ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಸ್ವರ್ಣೋದ್ಯಮಿ ವಿಶ್ವನಾಥ್ ಬಂಟ್ವಾಳ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಶುದ್ಧೀಕರಣ ವೇದಿಕೆಯ ವತಿಯಿಂದ ಕನ್ನಡ ಸಿರಿ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದ 52 ಗಡಿಪ್ರದೇಶಗಳಲ್ಲಿ ಕನ್ನಡಿಗರ ಸ್ವಾಭಿಮಾನದ ಕನ್ನಡಾಂಬ ಜಾಗೃತಿ ಜ್ಯೋತಿಯಾತ್ರೋತ್ಸವ-೨೦೧೮ರ ಪ್ರಯುಕ್ತ ಕೊಡಮಾಡುವ ಪ್ರಶಸ್ತಿ ಇದು. ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ, ಪರಂಪರೆಗೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಕರ್ನಾಟಕ ಶುದ್ಧೀಕರಣ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಎಚ್.ಕೃಷ್ಣಪ್ಪ ಗುಣಸಾಗರ್, ಪ್ರಧಾನ ಕಾರ್ಯದರ್ಶಿ ಶಿವರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವನಾಥ್ ಅವರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಮತ್ತು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.