ಶಾಲೆಯು ಸಮುದಾಯದ ಆಸ್ತಿ ಇದ್ದಂತೆ. ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ ಕೇಂದ್ರಗಳಾದ ಶಾಲೆಗಳ ಬೆಳವಣಿಗೆಯು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ತಾವು ಕಲಿತ ಶಾಲೆಯನ್ನು ದೇಗುಲಗಳಂತೆ ಕಂಡು ಅದರ ಅಭಿವೃದ್ಧಿಗೆ ತೊಡಗಿರುವ ಹಲವು ಮಹನೀಯರು ನಮ್ಮೊಂದಿಗಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಮಜಿ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ದತ್ತು ಪತ್ರ ಹಸ್ತಾಂತರಿಸಿ ಮಾತನಾಡಿದರು.
ಶಾಲಾ ಹಳೆ ವಿದ್ಯಾರ್ಥಿ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಶಾಲೆಯನ್ನು ದತ್ತು ಪಡೆದರು. ತನ್ನ ಗುರುಗಳಾದ ವಿಠಲ ಶೆಟ್ಟಿ ದಂಪತಿಯವರ ಸಮ್ಮುಖದಲ್ಲಿ ಆಶೀರ್ವಾದದೊಂದಿಗೆ ದತ್ತು ಪತ್ರವನ್ನು ಸ್ವೀಕರಿಸಿದರು. ಶಾಲೆ ಹಾಗೂ ಊರವರ ಪರವಾಗಿ ಈ ಸಂದರ್ಭದಲ್ಲಿ ಅವರನ್ನ ಸನ್ಮಾನಿಸಿ ಅಭಿನಂದಿಸಿದರು.
ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಉಪಾದ್ಯಾಕ್ಷ ಅಬ್ಬಾಸ್, ಕ್ಷೇತ್ರ ಸಂಪನ್ಮೂಲ ವ್ಯಕ್ತ್ತಿ ನಾರಾಯಣ ಗೌಡ, ದ.ಕ. ಮತ್ತು ಉಡುಪಿ ಫೊಟೋಗ್ರಾಫರ್ ಸಂಘದ ಅಧ್ಯಕ್ಷರಾದ ವಿಲ್ಸನ್ ಗೋನ್ಸಾಲ್ಟಿಸ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಮಾಂಬಾಡಿ, ನಿವೃತ್ತ ಮುಖ್ಯ ಶಿಕ್ಷಕ ವಿಠಲ ಶೆಟ್ಟಿ, ನಿವೃತ್ತ ಶಿಕ್ಷಕಿ ಪ್ರೇಮ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಜೀವ ಮೂಲ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಉಪಸ್ಥಿತರಿದ್ದರು.
ಶಾಲೆಗಾಗಿ ಸಹಕರಿಸಿದ ಸುಮಾರು 30 ಜನರನ್ನು ಅಭಿನಂದಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಸಿಸಿಲಿಯಾ ಹಾಗೂ ಶಕುಂತಳಾ ರವರು ಬಹುಮಾನದ ಪಟ್ಟಿ ವಾಚಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಶಿಕ್ಷಕಿಯರಾದ ಜ್ಯೋತಿ ನಳಿನಾಕ್ಷಿ, ನಿಶ್ಮಿತಾ ಹಾಗೂ ಜಯಲಕ್ಷ್ಮೀ ಸಹಕರಿಸಿದರು.