ್ತದೆ. ಇದು ಸುಧೀರ್ ಶ್ಯಾನುಭೋಗ್ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ.
ತುಳು ಸಿನಿಮಾ ಜೊತೆಗಿನ ಒಡನಾಟ, ಹಿನ್ನೆಲೆಯನ್ನಿಟ್ಟುಕೊಂಡು ಮುಂದಡಿ ಇಟ್ಟಿರುವ ಸುಧೀರ್, ಇಲ್ಲಿ ಕಿರಿಯ ವಯಸ್ಸಿನ ಜಡ್ಜ್ ಮತ್ತು ಲಾಯರ್ ನಡುವಿನ ಪ್ರೇಮಕಹಾನಿಯನ್ನು ತೆರೆಯ ಮೇಲೆ ತರಲಿದ್ದಾರೆ.
ಅಂದ ಹಾಗೆ ಹೇಗೆ ಸುಧೀರ್ ರಾಜ್ ಕ್ಯಾಂಪ್ ಪ್ರವೇಶಿಸಿದರು?
ವಿನಯ್ ರಾಜ್ ಕುಮಾರ್ ಅವರಿಗೆ ದೊಡ್ಡ ಬ್ರೇಕ್ ಕೊಡಬೇಕು, ಸದಭಿರುಚಿಯ ನವುರಾದ ಕಥೆಯುಳ್ಳ ಚಿತ್ರವೊಂದು ಆಗಬೇಕು ಎಂಬುದು ರಾಜ್ ಕ್ಯಾಂಪ್ ಆಸೆಯಾಗಿತ್ತು. ಅದಕ್ಕಾಗಿ ಹಲವು ಸ್ಕ್ರಿಪ್ಟ್ ಗಳ ಹುಡುಕಾಟ ನಡೆಯುತ್ತಿತ್ತು. ಈ ಸಂದರ್ಭ ಸುಧೀರ್ ಶ್ಯಾನುಭೋಗ್ ಬರೆದ ಕಥೆ ಅವರ ಮನಸೆಳೆಯಿತು. ಕಡಲತಡಿ ಮಂಗಳೂರು ಸಮೀಪ ಬಂಟ್ವಾಳದ ಎಸ್.ವಿ.ಎಸ್.ಶಾಲೆ ಹಳೇ ವಿದ್ಯಾರ್ಥಿ ಸುಧೀರ್ ಮೂಲತಃ ನೆಟ್ವರ್ಕ್ ಇಂಜಿನಿಯರ್. ಆದರೆ ಸಿನಿಮಾ ಆಸಕ್ತಿ ಬೇಗನೆ ಅದರೆಡೆ ಸೆಳೆಯುವಂತೆ ಮಾಡಿತು. ಟಿ.ವಿ.ಧಾರಾವಾಹಿಗಳು ಪ್ಲಾಟ್ ಫಾರ್ಮ್ ಒದಗಿಸಿದವು. ಅವರು ಬರೆದ ಕತೆಯಾಧರಿತ ತುಳು ಸಿನಿಮಾ ಮದಿಪು ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಮತ್ತಷ್ಟು ಹುಮ್ಮಸ್ಸು ಕೊಟ್ಟಿತು. ಈ ವೇಳೆ ರಾಜ್ ಕುಟುಂಬ ಸೂಕ್ತ ಚಿತ್ರಕತೆ ಆಯ್ಕೆಯ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದದ್ದು ಸುಧೀರ್.
ಹೀಗೆ ಮಾಣಿಕ್ಯ ಪ್ರೊಡಕ್ಷನ್ ನಿರ್ಮಾಣದಲ್ಲಿ ಅನಂತು v/s ನುಸ್ರತ್ ಚಿತ್ರ ಕಥೆ ಬರೆದು ನಿರ್ದೇಶಿಸಲು ಸುಧೀರ್ ಗೆ ಹೊಣೆಗಾರಿಕೆ ದೊರಕಿತು. ತನ್ನ ಚಿತ್ರ ದ ಮೂಲಕ ಪ್ರೀತಿ ಮತ್ತು ಮಾನವೀಯ ಸಂಬಂದ ಗಳ ಜೊತೆಗೆ ಹಿಂದೂ ಮುಸ್ಲಿಂ ಸಾಮರಸ್ಯದ ಸಂದೇಶ ಕೊಡಲು ಹೊರಟಿರುವ ಈ ಉದಯೋನ್ಮುಖ ನಿರ್ದೇಶಕನ ಚಿತ್ರ ,ಕನ್ನಡ ಚಲನ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.
ವಿನಯ್ ರಾಜ್ ಕುಮಾರ್ ಅನಂತುವಾಗಿ, ಲತಾ ಹೆಗಡೆ ನುಸ್ರತ್ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಭಗವಾನ್ , ಕಾಮಿಡಿ ಕಿಲಾಡಿ ನಯನ, ನವೀನ್ ಡಿ. ಪಡೀಲ್ ಸಹಿತ ಪ್ರಮುಖರು ತಾರಾಗಣದಲ್ಲಿದ್ದಾರೆ.
ಈಗ ಚಿತ್ರದ ಟೀಸರ್ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ವಿನಯ್ ಕುಮಾರ್ ವಕೀಲ ಅನಂತ ಕೃಷ್ಣ ಕ್ರಮದಾರಿತ್ಯ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಜಡ್ಜ್ ನುಸ್ರತ್ ಪಾತಿಮಾ ಬೇಗ್ ಪಾತ್ರದಲ್ಲಿ ಲತಾ ಹೆಗಡೆ ಅಭಿನಯಿಸಿದ್ದಾರೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದು, ಚಿತ್ರದ ಟೀಸರ್ ಕೂಡಾ ಅನಂತು ಮತ್ತು ನುಸ್ರತ್ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಪಾತ್ರಗಳು ಹಾಗೂ ಘಟನೆಗಳನ್ನು ಕುತೂಹಲದಿಂದ ಜೋಡಿಸಿ ನಿರ್ದೇಶಕರು ಚಿತ್ರ ಮಾಡಿದ್ದಾರೆ.
ಮಾಣಿಕ್ಯ ಪ್ರೊಡಕ್ಷನ್ ನಡಿಯಲ್ಲಿ ತಯಾರಾಗಿರುವ ಚಿತ್ರ ಡಿ.28ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಅಭಿಷೇಕ್ ಕಾಸರಗೊಡು ಅವರ ಛಾಯಾಗ್ರಹಣವಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.