ಪ್ರಮುಖ ಸುದ್ದಿಗಳು

ಸೋಲಿಲ್ಲದ ಸರದಾರ ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ

ಅವರ ಕುರಿತು ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಏನು ಹೇಳಿದ್ದಾರೆ ಇಲ್ಲಿ ಓದಿರಿ…

 

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವ, ಪ್ರಧಾನಿಯ ಪರಮಾಪ್ತರಲ್ಲೊಬ್ಬರಾದ ಬಿಜೆಪಿಯ ಹಿರಿಯ ನಾಯಕ ಅನಂತ ಕುಮಾರ್ ಇನ್ನಿಲ್ಲ. . 1996 ರಿಂದ 1998, 1999, 2004, 2009, 2014…. ಹೀಗೆ 6 ಬಾರಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಅನಂತ್ ಸೋಲಿಲ್ಲದ ಸರದಾರನೆಂದೇ ಪ್ರಸಿದ್ಧ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನಂತ ಕುಮಾರ್​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

ತೀವ್ರ ಅನಾರೋಗ್ಯದ ಕಾರಣದಿಂದಾಗಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ.

1979ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಧುಮುಕಿದ್ದ ಅನಂತ ಕುಮಾರ್, 1987ರಲ್ಲಿ ಬಿಜೆಪಿ ಪ್ರವೇಶಿಸಿದ್ದರು. ಅರ್ಥಶಾಸ್ತ್ರ ಮತ್ತು ಇಂಗ್ಲೀಷ್ ಸಾಹಿತ್ಯ ವಿಷಯದಲ್ಲಿ ಸ್ನಾತಕ ಮಟ್ಟದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದ ಅನಂತಕುಮಾರ್, 1982ರಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಕ್ಯಾಂಪಸ್ ಉಳಿಸಿ ಆಂದೋಳನದ ನಾಯಕತ್ವ ವಹಿಸಿದರು. 1983ರಲ್ಲಿ ಅಸ್ಸಾಂ ರಕ್ಷಿಸಿ ಆಂದೋಲನದ ರಾಜ್ಯ ಸಂಯೋಜಕರಾದರು. 1984ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬರ ಪರಿಹಾರ ಸಮಿತಿಯ ರಾಜ್ಯ ಸಂಚಾಲಕ, 1985ರಲ್ಲಿ ಅಂತಾರಾಷ್ಟ್ರೀಯ ಯುವ ವರ್ಷದ ಸಂದರ್ಭದ ವಿದ್ಯಾರ್ಥಿ ಯುವ ಸಮಿತಿಯ ರಾಜ್ಯ ಸಂಚಾಲಕರಾದರು. 1982-85 ಎ.ಬಿ.ವಿ.ಪಿ ಯ ರಾಜ್ಯ ಕಾರ್ಯದರ್ಶಿ, ಅನಂತರ ಎ.ಬಿ.ವಿ.ಪಿ ಯ ರಾಷ್ಟ್ರೀಯ ಕಾರ್ಯದರ್ಶಿಯಾದರು. 1988ರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, 1995ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ, 1996ರಲ್ಲಿ ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದರು. 1998ರಲ್ಲಿ ಕೇಂದ್ರ ವಿಮಾನಯಾನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು 2014ರಲ್ಲಿ ಮೋದಿ ಸಂಪುಟದ ಪ್ರಭಾವಿ ಸಚಿವರಾದರು.

