ಬಂಟ್ವಾಳ

ಬಂಟ್ವಾಳದ ಇಂದಿರಾ ಕ್ಯಾಂಟೀನ್ ಗೆ ಕೊನೆಗೂ ಉದ್ಘಾಟನೆ ಭಾಗ್ಯ

ಕೊನೆಗೂ ಬಂಟ್ವಾಳದ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಗೆ ಉದ್ಘಾಟನೆ ಭಾಗ್ಯ ದೊರಕಿದೆ. ಕಳೆದೊಂದು ತಿಂಗಳಿಂದ ಕ್ಯಾಂಟೀನ್ ವಿವಾದದ ಕೇಂದ್ರಬಿಂದುವಾಗಿ ಹಾಲಿ, ಮಾಜಿ ಶಾಸಕರ ನಡುವೆ ಪರೋಕ್ಷ ಸಂಘರ್ಷಕ್ಕೆ ವೇದಿಕೆಯಾಗಿತ್ತು.

25ರಂದು ಭಾನುವಾರ ಬೆಳಗ್ಗೆ 11.30ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಮತ್ತು ಪುರಸಭೆ ಬಂಟ್ವಾಳ ಆಯೋಜನೆಯಲ್ಲಿ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ಸಮಾರಂಭ ಮತ್ತು ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಪ್ರಕಟಣೆ ನೀಡಿದ್ದಾರೆ.

ಜಾಹೀರಾತು

ಕಂದಾಯ ಮತ್ತು ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಕ್ಕುಪತ್ರ ವಿತರಿಸಲಿದ್ದಾರೆ. ನಗರಾಭಿವೃದ್ಧಿ, ವಸತಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಸಭೆ ಸದಸ್ಯರಾದ ಸಂಜೀವ ಮಠಂದೂರು, ವಿಧಾನಪರಿಷತ್ತು ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಐವನ್ ಡಿಸೋಜ, ಕೆ.ಪ್ರತಾಪಚಂದ್ರ ಶೆಟ್ಟಿ, ಬಿ.ಎಂ.ಫಾರೂಕ್, ಹರೀಶ್ ಕುಮಾರ್, ಆಯನೂರು ಮಂಜುನಾಥ, ಎಸ್.ಎಲ್.ಭೋಜೇಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರು ಮಹಮ್ಮದ್, ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಭಾಗವಹಿಸುವರು. ದ.ಕ.ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್.ರವಿಕಾಂತೇಗೌಡ ಉಪಸ್ಥಿತರಿರುವರು ಎಂದು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ವಿವಾದದ ಬಿಂದು:

ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುವ ಸಂದರ್ಭವೇ ಇದು ಪ್ಲ್ಯಾನ್ ಪ್ರಕಾರ ಆಗಿಲ್ಲ ಎಂದು ನಾಗರಿಕರು ದೂರಿದ್ದರೆ, ಕಂಪೌಂಡ್ ನಿರ್ಮಿಸುವ ವೇಳೆ ರಸ್ತೆಯನ್ನು ಅತಿಕ್ರಮಿಸಲಾಗಿದೆ ಎಂದು ಸ್ಥಳೀಯ ಪುರಸಭೆ ಸದಸ್ಯ ಎ.ಗೋವಿಂದ ಪ್ರಭು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಅವರಿಗೆ ಸಾಥ್ ನೀಡಿದ ಶಾಸಕ ರಾಜೇಶ್ ನಾಯ್ಕ್, ರಸ್ತೆಯನ್ನು ಅತಿಕ್ರಮಿಸಿ ಕಂಪೌಂಡ್ ನಿರ್ಮಿಸುವುದನ್ನು ವಿರೋಧಿಸಿದ್ದರು. ಅದೇ ದಿನ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ, ಕಂಪೌಂಡ್ ನಿರ್ಮಿಸಿದರೆ ಏನು ತೊಂದರೆ ಎಂದು ಪ್ರಶ್ನಿಸಿದ್ದರು. ಬಳಿಕ ಪೊಲೀಸ್ ಮಧ್ಯಪ್ರವೇಶದಿಂದ ಪ್ರತಿಭಟನಾ ಕಾವು ತಣ್ಣಗಾಯಿತು.

ಜಾಹೀರಾತು

ಅದಾದ ಕೆಲ ದಿನಗಳಲ್ಲಿ ಮಂಗಳೂರಿನಲ್ಲಿ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಬಳಿಕ ಕಂಪೌಂಡ್ ನಿರ್ಮಿಸುವ ಬದಲು ಸರಳು ಹಾಕುವುದೆಂದು ತೀರ್ಮಾನಿಸಲಾಯಿತು. ಇದೀಗ ಸರಳು ಹಾಕುವುದರ ಮೂಲಕ ಆವರಣ ನಿರ್ಮಿಸಲಾಗುತ್ತಿದ್ದು, ಭಾನುವಾರ ವೇಳೆ ಉದ್ಘಾಟನೆಗೆ ಬಿಸಿಬಿಸಿ ಉಪಾಹಾರ ನೀಡಲು ಸಿದ್ಧತೆಗಳು ನಡೆಯುತ್ತಿವೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