ಇಂದಿನ ವಿಶೇಷ

ಬಂಟ್ವಾಳನ್ಯೂಸ್ ಗೆ ಇಂದು ಮೂರನೇ ವರ್ಷದ ಮೊದಲ ದಿನ

ಇವತ್ತು 2018, ನವೆಂಬರ್ 10.

ನೀವೀಗ ಓದುತ್ತಿರುವ ಬಂಟ್ವಾಳನ್ಯೂಸ್ ಸುದ್ದಿಗಳನ್ನು ನೀಡಲು ಆರಂಭಿಸಿ ಎರಡು ವರ್ಷಗಳಾದವು. ತನ್ನ ಪಾಡಿಗೆ ಮೂರನೇ ವರ್ಷಕ್ಕೆ ಹೆಜ್ಜೆ ಹಾಕುತ್ತಿದೆ. ಜಗದಗಲ ಇರುವ ಬಂಟ್ವಾಳದವರು ಮೊಬೈಲ್ ಕ್ಲಿಕ್ ಮಾಡಿ ಏನಿದೆ ಸುದ್ದಿ ಎಂದು ನೋಡುವಂತೆ ಮಾಡಿದ ಮೊದಲ ವೆಬ್ ಪತ್ರಿಕೆ ನಿಮ್ಮ ಬಂಟ್ವಾಳನ್ಯೂಸ್ ಇದೊಂದು ಪ್ರಯೋಗ. ಕ್ಷಮಿಸಿ. ಎಲ್ಲವೂ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿರಲಿಕ್ಕಿಲ್ಲ. ಸುತ್ತಮುತ್ತಲಿನ ಆಯ್ದ ಪ್ರಮುಖವೆನಿಸಿದ ವಿಚಾರಗಳು, ಸುದ್ದಿ ಹಾಗೂ ಲೇಖನಗಳನ್ನಷ್ಟೇ ಈ ವೆಬ್ ಪತ್ರಿಕೆ ಒದಗಿಸುತ್ತದೆ. ಬ್ರೇಕಿಂಗ್ ನ್ಯೂಸ್ ನ ಆತುರ ಇಲ್ಲ. ಪ್ರಚೋದನಕಾರಿ ವಿಚಾರ, ಭಾಷಣ, ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಗೆ ಬಂಟ್ವಾಳನ್ಯೂಸ್ ವೇದಿಕೆಯಾಗುವುದಿಲ್ಲ. ನೀವು ಇಂಥ ರಾಜಕಾರಣಿಯ ಸುದ್ದಿ ಜಾಸ್ತಿ ಹಾಕಿ ಎಂದು ಹೇಳುವ ಆಯಾ ಪಕ್ಷಗಳ ಬೆಂಬಲಿಗರೂ ಇದ್ದಾರೆ. ಅತಿಯಾದ ನಿರೀಕ್ಷೆಯನ್ನಿಟ್ಟವರೂ ಇದ್ದಾರೆ. ಕೆಲವರಿಗೆ ನಿರಾಸೆಯೂ ಆಗಿದ್ದುಂಟು. ಏನೋ ಭಾರೀ ಬ್ರೇಕಿಂಗ್ ನ್ಯೂಸ್ ಬರುತ್ತದೆ ಎಂದು ಕಾದವರೂ ಇದ್ದಾರೆ. ಆದರೆ ಬಂಟ್ವಾಳನ್ಯೂಸ್ ತನ್ನ ಪಾಡಿಗೆ ಮುಂದುವರಿದಿದೆ. ಎರಡು ವರ್ಷಗಳಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಕ್ಲಿಕ್ ಮಾಡಿದ್ದು, ಮೂರನೇ ವರ್ಷಕ್ಕೆ ಮುಂದುವರಿಯುವಂತೆ ಮಾಡಿದೆ. ಎಲ್ಲ ಓದುಗರಿಗೂ, ಜಾಹೀರಾತುದಾರರಿಗೂ, ಸ್ನೇಹಿತರಿಗೂ, ಮಾರ್ಗದರ್ಶಕರಿಗೂ ಮನದಾಳದ ಕೃತಜ್ಞತೆ.