ಅನಂತಕುಮಾರ್ ಅವರ ಮೂಲ ಸ್ಥಳ ಬೆಂಗಳೂರು ಸಮೀಪದ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ. 1959ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪತ್ನಿ ತೇಜಸ್ವಿನಿ ಸಾಫ್ಟ್‌ವೇರ್ ಇಂಜಿನಿಯರ್. ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಪ್ರತಿಷ್ಠಿತ ಲಘು ಯುದ್ದವಿಮಾನ ‘ತೇಜಸ್’ (ಎಲ್‌ಸಿಎ) ಪ್ರಾಜೆಕ್ಟ್‌ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದವರು. ಅನಂತಕುಮಾರರು ತಮ್ಮ ತಾಯಿ ಗಿರಿಜಾಶಾಸ್ತ್ರಿಯವರ ನೆನಪಿನಲ್ಲಿ ಸ್ಥಾಪಿಸಿದ ’ಅದಮ್ಯ ಚೇತನ ಫೌಂಡೇಷನ್ನ ಸ್ಥಾಪಕ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಅನಂತಕುಮಾರ್-ತೇಜಸ್ವಿನಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು.

  • ಅವರ ಕುರಿತು ಬಿಜೆಪಿಯ ಹಿರಿಯ ನಾಯಕ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ.

ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು‌ ಈ ಬೆಳಗ್ಗಿನ ಜಾವ ತೀವ್ರ ಆಘಾತವಾಯಿತು. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ.‌ ಕೇಂದ್ರ ಸರಕಾರದಲ್ಲಿ ಅನ್ಯಾನ್ಯ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸಚಿವರಾಗಿದ್ದವರು ಅನಂತ ಕುಮಾರ್. 1986 ರ ಸೆಪ್ಟೆಂಬರ್ ಇರಬೇಕು, ಸಂಘದ ಕಾರ್ಯಾಲಯ ಕೇಶವ ಕೃಪದಲ್ಲಿ ಭೇಟಿಯಾಗಿ ಅನಂತ್ ಕುಮಾರ್ ಇನ್ನು ಮುಂದೆ ನಿಮ್ಮೊಡನೆ ಬಿಜೆಪಿಯಲ್ಲಿ ಕಾರ್ಯ ಮಾಡುತ್ತೇನೆ ಎಂಬ ಸುದ್ದಿ ತಿಳಿಸಿದ್ದರು.‌ ಅದಕ್ಕೆ ಮುನ್ನ ಅವರನ್ನು ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನಾಗಿ ನೋಡಿದ್ದೆ. ಅಂದಿನಿಂದ ನಮ್ಮ‌ಒಡನಾಟ.‌ ಎಷ್ಟೋ ವಿಚಾರಗಳನ್ನು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಲೇ ಚರ್ಚಿಸಿದ್ದೇವೆ.‌ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಗೂಡಿದ್ದೇವೆ. 1996 ರಿಂದ 1998, 1999, 2004, 2009, 2014…. ಹೀಗೆ 6 ಬಾರಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಅನಂತ್ ಸೋಲಿಲ್ಲದ ಸರದಾರನೆಂದೇ ಪ್ರಸಿದ್ಧ.

ಅವರಿಗಿದ್ದ ಹಾಸ್ಯಪ್ರಜ್ಞೆ, ಸೂಕ್ಷ್ಮತೆ, ರಾಜಕೀಯ ಪ್ರೌಢಿಮೆ, ಭಾಷಣಕಲೆ..ಇನ್ನು ಕೇವಲ ನೆನಪಷ್ಟೇ! ಮೊನ್ನೆ ತಾನೇ ಪಬ್ಲಿಕ್ ಟಿವಿ ರಂಗ ಹೇಳುತ್ತಿದ್ದರು. “ದೆಹಲಿಯ ಅನಂತಕುಮಾರ್ ಮನೆ ಕರ್ನಾಟಕದವರಿಗೆಲ್ಲಾ ಒಂದು ಮನೆಯಾಗಿತ್ತು.‌ ಕರ್ನಾಟಕದ ಯಾವುದೇ ಸಮಸ್ಯೆ ಪರಿಹಾರ, ಕಡತ ಪ್ರಗತಿ, ಕಾರ್ಯ ವಾಗಬೇಕಾದರೆ ಅನಂತ್ ಕಚೇರಿ ದೊಡ್ಡ ಸಾಧನವಾಗಿತ್ತು.‌ಅವರಿಗೆ ಹೇಳಿಬಿಟ್ಟರೆ ನಾವು ನಿಶ್ಚಿಂತೆಯಿಂದ ಯಿರಬಹುದಿತ್ತು” ಎಂದು.‌ದೆಹಲಿಯ ಕನ್ನಡ ಸಂಘಕ್ಕಂತೂ ಅನಂತ್ ಕುಮಾರ್ ರವರ ಸಹಕಾರ ಅನನ್ಯ.‌ 1988 ರಲ್ಲಿ ನನ್ನ‌ ಮದುವೆಯ ಪುಟ್ಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರಲ್ಲಿ ಅನಂತ್ ಕುಮಾರ್‌ ಸಹ ಒಬ್ಬರು.‌

