ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಅವಧಿಗೆ ಮುಂದುವರಿಯಬೇಕು ಎಂಬುದು ಬಿಜೆಪಿ ಮತ್ತು ಮೋದಿ ಅಭಿಮಾನಿಗಳ ಆಸೆ. ಇದಕ್ಕೆ ಹಲವು ರೀತಿಯಲ್ಲಿ ಹರಕೆ ಹೊತ್ತುಕೊಳ್ಳುವವರು ಇದ್ದಾಋಎ. ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮೈರ ಎಂಬಲ್ಲಿನ ಶ್ರೀರಾಮಾಂಜನೇಯ ಗೆಳೆಯರ ಬಳಗ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ರುದ್ರಯಾಗ ಆಯೋಜಿಸಿದೆ.
ಮೈರ ಎಂಬಲ್ಲಿನ ಶ್ರೀರಾಮಾಂಜನೇಯ ಗೆಳೆಯರ ಬಳಗ ಗೆಳೆಯರ ಬಳಗದ ನಾಲ್ಕನೇ ವರ್ಷದ ಶ್ರೀ ರಾಮಾಂಜನೇಯ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಬುಧವಾರ ಡಿ.5ರಂದು ವೇ.ಮೂ. ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಯಾಗ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮಗದೊಮ್ಮೆ ಭಾರತದ ಪುನರುತ್ಥಾನಕ್ಕೆ ಪ್ರಧಾನಿ ಗದ್ದುಗೆಯನ್ನು ಅಲಂಕರಿಸಿ, ವಿಶ್ವನಾಯಕನಾಗಲು ವಿಶ್ವನಾಥನ ಅನುಗ್ರಹಕ್ಕೋಸ್ಕರ ಲೋಕಕಲ್ಯಾಣವಾಗುವ ಸದುದ್ದೇಶದಿಂದ ರುದ್ರಯಾಗ ಮತ್ತು ಧಾರ್ಮಿಕ ಸಭೆಯನ್ನು ಮೈರ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆಸಲಾಗುವುದು ಎಂಬ ಮಾಹಿತಿಯನ್ನು ಆಯೋಜಕರು ನೀಡಿದ್ದಾರೆ.
ಬೆಳಗ್ಗೆ 5ರಿಂದ ಭಜನೆ ಆರಂಭಗೊಳ್ಳುತ್ತದೆ. 7ರಿಂದ ರುದ್ರಯಾಗ ಆರಂಭವಾಗುವುದು. 11.30ಕ್ಕೆ ಪೂರ್ಣಾಹುತಿ ಜರಗಲಿದ್ದು, ಬಳಿಕ ಧಾರ್ಮಿಕ ಸಭೆ ನಡೆಯುವುದು. ಸಂಸದ ನಳಿನ್ ಕುಮಾರ್ ಕಟೀಲ್ ಧಾರ್ಮಿಕ ಸಭೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು. ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ದಿಕ್ಸೂಚಿ ಭಾಷಣ ಮಾಡುವರು. ಕ್ಷೇತ್ರ ಬಿಜೆಪಿ ಅಧ್ಯಕ್ಷದೇವದಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೇಶ ಶೆಟ್ಟಿ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮಂಗಳೂರಿನ ಉದ್ಯಮಿ ಪ್ರಮೋದ್ ಕುಮಾರ್ ಕುರುವರಗೋಳಿ, ಎಪಿಎಂಸಿ ಸದಸ್ಯ ಹರಿಶ್ಚಂದ್ರ ಪೂಜಾರಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಸಾಲ್ಯಾನ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ ಬಜ ಭಾಗವಹಿಸುವರು. ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ 610 ಅಂಕ ಗಳಿಸಿದ ಪ್ರಿಯಾಂಕ ಮಾಮಾಯಿ ಅವರನ್ನು ಅಭಿನಂದಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.