ಬಂಟ್ವಾಳ, ಬಿ.ಸಿ.ರೋಡ್ ಸುತ್ತಮುತ್ತಲಿನ ಹಲವು ವಿಚಾರಗಳಿಗೆ ಬಂಟ್ವಾಳನ್ಯೂಸ್ ಧ್ವನಿಯಾಗಿದೆ. ಸರ್ವೀಸ್ ರಸ್ತೆ, ತ್ಯಾಜ್ಯ, ರೈಲ್ವೆ, ನೀರು ಹೀಗೆ ಮೂಲಸೌಕರ್ಯಗಳಿಗೆ ತೊಂದರೆಯಾದಾಗ ಬಂಟ್ವಾಳನ್ಯೂಸ್ ಆಡಳಿತವನ್ನು ಎಚ್ಚರಿಸಿದ್ದು, ಅದಕ್ಕೆ ಸ್ಪಂದನೆಯೂ ದೊರಕಿದೆ ಎಂಬುದು ಈ ಎರಡು ವರ್ಷಗಳ ಬರಹಗಳ ಸಾಧನೆ. ಹಲವು ಹೊಸತನಗಳಿಗೆ ಬಂಟ್ವಾಳನ್ಯೂಸ್ ಸಾಕ್ಷಿಯಾಗಿದೆ.

ಸ್ಥಳೀಯ ಸುದ್ದಿಗಳನ್ನು ನೀಡುವ ಪಾಕ್ಷಿಕ, ವಾರಪತ್ರಿಕೆಗಳು ಇಲ್ಲಿದ್ದಾಗ ಅವುಗಳಿಗೆ ಪೂರಕವಾಗಿ ವೆಬ್ ಪತ್ರಿಕೆಯೊಂದನ್ನು ಆರಂಭಿಸುವ ಚಿಂತನೆ ನಡೆಸಿದಾಗ ನನಗೆ ಸಾಥ್ ನೀಡಿದವರು ಬಂಟ್ವಾಳ, ವಿಟ್ಲದ ಮಾಧ್ಯಮ ಮಿತ್ರರು. ಬಂಟ್ವಾಳ ತಾಲೂಕಿನ ಆಯ್ದ ಪ್ರಮುಖ ಸುದ್ದಿಗಳೊಂದಿಗೆ ವೈವಿಧ್ಯಮಯ ಲೇಖನಗಳನ್ನು ಒದಗಿಸುವ ಯೋಚನೆ ಮೂಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಹಿರಿ, ಕಿರಿಯ ಸ್ನೇಹಿತರು.

18 ವರ್ಷಗಳ ಮುದ್ರಣ ಮಾಧ್ಯಮ ಹಿನ್ನೆಲೆ ಇದ್ದ ನನ್ನಂತೆ ಎಲ್ಲ ಪತ್ರಕರ್ತರ ಒಳಮನಸ್ಸಿನಲ್ಲೂ ಸ್ವಂತ ಪತ್ರಿಕೆ ಮಾಡುವ ಸಣ್ಣ ಆಸೆ ಇದ್ದೇ ಇರುತ್ತದೆ. ಆದರೆ ಪತ್ರಿಕೆ ಮಾಡುವುದು ಸುಲಭವೇನಲ್ಲ. ಪತ್ರಕರ್ತನೊಬ್ಬ ಪತ್ರಿಕೆ ನಡೆಸಿದರೆ ಕೈಸುಟ್ಟುಕೊಳ್ಳುವುದು ಗ್ಯಾರಂಟಿ ಎಂಬ ಮಾತೂ ಪ್ರಚಲಿತ. ಬಂಟ್ವಾಳವನ್ನೇ ಕಾರ್ಯಕ್ಷೇತ್ರವಾಗಿಸಿ, ಹೊಸ ಪ್ರಯೋಗ ಮಾಡೋಣ, ಹೇಗಿದ್ದರೂ ಪ್ರಿಂಟಿಂಗ್ ಖರ್ಚಿಲ್ಲವಲ್ಲ ಎಂಬ ಧೈರ್ಯದಲ್ಲಿ ಮನೆಯವರ ಪ್ರೋತ್ಸಾಹದೊಂದಿಗೆ ವೆಬ್ ಪತ್ರಿಕೆ ಮಾಡಲು ಹೊರಟೆ.  thewebpeople.in  ನ ಆದಿತ್ಯ ಕಲ್ಲೂರಾಯ ಮತ್ತು ಟೀಮ್ ಅಂದವಾದ ವೆಬ್ ವಿನ್ಯಾಸಗೊಳಿಸಿದರು. ಲ್ಯಾಪ್ ಟಾಪ್ ಒಂದರಲ್ಲೇ ಬಂಟ್ವಾಳನ್ಯೂಸ್ ಆರಂಭಿಸಿದಾಗ ಅದಕ್ಕೆ ಚಾಲನೆ ನೀಡಿ ಆಶೀರ್ವದಿಸಿದವರು ನನ್ನ ಹೆತ್ತವರಾದ ಗೋಪಾಲಕೃಷ್ನ ಭಟ್ ಮತ್ತು ಮನೋರಮಾ. ಇಷ್ಟಕ್ಕೆಲ್ಲ ಸಾಥ್ ನೀಡಿದ್ದು ನನ್ನ ಪತ್ನಿ ಪ್ರತಿಮಾ. ಮಕ್ಕಳಾದ ವೈಷ್ಣವಿ ಮತ್ತು ಪ್ರಣವಿ. ಸಹೋದರ ಅಶೋಕ.