ಕರ್ನಾಟಕ ರಾಜ್ಯದ ಬಿಜೆಪಿ ಇಂದು ಅಗ್ರಗಣ್ಯ ನಾಯಕನನ್ನು ಕಳೆದುಕೊಂಡಿದೆ.‌ ಕಳೆದ ಕೆಲವು ತಿಂಗಳಿಂದ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುದ್ದಿ ಕೇಳಿಯೇ ಅನೇಕರು ಮಾನಸಿಕವಾಗಿ ಆಘಾತಗೊಂಡಿದ್ದರು.‌ ವಿದೇಶದಿಂದ ವಾಪಸ್ಸು ಬಂದ ಮೇಲೆ ಅವರಿಗೆ ಯಾವುದೇ ಸೋಂಕು ತಗುಲದಿರಲು ನಮಗೆಲ್ಲಾ ಬಂದ “ಮನವಿ” ಯಂತೆ ನಾನು ಅವರನ್ನು ಹೋಗಿ ಕಂಡಿರಲಿಲ್ಲ. ಆದರೆ ಅವರು ಬೇಗ ಗುಣಮುಖರಾಗಿ‌ ಬೇಗ ಸಂಸದೀಯ ಖಾತೆಯನ್ನು ಈ ಮುಂಚಿನ ರೀತಿಯಲ್ಲಿಯೇ ಯಶಸ್ವಿಯಾಗಿ ನಿರ್ವಹಿಸಲಿ ಎಂದು ಹಾರೈಸಿದ್ದೆ.‌ ನಿನ್ನೆ ರಾತ್ರಿ ನಿಶ್ಚಯಿಸಿದ್ದೆ, ಕೊನೆ ಪಕ್ಷ ಅವರ ಮನೆಯವರನ್ನಾದರೂ ಇಂದು ಹೋಗಿ‌ ಮಾತನಾಡಿಸಲೇಬೇಕು ಎಂದು.‌ ಅದಕ್ಕಾಗಿ ಗೆಳೆಯ ಸುಬ್ಬಣ್ಣನವರ ಜೊತೆ ಮಾತನಾಡಿಯೂ ಇದ್ದೆ.‌ಇಂದು 11 ಗಂಟೆಗೆ ಹೋಗಿ ಎಂದು ಅವರು ಸಲಹೆ ಮಾಡಿದ್ದರು.‌

ಆ ದರೆ……………ಅನಂತ್ ಕುಮಾರ್ ನಮ್ಮೆಲ್ಲರ ನೆನಪಿನಿಂದ ಎಂದೂ‌ ಮಾಸುವುದಿಲ್ಲ. ಅವರ ಜೊತೆಗಿನ ನಮ್ಮ‌ಒಡನಾಟದ ನೆನಪು‌ ನಮಗೆಲ್ಲಾ ಸ್ಫೂರ್ತಿ ನೀಡಲಿ. ಅವರ ಆತ್ಮಕ್ಕೆ‌ ಶಾಂತಿ ಸಿಗಲಿ.‌ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ

ಸುರೇಶ್ ಕುಮಾರ್.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