ದೇವಸ್ಥಾನಗಳು ಸಮಾಜ ಸುಧಾರಣೆ ಮಾಡುವ ಕೇಂದ್ರಗಳಾಗಿ ರೂಪುಗಳ್ಳಬೇಕಾಗಿದೆ, ಸಮಾಜಕ್ಕೆ ತೊಂದರೆಯಾದಗ ರಕ್ಷಣೆ ಮಾಡುವ ಕಾರ್ಯಗಳನ್ನು ದೇವಸ್ಥಾನಗಳು ಮಾಡ ಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ನಂದಾದೀಪ ಸಭಾಂಗಣದಲ್ಲಿ 38 ನೇ ವರ್ಷದ ಸತ್ಯ ನಾರಾಯಣ ಪೂಜಾ ಮಹೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಜ್ಞಾನ ಮಂದಿರದ ಕೆಲಸ ನಡೆಯುತ್ತಿದ್ದು ಈ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗಳು ಕೂಡ ಅಭಿವೃದ್ದಿಗೊಂಡಿವೆ. ಪ್ರವಾಸೋದ್ಯಮ ಇಲಾಖೆಯಿಂದ ನೇತ್ರಾವತಿ ಕಿನಾರೆಯ ಮೂಲಕ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದರು.
ತನ್ನ ಶಾಸಕ ಅವಧಿಯಲ್ಲಿ ಸಿಎಸ್‌ಆರ್ ಫಂಡ್ ನಲ್ಲಿ ಅತ್ಯಧಿಕ ಅನುದಾನ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ. ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವ ಮೂಲಕ ನುಡಿದಂತೆ ನಡೆದಿದ್ದೇನೆ. ಎ ಗ್ರೇಡ್ ದೇವಸ್ಥಾನಗಳ ಹಣವನ್ನು ಸಿ ಗ್ರೇಡ್ ದೇವಸ್ಥಾನಗಳಿಗೆ ನೀಡುವ ಮೂಲಕ ಬಡ ದೇವಸ್ಥಾನಗಳ ಅಭಿವೃದ್ದಿಗೆ ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷ ಅನಂತಕೃಷ್ಣ, ಧಾರ್ಮಿಕ ಸಂಘಟಕ, ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಚ್.ಪೂವಪ್ಪ ಸಪಲಿಗ, ನಾಗಸ್ವರ ವಾದಕ ಚಂದ್ರನಾಥ ಜೋಗಿ ಸಜಿಪ, ಪಣೋಲಿಬೈಲ್ ಕ್ಷೇತ್ರದ ಮುಖ್ಯ ಪರಿಚಾರಕ ಬಾಬು ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ನಸೀಮಾ ಬೇಗಂ, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಶರೀಫ್ ವೇದಿಕೆಯಲ್ಲಿದ್ದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ ಸ್ವಾಗತಿಸಿ ಪ್ರಸ್ತಾವಿಸಿದರು. ಗಂಗಾಧರ ಭಟ್ ಕೊಳಕೆ ಕಾರ್ಯಕ್ರಮ ನಿರೂಪಿಸಿದರು.