ಅದಾಗಲೇ ಬಂಟ್ವಾಳದಲ್ಲಿ ವಾರಪತ್ರಿಕೆ, ಪಾಕ್ಷಿಕಗಳನ್ನು ನಡೆಸುತ್ತಿದ್ದ ಸ್ನೇಹಿತರಾದ ವಿಶ್ವನಾಥ ಬಂಟ್ವಾಳ ಮತ್ತು ಪ್ರಶಾಂತ್ ಪುಂಜಾಲಕಟ್ಟೆ ಪತ್ರಿಕೋದ್ಯಮದ ಹೊಸತನಕ್ಕೆ ಮೆಚ್ಚುಗೆ ಸೂಚಿಸಿ ಮುಕ್ತಮನಸ್ಸಿನ ಬೆಂಬಲ, ಮಾರ್ಗದರ್ಶನ ನೀಡಿದರು. ಪತ್ರಕರ್ತ ಸ್ನೇಹಿತರಾದ ವೆಂಕಟೇಶ್ ಬಂಟ್ವಾಳ, ರಾಜಾ ಬಂಟ್ವಾಳ, ಉದಯಶಂಕರ ನೀರ್ಪಾಜೆ,  ಸಂದೀಪ್ ಸಾಲ್ಯಾನ್, ಮೋಹನ್ ಕೆ. ಶ್ರೀಯಾನ್, ರತ್ನದೇವ್ ಪುಂಜಾಲಕಟ್ಟೆ, ಕಿಶೋರ್ ಪೆರಾಜೆ, ಜಯಾನಂದ ಪೆರಾಜೆ,ಮಹಮ್ಮದ್ ಆಲಿ, ನಿಶಾಂತ್ ಬಿಲ್ಲಂಪದವು, ವಿಷ್ಣುಗುಪ್ತ ಪುಣಚ, ಫಾರೂಕ್ ಬಂಟ್ವಾಳ, ಲತೀಫ್ ನೇರಳಕಟ್ಟೆ,  ಚಂದ್ರಶೇಖರ ಕಲ್ಮಲೆ, ಗೋಪಾಲ ಅಂಚನ್, ವಾಮನ ಪೂಜಾರಿ, ಯಾದವ್ ಅಗ್ರಬೈಲು, ಅಬ್ದುರ್ರಹಮಾನ್ ತಲಪಾಡಿ, ಇಮ್ತಿಯಾಜ್ ಶಾ, ಮೌನೇಶ ವಿಶ್ವಕರ್ಮ, ಪಿ.ಎಂ.ಅಶ್ರಫ್, ವಿ.ಟಿ.ಪ್ರಸಾದ್ ಸಹಿತ ಬಂಟ್ವಾಳ ಮತ್ತು ವಿಟ್ಲದ ಪತ್ರಕರ್ತರಷ್ಟೇ ಅಲ್ಲ, ಜಿಲ್ಲೆಯ ಪತ್ರಕರ್ತ ಸ್ನೇಹಿತರ ಸಹಕಾರವನ್ನು ಸ್ಮರಿಸಲೇಬೇಕು.

ದಿನಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದ ಲೇಖಕಿ ಅನಿತಾ ನರೇಶ್ ಮಂಚಿ, ತುಳು ಲಿಪಿಯ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಬಿ.ತಮ್ಮಯ್ಯ, ವೈದ್ಯ ಡಾ. ರವಿಶಂಕರ್, ಲೇಖಕ ಡಾ.ಅಜಕ್ಕಳ ಗಿರೀಶ ಭಟ್ಟ ಮತ್ತು ಪತ್ರಕರ್ತ, ರಂಗಕರ್ಮಿ ಸ್ನೇಹಿತ ಮೌನೇಶ ವಿಶ್ವಕರ್ಮ ಅಂಕಣಗಳನ್ನು ನೀಡಿದರು. ಬಳಕೆದಾರರ ವೇದಿಕೆಯ ಸುಂದರ ರಾವ್, ಪ್ರೊ.ರಮಾದೇವಿ, ರಾಜಮಣಿ ರಾಮಕುಂಜ ಸಹಿತ ಹಲವು ಹಿರಿಯರು ಬೆನ್ನು ತಟ್ಟಿದರು.

ಹೀಗೆ ನವೆಂಬರ್ 10, 2016ರಂದು ಬಂಟ್ವಾಳ ತಾಲೂಕಿನದ್ದೇ ಸುದ್ದಿಗಳನ್ನು ಪ್ರತಿದಿನ ನೀಡುವ ಮೊತ್ತ ಮೊದಲ ವೆಬ್ ಸೈಟ್ ಬಂಟ್ವಾಳನ್ಯೂಸ್ ಯಾವುದೇ ಸದ್ದುಗದ್ದಲವಿಲ್ಲದೆ ಓದುಗರ ಬೆರಳತುದಿಯಲ್ಲಿ ಕಾಣಿಸಲಾರಂಭಿಸಿತು. ಹಾಕಿದ ಬಂಡವಾಳಕ್ಕೆ ಮೋಸವಾಗದಂತೆ ಜಾಹೀರಾತುಗಳು ದೊರಕಿದ ಕಾರಣ ವೆಬ್ ಮುನ್ನಡೆಸಲು ಧೈರ್ಯವೂ ಬಂತು.

ಈ ಅವಧಿಯಲ್ಲಿ ಪ್ರಸಿದ್ಧ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಪ್ರಕಟಿತ ಕೃತಿ ಲೇಖನಮಾಲೆಯಾಗಿ ಪ್ರಕಟಗೊಂಡಿತು. ಛಾಯಾಂಕಣ, ವ್ಯಂಗ್ಯನೋಟ ಕಾಲಂಗಳು ಆರಂಭಗೊಂಡವು. ಪ್ರತಿದಿನ  ಯಕ್ಷಗಾನದ ಸುದ್ದಿ ಕೊಡುವ ವಿಫಲ ಯತ್ನವೂ ಆಯಿತು. ನನ್ನ ಇತಿ ಮಿತಿಗಳಲ್ಲಿ ಈ ಎರಡು ವರ್ಷಗಳಲ್ಲಿ ನೂರಾರು ಸುದ್ದಿಗಳು ಪ್ರಕಟಗೊಂಡವು.

ಈಗ ನಿಮ್ಮ ಮುಂದಿರುವುದು ಒಂದು ಪ್ರಯೋಗವಷ್ಟೇ. ಎಲ್ಲರೊಂದಿಗೆ ಬಂಟ್ವಾಳನ್ಯೂಸ್ ಕೂಡ ಪುಟ್ಟ ಹೆಜ್ಜೆಯನ್ನಿಡುತ್ತಿದೆ. ತನ್ನ ಪಾಡಿಗೆ ತನ್ನ ಧ್ಯೇಯಗಳೊಂದಿಗೆ ಮುನ್ನಡೆಯುತ್ತಿದೆ. ಇದಕ್ಕೆ ಆರ್ಥಿಕ ಬಲ ತುಂಬಲು ಜಾಹೀರಾತುದಾರರ ಪ್ರೋತ್ಸಾಹವೂ ಬೇಕು.

ಇನ್ನು ಮತ್ತಷ್ಟು ಹೊಸತನಗಳೊಂದಿಗೆ ಬಂಟ್ವಾಳನ್ಯೂಸ್ ಮೂಡಿಬರುತ್ತದೆ. ಇಲ್ಲೇ ಭೇಟಿಯಾಗೋಣ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts